ಗಂಗಾವತಿ: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಕಾರಣ ರೈತರು ಬಿತ್ತಿದ ಬೆಳೆಗಳೆಲ್ಲ ಒಣಗಿ, ಬಹುತೇಕ ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದೆ. ರೈತರ ಸಂಕಷ್ಟಕ್ಕೆ ನೆರವಾಗಬೇಕಾದ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದು ಖಂಡನೀಯ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಸರ್ಕಾರದ ವಿರುದ್ಧ ಗುಡುಗಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಮಳೆ ಅಭಾವದಿಂದ ರೈತರು ತಮ್ಮ ಜಮೀನುಗಳಲ್ಲಿ ಬಿತ್ತಿದ ಬೆಳೆಗಳೆಲ್ಲ ಒಣಗಿಹೋಗಿವೆ. ರೈತರು ದಿಕ್ಕುತೋಚದ ಪರಿಸ್ಥಿತಿಯಲ್ಲಿ ಇದ್ದಾರೆ. ಬಿತ್ತನೆ ವೇಳೆ ಸಾಲ ಮಾಡಿ, ಬಿತ್ತನೆ ಬೀಜ, ರಸಗೊಬ್ಬರಗಳನ್ನು ತಂದು ಕೃಷಿ ಚಟುವಟಿಕೆ ಮಾಡಿದ್ದಾರೆ. ಮಳೆಕೊರತೆಯಿಂದ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಕುಟುಂಬ ನಿರ್ವಹಣೆ ಕಷ್ಟವಾಗಿ ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ರಚನೆಯಾಗಿ 100 ದಿನಗಳು ಪೂರೈಸಿವೆ. ಈವರೆಗೆ ಯಾವ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿಲ್ಲ. ಈ ಸರ್ಕಾರದ ಆಡಳಿತವಧಿಯಲ್ಲಿ ಈವರೆಗೆ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಸರ್ಕಾರದ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಹಿಂದೆ ರೈತರ ಜಮೀನುಗಳಿಗೆ ನಿತ್ಯ 7 ಗಂಟೆ ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು. ಇದೀಗ ಅದು ಸಹ ಕಡಿಮೆ ಮಾಡಲಾಗಿದೆ. ರೈತರ ಮಕ್ಕಳಿಗೆ ನೀಡುವ ರೈತ ವಿದ್ಯಾನಿಧಿ ವೇತನ ಬಿಡುಗಡೆ ಮಾಡಿಲ್ಲ. ಅವೆಲ್ಲವು ರಾಜ್ಯವನ್ನು ಕತ್ತಲೆ ಕೂಪಕ್ಕೆ ತಳ್ಳುವಂತಹ ಕೆಲಸಗಳಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಉಚಿತ ವಿದ್ಯುತ್ ಮತ್ತು ಬಸ್, ₹2 ಸಾವಿರ ಪ್ರೋತ್ಸಾಹ ಧನ ನೀಡಿ, ರಾಜ್ಯದ ಆರ್ಥಿಕತೆಗೆ ಹಿನ್ನಡೆಯಾಗುವಂತೆ ಮಾಡುತ್ತಿದ್ದಾರೆ. ಎನ್‌ಇಪಿ ಶಿಕ್ಷಣ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುತ್ತಿದ್ದು, ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತಿದೆ. ಕೂಡಲೆ ಮುಖ್ಯಮಂತ್ರಿಯವರು, ಬರಪೀಡಿತ ಪ್ರದೇಶಗಳನ್ನು ಘೋಷಿಸಿ, ಪರಿಹಾರ ಒದಗಿಸಬೇಕು. ಎನ್‌ಇಪಿ, ಗೋಹತ್ಯೆ ನಿಷೇಧಗಳನ್ನು ಕೈ ಬಿಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡರಾದ ಕಾಶಿನಾಥ ಚಿತ್ರಗಾರ, ಲಂಕೇಶ ಗುಳದಾಳ, ವೀರಭದ್ರಪ್ಪ ನಾಯಕ, ಅಮರ ಜ್ಯೋತಿ ವೆಂಕಟೇಶ, ರಾಘವೇಂದ್ರ ಶ್ರೇಷ್ಠಿ, ಜಿ. ಶ್ರೀಧರ, ಹನುಮಂತಪ್ಪ ನಾಯಕ, ದೇವಾನಂದ ದಾಸನಾಳ, ವೆಂಕಟೇಶ, ಬಸವ ರಾಜ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.