ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದ ನೆಲ ಹಾಗೂ ಜಲದ ರಕ್ಷಣೆಗೆ ಹೋರಾಡಲು ಸಮಾನ ಮನಸ್ಕರು, ಚಳವಳಿ ನಿರತರು, ಹೋರಾಟಗಾರರು, ಸಾಹಿತಿಗಳು ಬುಧವಾರ ಇಲ್ಲಿ ಸಭೆ ನಡೆಸಿ ‘ಹೈದರಾಬಾದ್ ಕರ್ನಾಟಕ ಸೌಹಾರ್ದ ಸಂಘರ್ಷ ವೇದಿಕೆ’ ಎಂಬ ಹೊಸ ಸಂಘಟನೆ ಆರಂಭಿಸಿದರು.
ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ‘ರಾಜ್ಯದಲ್ಲಿಯೇ ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದಿದೆ. ಇಲ್ಲಿನ ಎಲ್ಲಾ ಸಮುದಾಯಗಳು ಸವಲತ್ತುಗಳಿಂದ ವಂಚಿತವಾಗಿವೆ. ಆಳುವ ಸರ್ಕಾರಗಳು ಈ ಭಾಗದ ಅಭಿವೃದ್ಧಿಯ ಹೆಸರಲ್ಲಿ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿವೆ. ಪ್ರತಿವರ್ಷ ಈ ಭಾಗದ ಅಭಿವೃದ್ಧಿಗಾಗಿ ಮೀಸಲಿಡುವ ಹಣ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ವಾಪಸ್ ಹೋಗುತ್ತಿದೆ’ ಎಂದು ದೂರಿದರು.
ಇತ್ತೀಚಿಗೆ ಹೊಸದಾಗಿ ಆಯ್ಕೆಗೊಂಡ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯು 371 ಜೆ ಗೊಂದಲದಿಂದ ತಡೆಹಿಡಿಯಲಾಗಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯಲು ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಲಾಗುವುದು.ಅಲ್ಲಮಪ್ರಭು ಬೆಟ್ಟದೂರು, ಬಂಡಾಯ ಸಾಹಿತಿ
‘ಇಂದಿರಾಗಾಂಧಿ ಸರ್ಕಾರ ಹೇರಿದ್ದ ತುರ್ತು ಪರಿಸ್ಥಿತಿ ಖಂಡಿಸಿ ಜಯಪ್ರಕಾಶ ನಾರಾಯಣರವರ ನೇತೃತ್ವದಲ್ಲಿ ಆ ಕಾಲಘಟ್ಟದ ಜನಪರ ಹೋರಾಟಗಾರರು ತೀವ್ರ ಚಳವಳಿ ನಡೆಸಿದ್ದರು. ಅಂದು ಕಾಂಗ್ರೆಸ್ ವಿರುದ್ಧ ಹೋರಾಡಿದ್ದ ನಾವು ಈಗ ಅದೇ ಪಕ್ಷದ ವಿರುದ್ಧ ಮೃದು ಧೋರಣೆ ತೋರುವ ಅನಿವಾರ್ಯತೆ ಸೃಷ್ಟಿಯಾಗಿದೆ. ಕೋಮುವಾದಿ ಶಕ್ತಿಗಳು ಸಂವಿಧಾನದ ಮೂಲಭೂತ ಹಕ್ಕುಗಳನ್ನು ಹಾಳುಮಾಡಿ ಸಾಮಾಜಿಕ ಅರಾಜಕತೆ ಉಂಟು ಮಾಡುತ್ತಿವೆ. ಆದ್ದರಿಂದ ನಾವೆಲ್ಲರೂ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡಲು ಸತತವಾಗಿ ಹೋರಾಡಬೇಕಿದೆ’ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಗಂಗಾವತಿಯ ಹೋರಾಟಗಾರ ಜೆ.ಭಾರದ್ವಾಜರವರು ವಹಿಸಿದ್ದರು. ಹೋರಾಟಗಾರರಾದ ಬಸವರಾಜ ಶೀಲವಂತರ, ಡಿ.ಎಚ್.ಪೂಜಾರ, ಮಹಾಂತೇಶ ಕೊತಬಾಳ, ಕೆ.ಬಿ.ಗೋನಾಳ, ಆನಂದ ಭಂಡಾರಿ, ಆದಿಲ್ ಪಾಟೀಲ, ಗಾಳೆಪ್ಪ ಕಡೆಮನಿ, ಡಾ.ಅಬ್ದುಲ್ ರಹಿಮಾನ, ಎಂ.ಡಿ.ಸಿರಾಜ ಸಿದ್ದಾಪುರ, ಲಿಂಗರಾಜ ನವಲಿ, ರಾಜನಾಯಕ ತಾವರಗೇರಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.