ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ: 24 ಕುರಿ–ಮೇಕೆ ಸಾವು, 10ಕ್ಕೂ ಹೆಚ್ಚು ಅಸ್ವಸ್ಥ

ಕಾಲುವೆಗೆ ಎಸೆದಿದ್ದ ಆನೆಗೊಂದಿ ಉತ್ಸವದ ಉಳಿಕೆ ಆಹಾರ ಸೇವನೆ
Published 15 ಮಾರ್ಚ್ 2024, 15:32 IST
Last Updated 15 ಮಾರ್ಚ್ 2024, 15:32 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾಮದ ಜಮೀನಿನಲ್ಲಿ ಎಸೆದಿದ್ದ ಆನೆಗೊಂದಿ ಉತ್ಸವದ ಆಹಾರ ಸೇವಿಸಿ, 24ಕ್ಕೂ ಹೆಚ್ಚು ಕುರಿ–ಮೇಕೆಗಳು ಮೃತಪಟ್ಟು, 10ಕ್ಕೂ ಹೆಚ್ಚು ಕುರಿ–ಮೇಕೆಗಳು ಅಸ್ವಸ್ಥಗೊಂಡ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಮೃತಪಟ್ಟಿರುವ ಕುರಿಗಳು ಚಿಕ್ಕಬೆಣಕಲ್ ಗ್ರಾಮದ ತಿಮ್ಮಣ್ಣ ಭರಮಪ್ಪ ಬೀಲಕಂಠ(ಕುರಿ, ಮೇಕೆ 5), ಮಲ್ಲಾಪುರ ಮಲ್ಲಯ್ಯ(6), ಆನೆಗೊಂದಿ ಲಕ್ಷ್ಮಣ(5), ಹನುಮನಹಳ್ಳಿಯ ಮಂಜುನಾಥ (3), ಹೇಮವ್ವ(5) ಎಂಬುವವರಿಗೆ ಸೇರಿವೆ.

ತಿಮ್ಮಣ್ಣ, ಮಲ್ಲಯ್ಯ ಎಂಬುವವರಿಗೆ ಸೇರಿದ 3 ಹಿಂಡುಗಳಲ್ಲಿ 300 ಕುರಿ-ಮೇಕೆಗಳಿದ್ದವು. ಅವರು ಕಡೆಬಾಗಿಲು ಗ್ರಾಮದಲ್ಲಿ ಹಟ್ಟಿಹಾಕಿಕೊಂಡು, ಕೆಲದಿನಗಳಿಂದ ಆನೆಗೊಂದಿ ಸುತ್ತ ಕುರಿಗಳನ್ನು ಮೇಯಿಸಿಕೊಂಡು ಜೀವನ ನಡೆಸುತ್ತಿದ್ದರು.

ಮಾ. 11, 12ರಂದು ಆನೆಗೊಂದಿ ಉತ್ಸವಕ್ಕೆ ಬರುವವರಿಗಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. ನಿರೀಕ್ಷಿತ ಮಟ್ಟದಲ್ಲಿ ಜನರು ಬರದ ಕಾರಣ ಅನ್ನ, ಬದನೆಕಾಯಿ ಪಲ್ಯ, ಉಪ್ಪಿಟ್ಟು, ಸಿರಾ(ಸಿಹಿ) ಆಹಾರ ಉಳಿದಿದ್ದು, ಜಮೀನಿನ ಕಾಲುವೆಯಲ್ಲಿ ಎಸೆಯಲಾಗಿತ್ತು.

ಮಾ. 13ರಂದು ಕುರಿಗಾಹಿಗಳು ಆನೆಗೊಂದಿಯತ್ತ ಕುರಿ ಮೇಯಿಸಲು ಬಂದಿದ್ದು, ಈ ವೇಳೆ ಜಮೀನಿನ ಕಾಲುವೆಯಲ್ಲಿದ್ದ ಆಹಾರವನ್ನು ಕುರಿ–ಮೇಕೆಗಳು ಸೇವಿಸಿವೆ. ಮಾ. 14ರಂದು ತಡರಾತ್ರಿ ಹಟ್ಟಿಯಲ್ಲಿ ಕುರಿ–ಮೇಕೆಗಳು ಏಕಾಏಕಿ ಅಸುನೀಗಿದ್ದವು. ಕೆಲವು ಕುರಿ–ಮೇಕೆಗಳು ಸಾವಿನ ಹಂತಕ್ಕೆ ತಲುಪಿದ್ದವು.

ಕುರಿಗಳ ಮಾಲೀಕರಾದ ತಿಮ್ಮಣ್ಣ, ಮಲ್ಲಯ್ಯ ಅವರು, ಕೂಡಲೇ ಪಶು ಸಂಗೋಪನೆ ಇಲಾಖೆ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಶುಕ್ರವಾರ ಬೆಳಿಗ್ಗೆ ತಂಡದೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿ ಅಸ್ವಸ್ಥಗೊಂಡಿದ್ದ ಕುರಿಗಳಿಗೆ ಚುಚ್ಚುಮದ್ದು, ಗ್ಲುಕೋಸ್, ಪೌಡರ್‌, ಔಷಧ ನೀಡಿದರು. ಜತೆಗೆ ಸಂಜೆವರೆಗೆ ಅಲ್ಲಿಯೇ ಇದ್ದು, ಕುರಿ–ಮೇಕೆಗಳ ಆರೋಗ್ಯ ಪರಿಶೀಲಿಸಿದರು.

ಗಂಗಾವತಿ ಪಶುಸಂಗೋಪನೆ ಇಲಾಖೆ ಮುಖ್ಯ ವೈದ್ಯಾಧಿಕಾರಿ ಡಾ.ಜಾಕೀರ್ ಹುಸೇನ್ ಮಾತನಾಡಿ, ಆನೆಗೊಂದಿ ಉತ್ಸವದಲ್ಲಿ ಉಳಿದು ಎಸೆದಿದ್ದ ಆಹಾರ ಸೇವಿಸಿ ಕುರಿ–ಮೇಕೆಗಳು ಸಾಯುತ್ತಿವೆ ಎಂದು ಕುರಿಗಳ ಮಾಲೀಕರು ಮಾಹಿತಿ ನೀಡಿದರು. ಅದರಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಕುರಿ ಮತ್ತು ಮೇಕೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.‌

ಕೆಲವು ಚೇತರಿಕೆ ಹಂತದಲ್ಲಿದ್ದು, ಕೆಲವು ಹೇಳಲಾಗದಂತಹ ಸ್ಥಿತಿಯಲ್ಲಿವೆ. ಮಾದರಿ ಸಂಗ್ರಹಿಸಿ ವರದಿಗೆ ಕಳುಹಿಸಿದ್ದು, ಅನುಗ್ರಹ ಯೋಜನೆಯಡಿ ಸತ್ತ ಪ್ರತಿ ಕುರಿ ಮತ್ತು ಮೇಕೆಗೆ ₹ 5 ಸಾವಿರ ಪರಿಹಾರವಿವೆ.  ಇಲಾಖೆಗೆ ಪೂರ್ಣ ವರದಿ ಸಲ್ಲಿಸಿ, ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಬರುವಂತೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಪಶುವೈದ್ಯರಾದ ಡಾ.ಸೋಮಪ್ಪ, ಡಾ.ಅರುಣ್ ಗುರು, ಡಾ. ಮಲ್ಲಯ್ಯ, ನಾಗರಾಜ, ಕುರಿಗಾಹಿಗಳಾದ ಮಲ್ಲಯ್ಯ, ತಿಮ್ಮಣ್ಣ, ಹೇಮವ್ವ,‌ ಮಂಜುನಾಥ ಸೇರಿ ಕಡೆಬಾಗಿಲು, ಆನೆಗೊಂದಿ ಗ್ರಾಮಸ್ಥರು ಸೇರಿದ್ದರು.

ಎರಡೂ ಹಿಂಡಿನಲ್ಲಿ ಸೇರಿ ಹೆಚ್ಚಿನ ಸಂಖ್ಯೆಯ ಕುರಿ–ಮೇಕೆಗಳು ಮೃತಪಟ್ಟಿವೆ. ಇನ್ನೂ 20ಕ್ಕೂ ಹೆಚ್ಚು ಕುರಿ–ಮೇಕೆಗಳು ಸಾಯುವ ಸ್ಥಿತಿಯಲ್ಲಿವೆ. ಸದ್ಯ ಬರಗಾಲವಿದ್ದು ಎಲ್ಲಿಯೂ ಮೇವಿಲ್ಲ. ಉತ್ಸವ ನಡೆಸಿ ಉಳಿದ ಆಹಾರ ಗುಂಡಿ ತೆಗೆದು ಮುಚ್ಚಿದ್ದರೆ ಸಮಸ್ಯೆ ಇರುತ್ತಿರಲಿಲ್ಲ

-ಮಲ್ಲಯ್ಯ ಯಂಕಪ್ಪ ಮಾಲೀಕ

₹10-17 ಸಾವಿರದವರೆಗೆ ಕುರಿ ಮತ್ತು ಮೇಕೆಗಳು ಬೆಲೆ ಬಾಳುತ್ತವೆ. ಇದೀಗ ಆಹಾರ ಸೇವಿಸಿ ಮೃತಪಟ್ಟಿದ್ದು ಲಕ್ಷಾಂತರ ಹಾನಿಯಾಗಿದೆ. ಇಂತಹ ಬರಗಾಲದಲ್ಲಿ ನಾವು ಹೇಗೆ ಬದುಕಬೇಕು. ಇದರ ನಷ್ಟ ಯಾರು ಭರಿಸುತ್ತಾರೆ

-ತಿಮ್ಮಣ್ಣ ಭರಮಪ್ಪ ಮಾಲಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT