ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಳಗನ್ನಡ ಸಾಹಿತ್ಯ ಮೌಲ್ಯಗಳ ಆಗರ’

ಹಳಗನ್ನಡ ಸಾಹಿತ್ಯ ಬೋಧನಾ ಶಿಬಿರ ಸಮಾರೋಪ: ಹಂಪಿ ವಿ.ವಿ ಕುಲಸಚಿವ ಡಾ.ಸುಬ್ಬಣ್ಣ ರೈ ಅಭಿಮತ
Last Updated 9 ಜನವರಿ 2021, 16:05 IST
ಅಕ್ಷರ ಗಾತ್ರ

ಗಂಗಾವತಿ: ‘ಹಳಗನ್ನಡ ಸಾಹಿತ್ಯ ಮಾನವೀಯ ಮೌಲ್ಯಗಳ ಆಗರ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ.ಸುಬ್ಬಣ್ಣ ರೈ ಅಭಿಪ್ರಾಯಪಟ್ಟರು.

ನಗರದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹಳಗನ್ನಡ ಸಾಹಿತ್ಯ ಬೋಧನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಶಿಕ್ಷಕರು ಪಾಠ ಮಾಡುವಾಗ ಬದುಕಿನ ಜತೆಗೆ ಸಮನ್ವಯಗೊ
ಳಿಸಿಕೊಂಡು ವಿಷಯವನ್ನು ವಿಸ್ತರಿಸಬೇಕು. ಮಕ್ಕಳಲ್ಲಿ ಕನ್ನಡತನ ಬೆಳೆಸುವಲ್ಲಿ ಶಿಕ್ಷಕರು ಪ್ರೇರಕ ಶಕ್ತಿಯಾಗಬೇಕು. ಹಳಗನ್ನಡ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳ ಪ್ರತಿಪಾದನೆ ಇದೆ. ಸಂಸ್ಕೃತಿಯ ಹರವು ಇದೆ. ಜೀವನ ಪ್ರೀತಿಯ ಧಾರೆ ಇದೆ. ಶಿಕ್ಷಕರು ಮಾನವ ಪ್ರೀತಿ ಹಂಚುವ ಮಾರ್ಗದರ್ಶಕರಾಗಬೇಕು’ ಎಂದು ಹೇಳಿದರು.

ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್‌ ಮಾತನಾಡಿ,‘ಸಾಹಿತ್ಯ ಅಧ್ಯಯನದ ಮೂಲಕ ಮನುಷ್ಯ ತನ್ನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ. ಮನಸ್ಸಿಗೆ ದುಃಖ ಉಂಟಾದಾಗ ಪುಸ್ತಕಗಳ ಮೊರೆ ಹೋಗಬೇಕು. ಅಂದಾಗ ಮನಸ್ಸಿನ ಸಂಕುಚಿತ ಭಾವನೆಗಳು ಮಾಯವಾಗುತ್ತವೆ. ಸಮಸ್ಯಾತ್ಮಕ ಸಂಧಿಗಳ ಮೂಲಕ ಸವಾಲು–ಜವಾಬಿನಂಥ ಕೃತಿಗಳನ್ನು ಹಿರಿಯ ಸಾಹಿತಿಗಳು ರಚಿಸಿದ್ದಾರೆ. ಪ್ರತಿ ಶಿಕ್ಷಕರೂ ಮನೆಯಲ್ಲಿ ಸ್ವಂತ ಗ್ರಂಥಾಲಯವನ್ನು ಹೊಂದಿರಬೇಕು’ ಎಂದರು.

ಹಂಪಿ ಕನ್ನಡ ವಿ.ವಿಯ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಡಾ.ಎಫ್.ಟಿ ಹಳ್ಳಿಕೇರಿ ಮಾತನಾಡಿ,‘ಹಸ್ತಪ್ರತಿ ವಿಭಾಗ ಪ್ರತಿವರ್ಷ ಈ ರೀತಿಯ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ. ವಿಶ್ವವಿದ್ಯಾಲಯವು ಜ್ಞಾನ ಪ್ರಸಾರದ ಜತೆಗೆ ಸಂಸ್ಕೃತಿಯ ಪ್ರೇರಕ ಶಕ್ತಿಯಾಗಿದೆ. ಇಂಥ ತರಬೇತಿ ಶಿಬಿರಗಳ ಪ್ರಯೋಜನ ಪಡೆದು ಶಿಕ್ಷಕರು ತರಗತಿ ಕೋಣೆಯಲ್ಲಿ ಅನುಷ್ಠಾನಗೊಳಿಸಬೇಕು’ ಎಂದು ಹೇಳಿದರು.

ತರಬೇತಿ ಶಿಬಿರದಲ್ಲಿ ಭಾಗವಹಿಸಿದ 38 ಕನ್ನಡ ಶಿಕ್ಷಕರಿಗೆ, 20 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.

ಮಾರುತಿ ಐಲಿ, ಜಯಶ್ರೀ ಹಕ್ಕಂಡಿ, ವೀರಮಹೇಶ್ವರಿ, ಶ್ರೀನಿವಾಸ ಅಂಗಡಿ, ಲಕ್ಷ್ಮೀಕಾಂತ ಹೇರೂರ ಹಾಗೂ ಬಸವರೆಡ್ಡಿ ಆಡೂರು ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಕಸಾಪ ಅಧ್ಯಕ್ಷ ಎಸ್.ಬಿ.ಗೊಂಡಬಾಳ, ಪ್ರಮುಖರಾದ ಕಳಕಪ್ಪ ಅಂಗಡಿ, ಡಾ.ಕೆ.ರವೀಂದ್ರನಾಥ್, ಡಾ.ಜಾಜಿ ದೇವೇಂದ್ರಪ್ಪ, ಡಾ.ಮಮ್ತಾಜ್ ಬೇಗಂ, ಪಿ.ಸಲೀಮಾ, ಪ್ರಭು ವಸ್ತ್ರದ್, ಬಸವರಾಜ್, ಲಲಿತಾ ಏಳಬೆಂಚಿ ಹಾಗೂ ಸಂತೋಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT