ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ: ಮೂಲ ಸೌಕರ್ಯ ವಂಚಿತ ರೈಲು ನಿಲ್ದಾಣ

ಪ್ರತ್ಯೇಕ ಶೌಚಾಲಯವಿಲ್ಲದೆ ಪರದಾಟ: ಬಸ್‌ ನಿಲ್ದಾಣದಿಂದ ಆಟೋಗಳಿಗೆ ತೆರಳಬೇಕಾದ ಪರಿಸ್ಥಿತಿ
Last Updated 18 ಮಾರ್ಚ್ 2023, 22:30 IST
ಅಕ್ಷರ ಗಾತ್ರ

ಗಂಗಾವತಿ: ಇಲ್ಲಿನ ವಿದ್ಯಾನಗರದ ಗಂಗಾವತಿ ರೈಲು ನಿಲ್ದಾಣದಲ್ಲಿ ಮೂಲ ಸೌಕರ್ಯ ಮರೀಚಿಕೆಯಾಗಿದೆ. ಬೇರೆ ಬೇರೆ ಊರು ಗಳಿಗೆ ತೆರಳುವ ಪ್ರಯಾಣಿಕರು ನಿತ್ಯ ಪರದಾಡುವಂತಾಗಿದೆ.

ಹಲವು ವರ್ಷಗಳ ಹೋರಾಟದ ಫಲವಾಗಿ 2018ರಲ್ಲಿ ಗಂಗಾವತಿ-ಹುಬ್ಬಳ್ಳಿ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿದ್ದು, ಈವರೆಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ರೈಲ್ವೆ ಇಲಾಖೆ ಹಾಗೂ ಇಲ್ಲಿನ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ ಎಂದು ಜನರು ದೂರುತ್ತಾರೆ.

ಗಂಗಾವತಿ ತಾಲ್ಲೂಕಿನಿಂದ ನಿತ್ಯ ಹುಬ್ಬಳ್ಳಿ, ಯಶವಂತಪುರಕ್ಕೆ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ನೂರಾರು ಜನ ಪ್ರಯಾಣಿಸುತ್ತಾರೆ. ಆದರಲ್ಲಿ ದೂರದ ಪ್ರಯಾಣಕ್ಕೆ ತೆರಳುವ ಪ್ರಯಾಣಿಕರು ಮುಂಗಡವಾಗಿ ಟಿಕೆಟ್‌ ಬುಕ್ ಮಾಡಲು ರಿಜರ್ವೇಶನ್ ಕೌಂಟರ್ ಇಲ್ಲ. ಆಹಾರ ಮಳಿಗೆಗಳಿಲ್ಲ.

ಅಂಗವಿಕಲರು, ವೃದ್ಧರು, ಹಿರಿಯ ನಾಗರಿಕರಿಗೆ ನಿಲ್ದಾಣದ ಮೇಲ್ಭಾಗಕ್ಕೆ ತೆರಳಲು ಲಿಫ್ಟ್ ವ್ಯವಸ್ಥೆ ಇಲ್ಲ. ಗಂಗಾವತಿ ಬಸ್ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ತೆರಳಲು ಸರಿಯಾದ ಸಮಯಕ್ಕೆ ಬಸ್‌ ವ್ಯವಸ್ಥೆ ಇಲ್ಲ. ನಿಲ್ದಾಣದಲ್ಲಿ ಕಸ ಮತ್ತು ಚರಂಡಿ ನಿರ್ವಹಣೆ ನಿಯಮಿತವಾಗಿ ನಡೆಯುತ್ತಿಲ್ಲ. ಪ್ರಯಾಣಿಕರು ಅನಿವಾರ್ಯವಾಗಿ ಹೆಚ್ಚಿನ ಹಣ ನೀಡಿ, ಆಟೋಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ.

ಕುಡಿಯುವ ನೀರಿನ ಸಮಸ್ಯೆ: ನಿಲ್ದಾಣದಲ್ಲಿ ಕುಡಿಯಲು ಶುದ್ಧ ನೀರಿಲ್ಲದೆ, ಪ್ರಯಾಣಿಕರು ನೀರಿಗಾಗಿ ಪರಿತಪಿಸುವಂಥ ಪರಿಸ್ಥಿತಿ ಇದೆ. ಪ್ಲಾಟ್‌ಫಾರಂ ಗಳಲ್ಲಿ ಹಲವು ನೀರಿನ ಕೊಳಾಯಿಗಳಿವೆ. ಅದರಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಬರುತ್ತದೆ. ಹಣ ಕೊಟ್ಟು ನೀರಿನ ಬಾಟಲಿಗಳನ್ನು ಕೊಂಡುಕೊಳ್ಳ ಬೇಕೆಂದರೆ ಮಳಿಗೆಗಳೇ ಇಲ್ಲ.

ಶೌಚಾಲಯ ಅವ್ಯವಸ್ಥೆ: ನಿಲ್ದಾಣದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ. ಒಂದು ಶೌಚಾಲಯ ಇದೆ. ಅದರಲ್ಲಿ ಒಂದೇ ಡಬ್ಬಿ ಇದೆ. ಅದರಲ್ಲಿಯೇ ಶೌಚ ಮಾಡಬೇಕಿದೆ. ಒಬ್ಬರು ಒಳ ಹೋದರೆ, ಮತ್ತೊಬ್ಬರಿಗೆ ಅವಕಾಶವಿಲ್ಲ. ನಿರ್ವಹಣೆ ಇಲ್ಲದ ಕಾರಣ ಅದೂ ಗಬ್ಬು ನಾರುತ್ತಿದ್ದು, ಮಹಿಳೆಯರಿಗೆ ತುಂಬಾ ತೊಂದರೆ ಆಗಿದೆ.

ಮುಳ್ಳು–ಕಂಟಿ ತೆರವು ಮಾಡಿ: ವಿದ್ಯಾನಗರದಿಂದ ರೈಲು ನಿಲ್ದಾಣಕ್ಕೆ ತೆರಳುವ ಸಿ.ಸಿ.ರಸ್ತೆಯ ಎರಡೂ ಬದಿಯಲ್ಲಿ ಮುಳ್ಳು–ಕಂಟಿ ಬೆಳೆದಿದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಈವರೆಗೆ ತೆರವುಗೊಳಿ ಸುವ ಕೆಲಸವಾಗಿಲ್ಲ. ಈ ಬಗ್ಗೆ ರೈಲು ನಿಲ್ದಾಣದ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯತನವೆಂದು ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT