ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಾದಿನಾಳ: ಎಂಟು ಗ್ರಾಮಗಳಲ್ಲಿ ಹೈಟೆಕ್ ಶೌಚಾಲಯ

ಸರ್ಕಾರಿ ಶಾಲೆಗಳಿಗೆ ವರದಾನವಾದ ನರೇಗಾ: ಗೋಡೆಗಳು ಮೂಡಿಸುತ್ತಿವೆ ಸ್ವಚ್ಛತೆ, ಪರಿಸರ ಜಾಗೃತಿ
Last Updated 10 ಅಕ್ಟೋಬರ್ 2021, 6:46 IST
ಅಕ್ಷರ ಗಾತ್ರ

ಚಿಕ್ಕಮಾದಿನಾಳ (ಕನಕಗಿರಿ): ತಾಲ್ಲೂಕಿನ ಚಿಕ್ಕಮಾದಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7 ಗ್ರಾಮಗಳಲ್ಲಿ ಒಟ್ಟು 8 ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗಿದೆ.

ಚಿಕ್ಕ ಮಾದಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹಿರೇಮಾದಿನಾಳ, ರಾಮದುರ್ಗಾ, ಬಂಕಾಪುರ, ಜಾಲಿಹುಡ, ನಾಗಲಾಪುರ, ಚಿಕ್ಕಮಾದಿನಾಳ ಹಾಗೂ ಕರಡಿಗುಡ್ಡ ಗ್ರಾಮಗಳು ಬರುತ್ತವೆ. ಈ ಗ್ರಾಮಗಳಲ್ಲಿ ಈಗ ಹೈಟೆಕ್ ಶೌಚಾಲಯದ್ದೇ ಸುದ್ದಿ.

2020-21ನೇ ಸಾಲಿನ ನರೇಗಾ ಯೋಜನೆಯಲ್ಲಿ ಶಾಲೆಗಳಲ್ಲಿ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿಯೊಂದಕ್ಕೆ ₹4.30 ಲಕ್ಷ ಖರ್ಚು ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಲ್ಲಿ ಹಾಗೂ ಕೈ ತೊಳೆಯಲು ಸಿಂಕ್ ವ್ಯವಸ್ಥೆ ಕಲ್ಪಿಸಲಾಗಿದೆ.

ನೀರಿನ ಪೂರೈಕೆಗೆ ಒತ್ತು ನೀಡಿ ಪ್ರತಿ ಶೌಚಾಲಯದ ಮೇಲೆ ಟ್ಯಾಂಕ್‌ ವ್ಯವಸ್ಥೆ ಮಾಡಿದ್ದು, ನೀರಿನ ಕೊರತೆ ಇಲ್ಲವಾಗಿದೆ. ಶೌಚಾಲಯಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಮತ್ತೊಂದು ವಿಶೇಷ.

ಶೌಚಾಲಯ ನಿರ್ಮಾಣ ಮಾತ್ರವಲ್ಲದೆ ಶೌಚಾಲಯದ ಬಳಕೆಯ ಮಹತ್ವ ಹಾಗೂ ಶುಚಿತ್ವಕ್ಕೆ ಒತ್ತು ನೀಡಲಾಗಿದೆ. ಶೌಚಾಲಯದ ಹೊರ ಗೋಡೆಗಳಿಗೆ ಸ್ವಚ್ಛತೆ, ಪರಿಸರದ ಮಹತ್ವದ ಕುರಿತು ಬರೆಯಲಾದ ಬರಹ ಹಾಗೂ ಗೊಂಬೆಗಳ ಚಿತ್ರಗಳು ಗಮನಸೆಳೆಯುತ್ತಿವೆ.

ಕೇಂದ್ರ ಸರ್ಕಾರದ ಆದೇಶ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಾವ್ಯಾರಾಣಿ ಅವರ ಮಾರ್ಗದರ್ಶನ, ಸಲಹೆ ಸೂಚನೆ ಮೇರೆಗೆ ಪಿಡಿಒ ನಾಗೇಶ ಪೂಜಾರ ಹಾಗೂ ಸಿಬ್ಬಂದಿ ಶ್ರಮದಿಂದಾಗಿ ಈ ಶೌಚಾಲಯಗಳು ನಿರ್ಮಾಣಗೊಂಡಿವೆ.

ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನರೇಗಾ ಯೋಜನೆಯ ಅನುದಾನ ವರದಾನವಾಗಿದೆ.

ಶೌಚಾಲಯ ಜತೆಗೆ ಅಡುಗೆ ಕೋಣೆ, ಮೈದಾನ ಅಭಿವೃದ್ಧಿ, ಪೌಷ್ಟಿಕ ಕೈತೋಟ, ಡೈನಿಂಗ್ ಹಾಲ್, ಹೊರಗೋಡೆ, ಮಳೆ ನೀರು ಸಂಗ್ರಹ ತೊಟ್ಟಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಅಂದಾಜು ತಲಾ ಒಂದು ಶಾಲೆಗೆ ₹30 ಲಕ್ಷ ಅನುದಾನ ಮೀಸಲಿಡಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಶ ಪೂಜಾರ ತಿಳಿಸಿದರು.

ಮಾದರಿ ಶೌಚಾಲಯ ನಿರ್ಮಾಣದಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸಲು ಉತ್ಸುಕರಾ ಗಿದ್ದಾರೆ. ಶೌಚಾಲಯ ಬಳಕೆ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ಪೂಜಾರ ಅವರು ಸಂತಸ ವ್ಯಕ್ತಪಡಿಸಿದರು.

ಗ್ರಾಮದ ಶಾಲೆಯಲ್ಲಿ ಈ ಹಿಂದೆ ಇದ್ದ ಶೌಚಾಲಯ ಬಳಕೆಗೆ ಯೋಗ್ಯವಾಗಿರಲಿಲ್ಲ. ನರೇಗಾ ಅನುದಾನ ಬಳಸಿ ಹೈಟೆಕ್ ಶೌಚಾಲಯ ನಿರ್ಮಿಸಿರುವುದರಿಂದ ಸಂತಸವಾಗಿದೆ. ವಿದ್ಯಾರ್ಥಿಗಳು ಸಹ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಎಂದು ಕರಡಿಗುಡ್ಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಕಳಕಪ್ಪ ಕೊಪ್ಪದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT