ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅದೃಷ್ಟವಿದ್ದರೆ ನಾನೇಕೆ ಮುಖ್ಯಮಂತ್ರಿ ಆಗಬಾರದು: ಬಸವರಾಜ ರಾಯರಡ್ಡಿ

Published : 9 ಸೆಪ್ಟೆಂಬರ್ 2024, 8:51 IST
Last Updated : 9 ಸೆಪ್ಟೆಂಬರ್ 2024, 8:51 IST
ಫಾಲೋ ಮಾಡಿ
Comments

ಕೊಪ್ಪಳ: ‘ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಹಲವರು ಆಸೆಪಡುತ್ತಿದ್ದಾರೆ. ಅವರು ಆಸೆ ಪಡುವು ದರಲ್ಲಿ ತಪ್ಪೇನಿಲ್ಲ. ಆದರೆ, ಆ ಜಾಗ ಖಾಲಿಯಿಲ್ಲ. ಒಂದು ವೇಳೆ ಬೇರೆಯವರನ್ನು ಮುಖ್ಯಮಂತ್ರಿ ಮಾಡುವುದಾದರೆ ನಾನೂ ಆಕಾಂಕ್ಷಿ’ ಎಂದು ಮುಖ್ಯ ಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅದೃಷ್ಟವಿದ್ದರೆ ನಾನೂ ಏಕೆ ಮುಖ್ಯಮಂತ್ರಿ ಆಗಬಾರದು’ ಎಂದು ಪ್ರಶ್ನಿಸಿದರು.

‘ಹೊಸದಾಗಿ ಯಾರೇ ಮುಖ್ಯಮಂತ್ರಿ ಆಗುವುದಾದರೂ ಅವರಿಗೆ ಸಿದ್ದರಾಮಯ್ಯನವರ ಆಶೀರ್ವಾದಬೇಕು. ಅವರು ಹೇಳಿದವರು ಸಿ.ಎಂ. ಆಗುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಏನಾಗುತ್ತಾರೆ ಎನ್ನುವುದೇ ಗೊತ್ತಾಗುವುದಿಲ್ಲ. ಅಂತಹ ಸಂದರ್ಭ ಬಂದರೆ ಸಿದ್ದರಾಮಯ್ಯ ನನ್ನ ಹೆಸರನ್ನೇ ಹೇಳುತ್ತಾರೆ’ ಎಂದು ರಾಯರಡ್ಡಿ ವಿಶ್ವಾಸ ವ್ಯಕ್ತಪಡಿಸಿದರು. ‘ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗಲಿ’ ಎಂದೂ ಪ್ರತಿಪಾದಿಸಿದರು.

‘ಎಂ.ಬಿ. ಪಾಟೀಲ ಹಾಗೂ ಶಿವಾನಂದ ಪಾಟೀಲ ಅವರು ಲಿಂಗಾಯತ ಸಮುದಾಯದ ಹಿರಿಯ ನಾಯಕರು ಎಂದು ಹೇಳಿಕೊಳ್ಳುತ್ತಿದ್ದಾರೆ. ಜಾತಿ ವಿಷಯ ಮುನ್ನಲೆಗೆ ತಂದರೆ ಲಿಂಗಾಯತರಲ್ಲಿ ನಾನು ಹಾಗೂ ಬಿ.ಆರ್‌. ಪಾಟೀಲ ಮಾತ್ರ ಹಿರಿಯ ಶಾಸಕರಿದ್ದೇವೆ. ಹೆಚ್ಚು ಬಾರಿ ಗೆದ್ದ ಲಿಂಗಾಯತ ಶಾಸಕ ನಾನೊಬ್ಬನೇ. ಮುಖ್ಯಮಂತ್ರಿ ಸ್ಥಾನ ಲಿಂಗಾಯತರಿಗೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಶಾಸಕರಿಗೆ ಕೊಡುವುದಾದರೆ ಆಕಾಂಕ್ಷಿ ಯಾಗಿ ಮುಂಚೂಣಿಯಲ್ಲಿರುತ್ತೇನೆ’ ಎಂದರು.

‘ಮುಂದಿನ ಮೂರೂವರೆ ವರ್ಷ ಸಿದ್ದರಾಮಯ್ಯ ಅವರೇ ಸಿ.ಎಂ. ಆಗಿ ಮುಂದುವರಿಯಬೇಕು. ಅವರು ಅಧಿಕಾರದಲ್ಲಿದ್ದರೆ ರಾಜ್ಯ ಅಭಿವೃದ್ಧಿಯಾಗುತ್ತದೆ. ಒಂದು ವೇಳೆ ನ್ಯಾಯಾಲಯ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೂ ಅವರು ರಾಜೀನಾಮೆ ಕೊಡಬಾರದು. ಅವರು ಅಧಿಕಾರದಿಂದ ಕೆಳಗಡೆ ಇಳಿಯುತ್ತಾರೆ ಎಂದು ಯಾರು ಹೇಳಿದ್ದಾರೆ?’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT