ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೈದರನಗರ | ಕೆಸರು ಗದ್ದೆಯಾದ ರಸ್ತೆ: ಸಂಚಾರ ದುಸ್ತರ

Published 11 ಜುಲೈ 2024, 3:23 IST
Last Updated 11 ಜುಲೈ 2024, 3:23 IST
ಅಕ್ಷರ ಗಾತ್ರ

ಅಳವಂಡಿ: ವಲಯದ ವ್ಯಾಪ್ತಿಯಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳು ಹದಗೆಟ್ಟಿದ್ದು, ಸಂಚಾರ ನಿತ್ಯವೂ ದುಸ್ತರವಾಗಿದೆ. ಇದರಿಂದ ಕೆಲವು ರಸ್ತೆಗಳು ಮಳೆಯಿಂದ ಹೊಂಡಗಳಾಗಿ, ಕೆಸರು ಗದ್ದೆಯಾಗಿ ಬಸ್‌ಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅನೇಕ ಬಸ್‌ಗಳು ಕೆಸರಿನಲ್ಲಿ ಸಿಲುಕುವುದು ಸಾಮಾನ್ಯವಾಗಿದೆ.

ಹೈದರ್‌ನಗರ ಗ್ರಾಮದಲ್ಲಿ ಸರ್ಕಾರಿ ಬಸ್ಸು ರಸ್ತೆಯ ಕೆಸರಿನಲ್ಲಿ ಸಿಲುಕಿ ಸಂಚಾರಕ್ಕೆ ಅಡಚಣೆ ಉಂಟಾಗಿರುವ ಘಟನೆ ಬುಧವಾರ ನಡೆಯಿತು. ಹೈದರನಗರ ಗ್ರಾಮ ಸೇರಿದಂತೆ ಹಲವು ಗ್ರಾಮಗಳ ರಸ್ತೆಗಳು ತೀರಾ ಹದೆಗೆಟ್ಟಿದ್ದು, ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಸ್ತೆಗಳು ದೊಡ್ಡ ದೊಡ್ಡ ಹೊಂಡಗಳಾಗಿ ಪರಿವರ್ತನೆಗೊಂಡು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಹೋಬಳಿ ವ್ಯಾಪ್ತಿಯಲ್ಲಿ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇದರಿಂದ ವಾಹನಗಳ ಸವಾರರು ಪರದಾಡುವುದು ಸಾಮಾನ್ಯವಾಗಿದೆ. ಮಳೆ ಬಂದರೆ ಈ ರಸ್ತೆ ನೀರು ತುಂಬಿ ಕೆರೆಯಂತಾಗಿ ನಂತರ ಕೆಸರು ಗದ್ದೆಯಾಗಿ ಮಾರ್ಪಡುತ್ತವೆ. ಈ ವೇಳೆ ವಾಹನ ಸವಾರರು ಜಾರಿ ಬೀಳುವುದು ಹಾಗೂ ಅಪಘಾತ ಕಟ್ಟಿಟ್ಟ ಬುತ್ತಿಯಾಗಿದೆ. ಆದರೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿ ಗೋಜಿಗೆ ಹೋಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ದೂರಾಗಿದೆ.

ಹೈದರ್‌ನಗರ ರಸ್ತೆಯ ಮುಖಾಂತರ ಮರಳಿನ ಟಿಪ್ಪರ್‌ಗಳು ಹಾಗೂ ಟ್ರ್ಯಾಕ್ಟರ್‌ಗಳು ಹೋಗುತ್ತವೆ. ಇದರಿಂದ ರಸ್ತೆ  ಹಾಳಾಗಿದೆ ಎಂಬುದು ಇಲ್ಲಿನ ಸ್ಥಳೀಯರ ಆರೋಪವಾಗಿದೆ. ಬುಧವಾರ ಬೆಳಿಗ್ಗೆ ಅಳವಂಡಿಯಿಂದ ನಿಲೋಗಿಪುರಕ್ಕೆ ಹೋಗುವಾಗ ಹೈದರನಗರ ಗ್ರಾಮದಲ್ಲಿ ಬಸ್ ಸಿಲುಕಿತು. ಈ ಬಸ್ ನಿಲೋಗಿಪುರಕ್ಕೆ ಹೋಗಿ ಗ್ರಾಮೀಣ ಪ್ರದೇಶದ ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಹೊತ್ತು ಅಳವಂಡಿಗೆ ತೆರಳಬೇಕಿತ್ತು. ಆದರೆ ಹೋಗುವಾಗ ರಸ್ತೆಯ ಗುಂಡಿಯಲ್ಲಿ ಸಿಲುಕಿದ ಪರಿಣಾಮ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು. ಇದರಿಂದ ಸರಿಯಾದ ಸಮಯಕ್ಕೆ ಶಾಲಾ ಕಾಲೇಜಿಗೆ ಹೋಗಲು ಸಾಧ್ಯವಾಗದ ವಿದ್ಯಾರ್ಥಿಗಳು ರಸ್ತೆ ಪರಿಸ್ಥಿತಿಗೆ ಕಾರಣವಾದ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು. 

ರಸ್ತೆ ಸರಿಪಡಿಸುವಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರು ಆಗ್ರಹಿಸಿದರು
ರಸ್ತೆ ಸರಿಪಡಿಸುವಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರು ಆಗ್ರಹಿಸಿದರು

ಕೆಟ್ಟು ಹೋದ ರಸ್ತೆ ಬಗ್ಗೆ ಗಮನ ಹರಿಸಿ

ಹೋಬಳಿ ವ್ಯಾಪ್ತಿಯ ನಿಲೋಗಿಪುರ ಹೈದರ್‌ನಗರ ಹಲವಾಗಲಿ ಹಾಗೂ ಕೇಸಲಾಪುರದಿಂದ ಅಳವಂಡಿ ಗ್ರಾಮಕ್ಕೆ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳುತ್ತಾರೆ. ಇದೇ ಗ್ರಾಮಗಳ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳು ಅಳವಂಡಿ ಗ್ರಾಮಕ್ಕೆ ಹೋಗುತ್ತವೆ. ಆದರೆ ರಸ್ತೆ ಹದೆಗೆಟ್ಟ ಪರಿಣಾಮ ಬಸ್‌ಗಳು ನಿಧಾನವಾಗಿ ಸಂಚರಿಸುತ್ತವೆ. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತಲುಪುವುದು ಕಷ್ಟಕರವಾಗಿದೆ. ಸಾಕಷ್ಟು ಬಾರಿ ಶಾಸಕರಿಗೆ ಹಾಗೂ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇನ್ನಾದರೂ ಹದಗೆಟ್ಟ ರಸ್ತೆ ಬಗ್ಗೆ ಗಮನಹರಿಸಿ ಅಭಿವೃದ್ಧಿಪಡಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಕೈಗೊಳ್ಳಲಾಗುವುದು’ ಎಂದು ಇಲ್ಲಿನ ಯುವಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಹೈದರ್‌ನಗರ ರಸ್ತೆ ಸಂಪೂರ್ಣ ಹಾಳಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆ ದುರಸ್ತಿಗೆ ಮುಂದಾಗಬೇಕು
ವಿರುಪಾಕ್ಷಿ ಬಡಿಗೇರ ಹೈದರನಗರ ಗ್ರಾಮಸ್ಥ
ಹದಗೆಟ್ಟ ರಸ್ತೆ ಅಭಿವೃದ್ಧಿಪಡಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು
ಐಶ್ವರ್ಯ ನಾಯಕ ಶಾಲಾ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT