ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಜಿಲ್ಲೆಯಲ್ಲಿ ಧಾರಾಕಾರ ಮಳೆ: ನೆಲಕಚ್ಚಿದ ಬೆಳೆ

ತುಂಬಿದ ಕೆರೆಕಟ್ಟೆಗಳು, ರೈತರ ಮುಖದಲ್ಲಿ ಮಂದಹಾಸ
Last Updated 19 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಾದ್ಯಂತ ಶುಕ್ರವಾರ ಆರಂಭವಾದ ಮಳೆ, ಶನಿವಾರ ಬೆಳಗಿನ ಜಾವದವರೆಗೂ ಬಿಟ್ಟು ಬಿಡದೆ ಸುರಿಯಿತು. ಕಳೆದ ಐದು ವರ್ಷಗಳಿಂದ ಮಳೆಯನ್ನೇ ಕಾಣದ ಹಳ್ಳ, ಕೊಳ್ಳಗಳು ತುಂಬಿ ಹರಿದವು.

1.67 ಟಿಎಂಸಿ ಸಾಮರ್ಥ್ಯದ ಹಿರೇಹಳ್ಳ ಜಲಾಶಯಕ್ಕೆ ಹೆಚ್ಚಿನ ಒಳಹರಿವು ಹರಿದು ಬರುತ್ತಿದೆ. ಜಲಾಶಯದ ಐದು ಗೇಟ್‌ಗಳ ಪೈಕಿ ಮೂರು ಗೇಟ್‌ಗಳನ್ನು ತೆರೆಯಲಾಗಿದೆ.ಗರಿಷ್ಠ ಮಟ್ಟದ 1769.53 ಅಡಿ ಇದ್ದು, ಹಳ್ಳಕ್ಕೆ 5 ಸಾವಿರ ಕ್ಯುಸೆಕ್ ನೀರು ಹರಿಬಿಡಲಾಗಿದೆ. ನೀರನ್ನೇ ಕಾಣದ ಗಿಣಗೇರಿ ಕೆರೆಗೆ ಹಳ್ಳದ ನೀರು ಹರಿದು ಬರುತ್ತಿದ್ದು, ಭರ್ತಿಯಾಗುತ್ತಿದೆ.

ಜಲಾಶಯದಿಂದ ತುಂಗಭದ್ರಾ ನದಿ ಸೇರುವವರೆಗೆ 25 ಕಿ.ಮೀ ಹಳ್ಳದ ಪಾತ್ರವನ್ನು ಸ್ವಚ್ಛಗೊಳಿಸಲಾಗಿದ್ದು, ತುಂಬಿ ಹರಿಯುತ್ತಿದೆ. ಕೊಳೂರ ಬಾಂದಾರಾ ತುಂಬಿದೆ. ಸುತ್ತಮುತ್ತಲಿನ ಸಾವಿರಾರು ರೈತರಿಗೆ ಈ ಬಾಂದಾರ ನೆರವಾಗಿದೆ. ಅಂತರ್ಜಲ ಮಟ್ಟ ಹೆಚ್ಚಿದ್ದು, ಕೊಳವೆಬಾವಿಗಳು ಮರುಜೀವ ಪಡೆದಿವೆ.

ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, 18,970 ಕ್ಯುಸೆಕ್ ನೀರಿನ ಒಳಹರಿವು ಇದ್ದು, 19.010 ಹೊರ ಹರಿವು ಇದೆ. ನದಿಗೆ ಹೆಚ್ಚಿನ ನೀರು ಹರಿ ಬಿಡಲಾಗುತ್ತಿದ್ದು, ಸುರಕ್ಷತೆ ದೃಷ್ಟಿಯಿಂದ ನದಿಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ವಿರುಪಾಪುರ ಗಡ್ಡೆಯಲ್ಲಿ ವಾಸ್ತವ್ಯ ಮಾಡಿದ ವಿದೇಶಿಗರ ಮತ್ತು ಪ್ರವಾಸಿಗರ ಹಿತದೃಷ್ಟಿಯಿಂದ ಹೊರ ಕಳುಹಿಸಲಾಗುತ್ತಿದೆ.

ಜಿಲ್ಲೆಯ ದೊಡ್ಡ ಕೆರೆಗಳಾದ ನಿಡಶೇಸಿ, ತಲ್ಲೂರ, ತಳಕಲ್ ಕೆರೆಗಳು ಬಹುತೇಕ ಮೈದುಂಬಿ ನಿಂತಿವೆ.

ಮಳೆಯಿಂದ ಹಾನಿ: ವ್ಯಾಪಕ ಮಳೆಗೆ ತಾಲ್ಲೂಕಿನ ಹನುಮನಾಳ, ಕೆರೆಹಳ್ಳಿ, ಮುನಿರಾಬಾದ್ ಪ್ರದೇಶದಲ್ಲಿ ಭತ್ತದ ಬೆಳೆ ಸಂಪೂರ್ಣ ನೆಲೆಕಚ್ಚಿದೆ. ಅಳವಂಡಿ, ಹಿಟ್ನಾಳ, ಕುಕನೂರ, ಮುಧೋಳ, ಮಂಗಳೂರು ಹೋಬಳಿಗಳಲ್ಲಿ ಸಜ್ಜೆ, ಮೆಕ್ಕೆ ಜೋಳದ ಜಮೀನುಗಳಲ್ಲಿ ನೀರು ನಿಂತುಕೊಂಡಿದೆ.

ವಿವಿಧ ಹಳ್ಳಕ್ಕೆ ಕಟ್ಟಲಾದ ಚೆಕ್ ಡ್ಯಾಂ, ಮಲ್ಟಿ ಆರ್ಚ್ ಚೆಕ್‌ ಡ್ಯಾಂ, ಬಾಂದಾರಗಳು ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿವೆ. ಹಿಂಗಾರು ಬಿತ್ತನೆಗೆ ಸಿದ್ಧತೆ ನಡೆಸಿದ್ದ ರೈತರು ಮಳೆಯಿಂದ ಮತ್ತಷ್ಟು ವಿಳಂಬವಾಗುತ್ತಿದೆ. ಮಳೆಯಿಂದ ಬಹುತೇಕ ಕಡೆ ಅನುಕೂಲವಾಗಿದ್ದು, ಸತತ ಎಂಟು ದಿನ ಬಿಸಿಲು ಬಿದ್ದರೆ ಬಿತ್ತನೆಗೆ ಹೆಚ್ಚಿನ ಅನುಕೂಲವಾಗಲಿದೆ.

ಮಳೆಯಿಂದ ಕೆಲವೆಡೆ ಮನೆಗಳಿಗೆ ಹಾನಿಯಾಗಿದ್ದು, ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ರೈತರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಆಗ್ರಹ ಕೂಡಾ ಮಾಡಿದ್ದಾರೆ.

ಬೇವಿನಹಾಳದ ರೈತ ಫಕೀರಪ್ಪ ಮತ್ತು ಶಂಕ್ರಪ್ಪ ಎಂಬ ರೈತರಿಗೆ ಸೇರಿದ 10 ಎಕರೆ ಭತ್ತ ನೆಲಕ್ಕೆ ಬಿದ್ದಿದ್ದು,ನೀರಿನಲ್ಲಿಯೇ ಮತ್ತೆ ಎತ್ತಿಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದು, ಕಂಡು ಬಂತು.

*
ಮಳೆಯಿಂದ ಬೆಳೆಗಳಿಗೆ ಅಪಾರ ಹಾನಿಯಾಗಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಶೀಘ್ರ ಪರಿಹಾರ ನೀಡಬೇಕು.
-ಫಕೀರಪ್ಪ, ಬೇವಿನಹಳ್ಳಿರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT