ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ದೇಶಭಕ್ತಿ ಗುತ್ತಿಗೆ ಪಡೆದಿದೆಯೇ?

ಲೋಕಸಭಾ ಚುನಾವಣೆಯ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಪ್ರಶ್ನೆ
Published 17 ಏಪ್ರಿಲ್ 2024, 5:59 IST
Last Updated 17 ಏಪ್ರಿಲ್ 2024, 5:59 IST
ಅಕ್ಷರ ಗಾತ್ರ

ಕೊಪ್ಪಳ: ‘ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್‌ ಹೋರಾಟ ಮಾಡಿದ್ದರೂ ಬಿಜೆಪಿಯವರು ದೇಶಭಕ್ತಿಯನ್ನು ತಾವೇ ಗುತ್ತಿಗೆ ಪಡೆದುಕೊಂಡವರಂತೆ ನಡೆದುಕೊಳ್ಳುತ್ತಿದ್ದಾರೆ. ನಮಗೆ ದೇಶಭಕ್ತಿಯಿಲ್ಲವೇ’ ಎಂದು ಶಾಸಕ ಲಕ್ಷ್ಮಣ ಸವದಿ ಪ್ರಶ್ನಿಸಿದರು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಪರ ಮತಯಾಚಿಸಿ ಮಾತನಾಡಿದ ಅವರು, ‘ಭಾರತ ಮಾತಾ ಕಿ ಜೈ ಎನ್ನುವ ಘೋಷಣೆ ಬಿಜೆಪಿಯವರ ಅಪ್ಪನ ಮನೆಯ ಆಸ್ತಿಯಲ್ಲ, ಪ್ರತಿಯೊಬ್ಬರ ಹಕ್ಕು. ದೇಶದ ಮೇಲೆ ಅಭಿಮಾನ, ಪ್ರೀತಿ ಬಿಜೆಪಿಗರಿಗೆ ಗುತ್ತಿಗೆ ಕೊಟ್ಟಿದೆಯಾ? ಇನ್ನು ಮುಂದೆ ಕಾಂಗ್ರೆಸ್‌ನಲ್ಲಿ ಭಾರತ ಮಾತಾ ಕಿ ಜೈ ಎನ್ನುತ್ತೇವೆ’ ಎಂದರು.

ಮುಷ್ಠಿ ಕೈ ಹಿಡಿದು ಬಿಜೆಪಿಯವರಿಗೆ ಕೇಳುವ ತನಕ ಜೋರಾಗಿ ಘೋಷಣೆ ಕೂಗಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದ ಅವರು ‘ಬಿಜೆಪಿಯವರು ದೇಶದ ರಕ್ಷಣೆಗೆ ಮೋದಿ ಅವರಿಗೆ ಮತ ಹಾಕಿ ಎಂದು ಹೇಳುತ್ತಿದ್ದಾರೆ. ನಾವೇನು ದೇಶಭಕ್ತರಲ್ಲವೇ. ಬುಲೆಟ್‌ ರೈಲು, ನದಿಜೋಡಣೆ, ಡಾಲರ್‌ ಬೆಲೆ ಇವೆಲ್ಲವೂ ಮಾತಿಗೆ ಮಾತ್ರ ಸೀಮಿತವಾಗಿವೆ’ ಎಂದು ಟೀಕಿಸಿದ ಅವರು ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್‌ ವಿರುದ್ಧವೂ ಹರಿಹಾಯ್ದರು.

ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಮಾತನಾಡಿ, ‘ನಮ್ಮ ಪಕ್ಷದವರು ಸಾಧನೆ ಜನರ ಮುಂದಿಟ್ಡು ಮತ ಕೇಳುತ್ತಿದ್ದಾರೆ. ಬಿಜೆಪಿಯವರು ಹಿಂದಿನ ಹತ್ತು ವರ್ಷಗಳ ಅವಧಿಯಲ್ಲಿ ಯಾವ ಕೆಲಸವನ್ನೇ ಮಾಡಿಲ್ಲ. ಜನರ ಮುಂದೆ ಯಾವ ವಿಷಯ ಮುಂದಿಟ್ಟು ಮತ ಕೇಳುತ್ತಾರೆ’ ಎಂದು ಪ‍್ರಶ್ನಿಸಿದರು.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ‘ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಇದು ಸುಳ್ಳು ಮತ್ತು ಸತ್ಯದ ನಡುವಿನ ಚುನಾವಣೆಯಾಗಿದ್ದು, ಕೆಲಸ ಮಾಡಿದವರಿಗೆ ಮತ ನೀಡಿ. ರಾಜಶೇಖರ ಹಿಟ್ನಾಳ ಅವರಿಗೆ ಮತ ನೀಡಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಸಚಿವ ಬಿ.ನಾಗೇಂದ್ರ, ‘ಬಸವರಾಜ ರಾಯರಡ್ಡಿ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡುವಂತೆ ಪಕ್ಷದ ಎಲ್ಲ ನಾಯಕರ ಬಳಿ ಮನವಿ ಮಾಡುವೆ. ಬಿಜೆಪಿಯ ಡೋಂಗಿಗಳಿಗೆ ಮತ ಕೊಡಬೇಡಿ’ ಎಂದು ಮನವಿ ಮಾಡಿದರು.

ರಾಜಶೇಖರ ಹಿಟ್ನಾಳ ಮಾತನಾಡಿ, ‘ಹಿಂದಿನ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಲ್ಲಿ ಸೋಲು ಕಂಡಿದ್ದೇನೆ. ಈ ಬಾರಿ ನಿಮ್ಮೆಲ್ಲರ ಸಹಕಾರದಿಂದ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ನನಗೆ ಮತ ನೀಡಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಹಂಪನಗೌಡ ಬಾದರ್ಲಿ, ಬಿ.ಎಂ. ನಾಗರಾಜ, ವಿಧಾನ ಪರಿಷತ್‌ ಸದಸ್ಯ ಶರಣೇಗೌಡ ಬಯ್ಯಾಪುರ, ಮುನಿರಾಬಾದ್​ ಕಾಡಾ ಅಧ್ಯಕ್ಷ ಹಸನಸಾಬ್​ ದೋಟಿಹಾಳ, ಜಿಲ್ಲಾ ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆ ಮಾಲತಿ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಬ್ಲಾಕ್​ ಅಧ್ಯಕ್ಷರಾದ ಕೃಷ್ಣಾರಡ್ಡಿ ಗಲಬಿ, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಕೆಪಿಸಿಸಿ ಕಾರ್ಯದರ್ಶಿ ಬಸವನಗೌಡ ಬಾದರ್ಲಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ್‌, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಮುಖಂಡರು ಪಾಲ್ಗೊಂಡಿದ್ದರು.

ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ನಾಮಪತ್ರ ಸಲ್ಲಿಕೆ ಮೆರವಣಿಗೆ ವೇಳೆ ಪಾಲ್ಗೊಂಡಿದ್ದ ಪಕ್ಷದ ಕಾರ್ಯಕರ್ತರು –ಪ್ರಜಾವಾಣಿ ಚಿತ್ರ 
ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ನಾಮಪತ್ರ ಸಲ್ಲಿಕೆ ಮೆರವಣಿಗೆ ವೇಳೆ ಪಾಲ್ಗೊಂಡಿದ್ದ ಪಕ್ಷದ ಕಾರ್ಯಕರ್ತರು –ಪ್ರಜಾವಾಣಿ ಚಿತ್ರ 
ರಾಜಶೇಖರ ಹಿಟ್ನಾಳ
ರಾಜಶೇಖರ ಹಿಟ್ನಾಳ

ರೆಡ್ಡಿ ಹೇಳಿಕೆಗೆ ರಾಯರಡ್ಡಿ ತಿರುಗೇಟು

‘ರಾಜಶೇಖರ ಹಿಟ್ನಾಳ ಅವರನ್ನು ರಾಯರಡ್ಡಿಯೇ ಸೋಲಿಸಿ ಬಿಡುತ್ತಾರೆ’ ಎಂದು ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಇತ್ತೀಚೆಗೆ ನೀಡಿದ ಹೇಳಿಕೆಗೆ ರಾಯರಡ್ಡಿ ಕೊಪ್ಪಳದಲ್ಲಿ ತಿರುಗೇಟು ನೀಡಿದರು. ಹಿಟ್ನಾಳ ಚುನಾವಣೆಯಲ್ಲಿ ಸೋತರೆ ಶಿವರಾಜ ತಂಗಡಗಿ ಸಚಿವ ಸ್ಥಾನ ಹೋಗುತ್ತದೆ. ಬಳಿಕ ಸಚಿವರಾಗಬಹುದು ಎಂದುಕೊಂಡು ರಾಯರಡ್ಡಿ ಯೋಜನೆ ರೂಪಿಸಿದ್ದಾರೆ ಎಂದು ಇತ್ತೀಚೆಗೆ ರೆಡ್ಡಿ ಹೇಳಿಕೆ ನೀಡಿದ್ದರು. ‘ಇನ್ನೊಬ್ಬರನ್ನು ಸೋಲಿಸುವಷ್ಟು ಕೆಳಮಟ್ಟಕ್ಕೆ ನಾನು ಇಳಿಯುವುದಿಲ್ಲ. ನಾನು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರನಾಗಿದ್ದೇನೆ. ಮುಖ್ಯಮಂತ್ರಿ ನನ್ನ ಆತ್ಮೀಯ ಸ್ನೇಹಿತರು. ಸಚಿವ ಸ್ಥಾನಕ್ಕಿಂತಲೂ ಹೆಚ್ಚಿನ ಶಕ್ತಿಯಿದೆ. ಸಚಿವನಾಗುವ ಆಸೆಯೂ ಇಲ್ಲ. ಸಚಿವನಾಗಲೇಬೇಕು ಎನ್ನುವ ಹಪಾಹಪಿಯಿದ್ದರೆ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೋಗುತ್ತಿದ್ದೆ’ ಎಂದರು.

ಮೆರವಣಿಗೆಯಲ್ಲಿ ಕಾಂಗ್ರೆಸ್‌ ಶಕ್ತಿ ಪ್ರದರ್ಶನ

ಕೊಪ್ಪಳ: ರಾಜಶೇಖರ ಹಿಟ್ನಾಳ ನಾಮಪತ್ರ ಸಲ್ಲಿಕೆ ಮೆರವಣಿಗೆ ವೇಳೆ ಪಾಲ್ಗೊಂಡಿದ್ದ ನಾಯಕರಿಗೆ ಇಲ್ಲಿನ ಬಿರುಬಿಸಿಲಿನ ತಾಪ ತಟ್ಟಿತು. ಇಲ್ಲಿನ ಸಿರಸಪ್ಪಯ್ಯನ ಮಠದಿಂದ ಆರಂಭವಾದ ಮೆರವಣಿಗೆ ಅಶೋಕ ಸರ್ಕಲ್ ಮಾರ್ಗವಾಗಿ ತಾಲ್ಲೂಕು ಕ್ರೀಡಾಂಗಣದ ತನಕ ನಡೆಯಿತು. ಅಂದಾಜು ಮೂರು ಕಿ.ಮೀ. ದೂರದ ಮಾರ್ಗದಲ್ಲಿ ನಡೆದ ಮೆರವಣಿಗೆಯಲ್ಲಿ ಸಚಿವರು ಹಾಗೂ ಶಾಸಕರು ಪಾಲ್ಗೊಂಡಿದ್ದರು. ಬಿಸಿಲು ತಡೆಯಲಾಗದೆ ಮೆರವಣಿಗೆ ವಾಹನ ವೇಗವಾಗಿ ಸಾಗಿತು. ತೆರೆದ ವಾಹನದಲ್ಲಿ ಬಂದ ಈ ರಾಜಕೀಯ ನಾಯಕರು ಬಿಸಿಲಿನಿಂದ ಬಳಲಿ ಪದೇಪದೆ ನೀರು ಕುಡಿಯಬೇಕಾಯಿತು. ಕೊಪ್ಪಳ ಕ್ಷೇತ್ರದ ವಿವಿಧೆಡೆಯಿಂದ ಬಂದ ಕಾರ್ಯಕರ್ತರು ಮರದ ನೆರಳಿನಲ್ಲಿ ವಿಶ್ರಾಂತಿ ಪಡೆದರು. ಅವರಿಗೆ ನೀರು ಹಾಗೂ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಜನ ನೀರು ಪಡೆಯಲು ಮುಗಿಬಿದ್ದಿದ್ದರು. ಈಗಾಗಲೇ ಸಾಂಕೇತಿಕವಾಗಿ ರಾಜಶೇಖರ ನಾಮಪತ್ರ ಸಲ್ಲಿಕೆ ಮಾಡಿದ್ದು ಈಗ ಮೆರವಣಿಗೆ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.

Cut-off box - ಇಕ್ಬಾಲ್‌ ಅನ್ಸಾರಿ ಗೈರು ಚುನಾವಣೆ ಘೋಷಣೆಯಾದ ಬಳಿಕ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಮೊದಲ ದೊಡ್ಡ ಕಾರ್ಯಕ್ರಮಕ್ಕೆ ಮಾಜಿ ಸಚಿವ ಗಂಗಾವತಿ ಕ್ಷೇತ್ರದ ಇಕ್ಬಾಲ್‌ ಅನ್ಸಾರಿ ಗೈರಾದರು. ಪಕ್ಷದ ಕೆಲ ಮುಖಂಡರ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಲೇ ಬಂದಿರುವ ಅವರು ‘ಡೀಲರ್‌’ಗಳಿಂದಲೇ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತಿದ್ದೇನೆ ಎಂದು ಅನ್ಸಾರಿ ಹೇಳಿದ್ದರು. ಅವರ ಮುನಿಸು ಶಮನ ಮಾಡಲು ಸಿ.ಎಂ. ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಗಂಗಾವತಿ ಕ್ಷೇತ್ರದಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಕೆಲ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡಿರಲಿಲ್ಲ. ಇಲ್ಲಿಯೂ ಗೈರಾಗಿದ್ದು ಚರ್ಚೆಗೆ ಕಾರಣವಾಯಿತು. ಈ ಕುರಿತು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ರಾಯರಡ್ಡಿ ‘ಮನೆಯಲ್ಲಿ ಜಗಳ ಸಹಜ. ಎಲ್ಲರೂ ಸೇರಿ ಚುನಾವಣೆ ಎದುರಿಸುತ್ತೇವೆ. ಇಕ್ಬಾಲ್‌ ಅನ್ಸಾರಿ ಜೊತೆಗೂ ಮಾತನಾಡಿದ್ದೇನೆ. ಅವರೂ ಪ್ರಚಾರಕ್ಕೆ ಬರುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT