ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮಸಾಗರ: ಕೊಯ್ಲಿಗೆ ಬಂದ ಹೆಸರು ಬೆಳೆಗೆ ಮಳೆಯ ಕಾಟ

ಬುಡ್ಡಿಯಲ್ಲಿಯೇ ಮೊಳಕೆಯೊಡೆಯುತ್ತಿರುವ ಹೆಸರು
Last Updated 22 ಜುಲೈ 2021, 19:30 IST
ಅಕ್ಷರ ಗಾತ್ರ

ಹನುಮಸಾಗರ: ಈ ಬಾರಿ ಬಿತ್ತನೆ ಅವಧಿಗೆ ಪೂರ್ವದಲ್ಲಿ ಹಾಗೂ ಹೆಸರು ಬೆಳೆ ಹೂವಾಡುವ ಹಂತದಲ್ಲಿ ಮತ್ತೊಂದು ಬಾರಿ ಹದವಾದ ಮಳೆಯಾಗಿದ್ದರಿಂದ ನಾಲ್ಕಾರು ವರ್ಷಗಳಲ್ಲಿ ಕಂಡಿರದ ಹೆಸರು ಬೆಳೆ ಈ ಬಾರಿ ರೈತರ ಹೊಲದಲ್ಲಿ ಬೆಳೆದು ನಿಂತಿತ್ತು.

ಹಿಂದಿನ ವರ್ಷಗಳಂತೆ ಈ ಬಾರಿ ನಂಜಾಣು ರೋಗದ ಪ್ರಭಾವವೂ ಕಡಿಮೆ ಇತ್ತು. ಉತ್ತಮ ಇಳುವರಿ ಕಂಡಿದ್ದ ರೈತರು ಹಿರಿಹಿರಿ ಹಿಗ್ಗಿದರು. ಆದರೇನು ಮಾಡುವುದು ಹೆಸರು ಬೆಳೆ ಸರಿಯಾಗಿ ಕೊಯ್ಲಿಗೆ ಬರುವ ಸಮಯಕ್ಕೆ ನಿರಂತರ ಸೋನೆ ಮಳೆ ಹಾಗೂ ಮೋಡ ಮುಸುಕಿದ ಕಾರಣವಾಗಿ ಕೊಯ್ಲಾಗಬೇಕಾಗಿದ್ದ ಹೆಸರು ಬುಡ್ಡಿಗಳಲ್ಲಿನ ಕಾಳುಗಳು ಮೊಳಕೆಯೊಡೆಯುತ್ತಿರುವುದು ಹೆಸರು ಬೆಳೆದ ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಈ ಭಾಗದ ಹೂಲಗೇರಿ, ಅಡವಿಭಾವಿ, ಹನುಮನಾಳ, ಹನುಮಸಾಗರ, ಚಳಗೇರಿ, ಬೆನಕನಾಳ ಭಾಗದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹೆಸರು ಬಿತ್ತನೆಯಾಗಿದೆ. ಬಿತ್ತನೆ ಮಾಡಿದ ಮೂರು ತಿಂಗಳ ಅವಧಿಯೊಳಗೆ ಕೈಗೆ ಬರುವ ಈ ಬೆಳೆ ಕೈಗೊಂದಿಷ್ಟು ಕಾಸು ಜಮೀನಿನ ಮಣ್ಣಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ ಒದಗಿಸುತ್ತದೆ ಎಂಬ ಕಾರಣವಾಗಿ ರೈತರು ಹೆಸರು ಬಿತ್ತನೆ ಮಾಡುತ್ತಾರೆ. ಅಲ್ಲದೆ ಹೆಸರು ಬೆಳೆ ಬಿತ್ತನೆ ಮಾಡಿದರೆ ಹಿಂಗಾರು ಬೆಳೆಯನ್ನೂ ಬೆಳೆಯಲು ಅವಕಾಶ ದೊರೆಯುವ ಕಾರಣವಾಗಿ ರೈತರು ಹೆಸರು ಬಿತ್ತನೆಗೆ ಆಕರ್ಷಿತರಾಗುತ್ತಾರೆ.

ಇಲ್ಲಿಯವರೆಗೆ ಕಪ್ಪು ಭೂಮಿಯಲ್ಲಿ ಬೆಳೆಯುತ್ತಿದ್ದ ಈ ಮಿಂಚು ಹೆಸರನ್ನು ಈಚೆಗೆ ಮಸಾರಿ ಭಾಗದ ರೈತರು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಗೆ ಮುಂದಾಗಿದ್ದಾರೆ.

ನಿರಂತರ ಮಳೆ ಹಾಗೂ ಮೋಡಕವಿದ ವಾತಾವರಣದಿಂದಾಗಿ ಕೊಯ್ಲಿಗೆ ಬಂದಿರುವ ಹೆಸರು ಬುಡ್ಡಿಗಳನ್ನು ಬಿಡಿಸಲು ಆಗುತ್ತಿಲ್ಲ, ಬಳ್ಳಿಗಳು ಬೇರುಕೊಳೆ ಆವರಿಸಿದೆ. ಮಳೆಯ ಈ ಸಮಯದಲ್ಲಿ ಕೂಲಿ ಕಾರ್ಮಿಕರೂ ದೊರೆಯದಂತಾಗಿದ್ದಾರೆ. ಬುಡ್ಡಿಗಳಲ್ಲಿನ ಕಾಳುಗಳು ಮೊಳಕೆಯೊಡೆಯುತ್ತಿವೆ. ಕಾಯಿಗಳಲ್ಲಿ ಬೂಷ್ಟ್ ಆವರಿಸಿರುವುದರಿಂದ ಬಾಲುಹುಳುಗಳಾಗಿವೆ.

ಹಳದಿ ರೋಗದ ಪ್ರಮಾಣ ಹೆಚ್ಚಾಗಿದೆ ಒಟ್ಟಾರೆ ಹೆಸರು ಬೆಳೆ ಕೈಬಿಡುವ ಹಂತದಲ್ಲಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಆಗಿರುವ ರೈತ ರಮೇಶ ಬಡಿಗೇರ, ಬಸವರಾಜ ಮಡಿವಾಳರ, ಸಂಜೀವಪ್ಪ ಬಾದಿಮನಾಳ ನೋವಿನಿಂದ ಹೇಳುತ್ತಾರೆ.

ಹನುಮಸಾಗರ ಹಾಗೂ ಹನುಮನಾಳ ಹೋಬಳಿಯಲ್ಲಿ ಸುಮಾರು 1400 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. ಪ್ರತಿ ವರ್ಷಕ್ಕಿಂತ ಈ ಬಾರಿ ಬೀಜ ಕೇಂದ್ರದಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೀಜ ಖರೀದಿಸಿದ್ದಾರೆ. ಒಂದ ವಾರ ಮಳೆ ತಡೆದಿದ್ದರೆ ಅಥವಾ ಬಿಸಿಲು ಬಿದ್ದಿದ್ದರೆ, ಬಹುತೇಕ ಭಾಗದ ಹೆಸರು ಫಸಲು ಕೈಗೆ ದೊರಕುತ್ತಿತ್ತು.

ಮಳೆ ಹಾಗೂ ಮೋಡದ ಕಾರಣವಾಗಿ ಈ ಎಲ್ಲ ಸಮಸ್ಯೆಗಳು ಉದ್ಭವಿಸಿವೆ, ನಂತರದಲ್ಲಿ ಬಿತ್ತನೆ ಮಾಡಿದ ರೈತರು ಉಪಶಮನ ಕ್ರಮಗಳನ್ನು ಕೈಕೊಂಡರೆ ಹೆಸರು ಬೆಳೆ ಉಳಿಸಿಕೊಳ್ಳಲು ಸಾಧ್ಯವಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ ತಾರಿವಾಳ ಹೇಳಿದರು.

***

ಈ ಬಾರಿ ಹೆಸರು ಕೈಗೂಡುತ್ತದೆ. ಸಾಲ ತೀರಿಸಬಹುದು ಎಂಬ ಲೆಕ್ಕಾಚಾರದಲ್ಲಿದ್ದ ರೈತರಿಗೆ, ಅತಿಯಾದ ಮಳೆ ನಿರಾಸೆ ಮೂಡಿಸಿದ್ದು ಸರ್ಕಾರ ಪರಿಹಾರ ಘೋಷಣೆ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ.

-ರಮೇಶ ಬಡಿಗೇರ, ರೈತ, ಗ್ರಾ.ಪಂ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT