ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಗೋಳ | ಹತ್ತಿಕುಣಿ ಜಲಾಶಯ ಭರ್ತಿಗೆ ಕ್ಷಣಗಣನೆ

Published 31 ಜುಲೈ 2023, 5:55 IST
Last Updated 31 ಜುಲೈ 2023, 5:55 IST
ಅಕ್ಷರ ಗಾತ್ರ

ತೋಟೇಂದ್ರ ಎಸ್ ಮಾಕಲ್

ಯರಗೋಳ: ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹತ್ತಿಕುಣಿ ಯೋಜನೆ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು, ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. ಇದರಿಂದ ಈ ಭಾಗದ ರೈತರ ಮೊಗದಲ್ಲಿ ಸಂತಸ ಮೂಡಿದೆ.

ಜುಲೈ 30ರಂದು(ಭಾನುವಾರ) ಜಲಾಶಯದ ನೀರಿನ ಮಟ್ಟ 1,362 ಅಡಿ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ 1,363 ಅಡಿ ಆಗಿದೆ.

‘ಮುನ್ನೆಚ್ಚರಿಕೆ ಕ್ರಮವಾಗಿ ಒಳಹರಿವಿನ ಹೆಚ್ಚುವರಿ ನೀರನ್ನು ಅಣೆಕಟ್ಟಿನ ಕೋಡಿಯ ಮೂಲಕ ಹಳ್ಳಕ್ಕೆ ಹರಿಸಲಾಗುವುದು’ ಎಂದು ಕರ್ನಾಟಕ ನೀರಾವರಿ ನಿಗಮದ ಹತ್ತಿಕುಣಿ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಚೇತನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘2010, 2013, 2016, 2020, 2021, 2022ರಲ್ಲಿ ಈ ಜಲಾಶಯ ಭರ್ತಿಯಾಗಿತ್ತು. ಯಾವುದೇ ಕ್ಷಣದಲ್ಲಿ ಜಲಾಶಯ ಭರ್ತಿಯಾಗಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರೈತರು ಹೊಲದಲ್ಲಿನ ಕಾಲುವೆಗಳಲ್ಲಿ ಇರುವ ಪಂಪ್‌ಸೆಟ್ ತೆಗೆಯಬೇಕು’ ಎಂದು ಮನವಿ ಮಾಡಿದ್ದಾರೆ.

ಜಲಾಶಯದ ಸುತ್ತಲಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ರೈತರು, ಗ್ರಾಮಸ್ಥರು ನದಿಯಲ್ಲಿ ಇಳಿದಂತೆ ಎಚ್ಚರಿಕೆ ನೀಡಲಾಗಿದೆ.

ಜಲಾಶಯ ಭರ್ತಿಯಾಗುವ ಭರವಸೆಯಿಂದ ಹತ್ತಿಕುಣಿ, ಯಡ್ಡಳ್ಳಿ, ಹೊನಗೇರಾ, ಬಂದಳ್ಳಿ, ಕಟ್ಟಿಗೆಶಹಾಪುರ ಗ್ರಾಮದ ರೈತರು ಸಂತಸದಲ್ಲಿದ್ದಾರೆ. ಯೋಜನೆಯ ವ್ಯಾಪ್ತಿಯು 2,145 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ನೀರಾವರಿ ಸೌಲಭ್ಯ ಪಡೆಯಲಿದೆ.

‘ಮುಂಗಾರು ಮಳೆ ವಿಳಂಬವಾಗಿ ಹೆಸರು ಬೆಳೆ ನಾಶವಾಯಿತು. ದೇವರ ಆಶೀರ್ವಾದದಿಂದ ಕೆಲವು ದಿನಗಳಿಂದ ಮಳೆ ಚೆನ್ನಾಗಿ ಸುರಿಯುತ್ತಿದ್ದು, ಜಲಾಶಯ ತುಂಬುತ್ತಿದೆ. ರೈತರ ಮುಖದಲ್ಲಿ ಸಂತಸ ಮೂಡಿದೆ’ ಎಂದು ಹತ್ತಿಕುಣಿ ಜಲಾಶಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳಿ ಅಧ್ಯಕ್ಷ ವೀರಭದ್ರಪ್ಪ ಯಡ್ಹಳ್ಳಿ ಸಂತಸ ವ್ಯಕ್ತಪಡಿಸಿದರು.

ಪ್ರವಾಸಿಗರ ನೆಚ್ಚಿನ ತಾಣ

ಹತ್ತಿಕುಣಿ ಜಲಾಶಯದ ಸುತ್ತಲೂ ಇರುವ ಬೆಟ್ಟಗಳು ಸತತ ಮಳೆ ಹಸಿರು ಹೊದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಸುತ್ತಲಿನ ನೂರಾರು ಸಂಖ್ಯೆಯ ಪ್ರವಾಸಿಗರು ಕುಟುಂಬ ಸದಸ್ಯರೊಂದಿಗೆ ಭೇಟಿ ನೀಡಿ ಪ್ರಕೃತಿ ಸೌಂದರ್ಯ ಆಸ್ವಾದಿಸುತ್ತಿದ್ದಾರೆ.

ಯರಗೋಳ ವ್ಯಾಪ್ತಿಯ ಹತ್ತಿಕುಣಿ ಜಲಾಶಯ ವೀಕ್ಷಣೆಗೆ ಬಂದ ಪ್ರವಾಸಿಗರು ಸೆಲ್ಫಿ ಪಡೆದ ಕ್ಷಣ
ಯರಗೋಳ ವ್ಯಾಪ್ತಿಯ ಹತ್ತಿಕುಣಿ ಜಲಾಶಯ ವೀಕ್ಷಣೆಗೆ ಬಂದ ಪ್ರವಾಸಿಗರು ಸೆಲ್ಫಿ ಪಡೆದ ಕ್ಷಣ
ಯರಗೋಳ ವ್ಯಾಪ್ತಿಯ ಹತ್ತಿಕುಣಿ ಜಲಾಶಯ ವೀಕ್ಷಣೆಗೆ ಬಂದ ಪ್ರವಾಸಿಗರು ಸೆಲ್ಫಿ ಪಡೆದ ಕ್ಷಣ
ಯರಗೋಳ ವ್ಯಾಪ್ತಿಯ ಹತ್ತಿಕುಣಿ ಜಲಾಶಯ ವೀಕ್ಷಣೆಗೆ ಬಂದ ಪ್ರವಾಸಿಗರು ಸೆಲ್ಫಿ ಪಡೆದ ಕ್ಷಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT