ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಬುರ್ಗಾ: ಆರು ವರ್ಷಗಳಾದರೂ ನಿರ್ಮಾಣಗೊಳ್ಳದ ಮನೆಗಳು

ರಾಜೀವಗಾಂಧಿ ನಗರ ವಸತಿ ಯೋಜನೆಯಡಿ ಮಂಜೂರು, ನಿವೇಶನದಲ್ಲಿ ಮುಳ್ಳು ಕಂಟಿಗಳು
Published 11 ಅಕ್ಟೋಬರ್ 2023, 5:27 IST
Last Updated 11 ಅಕ್ಟೋಬರ್ 2023, 5:27 IST
ಅಕ್ಷರ ಗಾತ್ರ

ಯಲಬುರ್ಗಾ: ಆರು ವರ್ಷಗಳ ಹಿಂದೆ ರಾಜೀವಗಾಂಧಿ ವಸತಿ ನಿಗಮದ ಅಡಿಯಲ್ಲಿ ಮಂಜೂರಾಗಿದ್ದ ಸುಮಾರು 182 ಮನೆಗಳು ಮಂಜೂರಾಗಿದ್ದು ಹೊರತುಪಡಿಸಿದರೆ ಬೇರೆ ಯಾವ ಕೆಲಸವೂ ಆಗಿಲ್ಲ. ಪ್ರಗತಿ ಕಾಣದೆ ನೆನಗುದಿಗೆ ಬಿದ್ದಿದ್ದರಿಂದ ಹಕ್ಕುಪತ್ರ ಪಡೆದ ಫಲಾನುಭವಿಗಳು ಮನೆಗಳಿಗಾಗಿ ಎದುರು ನೋಡುತ್ತಿದ್ದಾರೆ. ಸರ್ಕಾರದಿಂದ ಮನೆಗಳು ಯಾವಾಗ ಸಿದ್ಧಗೊಳ್ಳುತ್ತವೆಯೋ? ಯಾವಾಗ ವಾಸ ಮಾಡುತ್ತೇವೆಯೋ? ಎನ್ನುವ ನಿರೀಕ್ಷೆಯ ಮೂಟೆ ಹೊತ್ತು ಜನ ಕಾಯುತ್ತಿದ್ದಾರೆ.

ಹಾಲಪ್ಪ ಆಚಾರ್‌ ಅವರಿಗಿಂತಲೂ ಮೊದಲು ಬಸವರಾಜ ರಾಯರಡ್ಡಿ ಶಾಸಕರಾಗಿದ್ದ ಅವಧಿಯಲ್ಲಿ ಅವರ ಅಧ್ಯಕ್ಷತೆಯಲ್ಲಿಯೇ ಫಲಾನುಭವಿಗಳ ಆಯ್ಕೆಮಾಡಿ ಅರ್ಹರನ್ನು ಗುರುತಿಸಲಾಗಿತ್ತು. ಹಾಗೆಯೇ ಬಸವರಾಜ ರಾಯರಡ್ಡಿ ಕಾಲೊನಿ ಎಂದೇ ಹೆಸರಿಸಿ ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಆಕಡೆ ಗಮನಹರಿಸದೇ ಉದಾಸೀನ ಮಾಡಿದ್ದರಿಂದ ಫಲಾನುಭವಿಗಳ ಪಾಲಿಗೆ ಮನೆಗಳು ಗಗನಕುಸುಮವಾದಂತಿವೆ ಎಂದು ಫಲಾನುಭವಿಗಳು ಆರೋಪಿಸುತ್ತಾರೆ.

ಪಟ್ಟಣದ ಹೊರವಲಯದ ಸುಮಾರು ಮೂರು ಕಿ.ಮೀ ಅಂತರದಲ್ಲಿ ಮಾರನಾಳ ರಸ್ತೆಯಲ್ಲಿ ನಿರ್ಮಾಣಕ್ಕೆ ಆಯ್ಕೆಯಾದ ಸರ್ವೆ ನಂ.149/2ದಲ್ಲಿನ 5.30 ಎಕರೆ ಪ್ರದೇಶದಲ್ಲಿ ಈಗ ಸಂಪೂರ್ಣ ಮುಳ್ಳಿನ ಗಿಡಗಳು ಬೆಳೆದು ನಿಂತಿವೆ. ನಿವೇಶನದ ಗುರುತಿನ ಕಲ್ಲುಗಳು ಕೂಡಾ ಅಲ್ಲಲ್ಲಿ ಕಿತ್ತು ಹೋಗಿವೆ. ನಿವೇಶನ ಪ್ರದೇಶ ಎಂಬುದೇ ಗೊತ್ತು ಸಿಗದ ಸ್ಥಿತಿ ನಿರ್ಮಾಣಗೊಂಡಿದ್ದರಿಂದ ಈ ಪ್ರದೇಶವನ್ನು ಅಭಿವೃದ್ಧಿಗೊಳಿಸಿ ಮನೆಗಳ ನಿರ್ಮಾಣಕ್ಕೆ ಮುಂದಾಗಬೇಕಾಗಿದೆ. ಆದರೆ ಸಂಬಂಧಪಟ್ಟವರು ಇತ್ತ ಕಡೆ ಗಮನಕೊಡದೇ ನಿರ್ಲಕ್ಷಿಸುತ್ತಿದ್ದಾರೆ ಎನ್ನುವ ಆರೋಪಗಳಿವೆ. 

ಒಂದು ವರ್ಷದೊಳಗೆ ಮನೆಗಳನ್ನು ನಿರ್ಮಿಸಿ ವಾಸಕ್ಕಾಗಿ ವಿತರಿಸಲಾಗುವುದು ಎಂದು ಫಲಾನುಭವಿಗಳಿಗೆ ಹೇಳಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಆದರೆ ಆರು ವರ್ಷಗಳಾದರೂ ಚಾಲನೆಯೇ ಸಿಕ್ಕಿಲ್ಲ ಎಂಬುದು ಫಲಾನುಭವಿಗಳ ಬೇಸರಕ್ಕೆ ಕಾರಣವಾಗಿದೆ. ಇಂದು ಅಥವಾ ನಾಳೆ ಮನೆಗಳು ದೊರೆಯುತ್ತವೆ ಎಂಬ ಆಶಾಭಾವನೆಯಿಂದ ಫಲಾನುಭವಿಗಳು ಜಾಥಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕಳೆದ ಐದಾರು ವರ್ಷದಲ್ಲಿ ಸುಮಾರು ಮುರ್ನಾಲ್ಕು ಜನ ಮುಖ್ಯಾಧಿಕಾರಿಗಳಾಗಿ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆದರೂ ಯಾರೊಬ್ಬರು ನಿವೇಶನ ಹಾಗೂ ಮನೆಗಳ ನಿರ್ಮಾಣಕ್ಕೆ ಆಸಕ್ತಿ ತೋರಿಲ್ಲ. ಅಗತ್ಯ ಸೌಲಭ್ಯಗಳ ಅಭಿವೃದ್ಧಿಗೆ ಕಾಳಜಿ ತೋರದೇ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಫಲಾನುಭವಿ ಕುಟುಂಬದ ಸದಸ್ಯ ಪ್ರಸನ್ನ ಬೇಸರ ವ್ಯಕ್ತಪಡಿಸಿದ್ದಾರೆ.

ತಗ್ಗು ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸುವುದು ಸರಿಯಲ್ಲ, ಬೇರೆ ಸ್ಥಳವನ್ನು ಗುರುತಿಸೋಣ, ಫಲಾನುಭವಿಗಳಿಗೆ ಮನೆಗಳ ಅವಶ್ಯಕತೆಯಿಲ್ಲ ಹೀಗೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಈ ಹಿಂದಿನ ಶಾಸಕರು ಮನೆಗಳ ನಿರ್ಮಾಣಕ್ಕೆ ಆಸಕ್ತಿ ತೋರಲಿಲ್ಲ. ಕಾಂಗ್ರೆಸ್ ನೇತೃತ್ವದ ಸರ್ಕಾರ ಮಂಜೂರು ಮಾಡಿದ್ದ ಮನೆಗಳನ್ನು ಮತ್ತೆ ಐದು ವರ್ಷಗಳ ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಮನೆ ನಿರ್ಮಾಣ ಮಾಡುತ್ತದೆ ಎನ್ನುವ ನಿರೀಕ್ಷೆಯಿಂದ ಕಾಯುತ್ತಿದ್ದೇವೆ. ಈ ವಿಷಯವನ್ನು ಶಾಸಕರ ಗಮನಕ್ಕೂ ತರಲಾಗಿದೆ ಎಂದು  ಪಟ್ಟಣ ಪಂಚಾಯಿತಿ ಸದಸ್ಯ ಹನಮಂತ ಭಜಂತ್ರಿ ತಿಳಿಸಿದರು.

ಈಗಾಗಲೇ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ನೆನಗುದಿಗೆ 182 ಮನೆಗಳ ನಿರ್ಮಾಣ ಕಾಮಗಾರಿ ಹಿಂದಿನ ಬಿಜೆಪಿ ಸರ್ಕಾರ ತೋರಿದ ನಿರಾಸಕ್ತಿಯ ಆರೋಪ

ಮನೆಗಳ ನಿರ್ಮಾಣದ ವಿಷಯವನ್ನು ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರ ಗಮನಕ್ಕೆ ತರಲಾಗಿದೆ. ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಬೇಕಾದ ಅನುದಾನದ ಬಗ್ಗೆ ಅಂದಾಜು ಪಟ್ಟಿ ಸಲ್ಲಿಸಲು ಸೂಚಿಸಿದ್ದಾರೆ. ಕೂಡಲೇ ನಿವೇಶನದ ಪ್ರದೇಶವನ್ನು ಸ್ವಚ್ಚಗೊಳಿಸಿ ರಸ್ತೆ ಚರಂಡಿ ಹಾಗೂ ಇನ್ನಿತರ ಸೌಲಭ್ಯ ಕಲ್ಪಿಸಲಾಗುವುದು. ತ್ವರಿತವಾಗಿ ಮನೆಗಳ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ.

-ನಾಗೇಶ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಯಲಬುರ್ಗಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT