ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಪ್ಪ ಆಚಾರಗೆ ಮೊದಲ ಅವಧಿಯಲ್ಲೇ ಬಡ್ತಿ

ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳಿಗೆ ಹೊಸ ಚೈತನ್ಯ: ಕಾರ್ಯಕರ್ತರ ಹರ್ಷ
Last Updated 5 ಆಗಸ್ಟ್ 2021, 2:34 IST
ಅಕ್ಷರ ಗಾತ್ರ

ಯಲಬುರ್ಗಾ: ಮೊದಲ ಅವಧಿಯ ಶಾಸಕತ್ವದಲ್ಲಿಯೇ ಸಚಿವರಾಗಿ ಬಡ್ತಿ ಪಡೆದ ಕ್ಷೇತ್ರದ ಹಾಲಪ್ಪ ಬಸಪ್ಪ ಆಚಾರ ಅದೃಷ್ಟವಂತ ರಾಜಕಾರಣಿ ಎಂದು ಕೆಲವರು ಬಣ್ಣಿಸಿದರೆ, ಮತ್ತೆ ಕೆಲವರು ಸಹಕಾರಿ ರಂಗದಲ್ಲಿ ಶ್ರಮಿಸಿದ ಶ್ರಮ, ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಹಾಗೂ ಅವರಲ್ಲಿರುವ ಗ್ರಾಮೀಣಾಭಿವೃದ್ಧಿ ಪರಿಕಲ್ಪನೆಯ ಚಿಂತನೆಗಳು ಸಹ ಸಚಿವ ಸ್ಥಾನ ಸಿಗಲು ಕಾರಣವಾಗಿವೆ ಎಂದು ಕ್ಷೇತ್ರದ ರಾಜಕೀಯ ವಲಯದಲ್ಲಿ ಕೇಳಿಬರುವ ಮಾತುಗಳಿವು.

ಕೃಷಿ ಕುಟುಂಬದಿಂದ ಬಂದಿರುವ ಆಚಾರ ಅವರು, ‘ಸಹಕಾರ ರತ್ನ’ ಎಂದೇ ಗುರುತಿಸಿಕೊಂಡಿರುವ ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ ರಾಜಕಾರಣಿ. ಜನಪರ ಕೆಲಸದ ಮೂಲಕ ಮುಖಂಡರ ಮೆಚ್ಚುಗೆಗೆ ಪಾತ್ರರಾಗಿ ಈಗ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಾಲಪ್ಪ ಅವರಿಗೆ ಸಚಿವ ಸ್ಥಾನ ಮೊದಲನೆಯದಾಗಿದ್ದರೂ ಯಲಬುರ್ಗಾಕ್ಷೇತ್ರಕ್ಕೆ ಮೂರನೆಯದು.

ಬಸವರಾಜ ರಾಯರಡ್ಡಿ ಅವರು, ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೆಗೌಡ ಅವರು 1994ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹನ್ನೊಂದು ತಿಂಗಳವರೆಗೆ ವಸತಿ ರಾಜ್ಯಸಚಿವರಾಗಿ, ಆ ನಂತರ 2018-19ನೇ ಸಾಲಿನಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಉನ್ನತಶಿಕ್ಷಣ ಸಚಿವರಾಗಿದ್ದರು.

ಕಳೆದ ಚುನಾವಣೆಯಲ್ಲಿ ರಾಯರಡ್ಡಿಅವರನ್ನು ಸೋಲಿಸಿ ಹಾಲಪ್ಪ ಆಚಾರ ಆಯ್ಕೆಯಾಗಿದ್ದಾರೆ.

ಈ ಭಾಗದ ಜನಪ್ರತಿನಿಧಿಗಳಿಗೆ ಉನ್ನತ ಸ್ಥಾನಮಾನ ಸಿಗುವುದು ತೀರಾ ಕಡಿಮೆ ಎಂದು ಆಡಿಕೊಳ್ಳುವ ಸಂದರ್ಭದಲ್ಲಿ ಸಚಿವ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ಆಚಾರ ಅವರು ಸಫಲರಾಗಿದ್ದು ಕ್ಷೇತ್ರದಲ್ಲಿನ ರಾಜಕೀಯ ಚಟುವಟಿಕೆಗಳಿಗೆ ಹೊಸ ಚೈತನ್ಯ ಮೂಡಿದಂತಾಗಿದೆ.

ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದ ಹಾಲಪ್ಪ ಅವರು, ರಾಯಚೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ಎರಡು ಅವಧಿಗೆ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾಗಿ, ಅಪೆಕ್ಸ್ ಬ್ಯಾಂಕಿನ ನಿರ್ದೇಶಕರಾಗಿ ಕಾರ್ಯನಿರ್ವಹಿಸುವ ಮೂಲಕ ಸಹಕಾರ ರಂಗದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಇಂತಹ ಅನುಭವಿ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದ್ದು ಕ್ಷೇತ್ರಕ್ಕೆ ವಿಶೇಷ ಹಿರಿಮೆ ಮೂಡಿಸಿದಂತಾಗಿದೆ ಎಂದು
ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ರಡ್ಡಿ ಸಮಾಜಕ್ಕೆ ಒಲಿದ ಬಲ: ಕ್ಷೇತ್ರದಲ್ಲಿ ಇಲ್ಲಿಯವರೆಗೆ ಇಬ್ಬರು ರಾಜಕಾರಣಿಗಳಿಗೆ ಮಾತ್ರ ಉನ್ನತ ಸ್ಥಾನಮಾನ ಸಿಕ್ಕಿದ್ದು ವಿಶೇಷ. ಅದೂ ಲಿಂಗಾಯತ ರಡ್ಡಿ ಸಮಾಜಕ್ಕೆ ಮಾತ್ರ. ಬೇರೆ ಸಮಾಜಕ್ಕೆ ಸೇರಿದ ಯಾವೊಬ್ಬ ಶಾಸಕರಿಗೂ ಸಚಿವರಾಗುವ ಯೋಗ ಕೂಡಿ ಬಂದಿಲ್ಲ. ಅದಕ್ಕಾಗಿಯೇ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ರಾಜಕೀಯ ಬಲ ಲಿಂಗಾಯತ ರಡ್ಡಿ ಸಮಾಜಕ್ಕೆ ಒಗ್ಗಿದೆ ಎಂಬುದು ರಾಜಕೀಯ ವಲಯದಲ್ಲಿ
ಕೇಳಿಬರುವ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT