ಗಂಗಾವತಿ: ಇಲ್ಲಿನ ಎಂಎನ್ಎಂ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಅತಿಥಿ ಶಿಕ್ಷಕಿ ಹುದ್ದೆಗೆ ಅಕ್ರಮವಾಗಿ ನೇಮಕಾತಿ ಮಾಡಿಕೊಂಡು ಉಪಪ್ರಾಚಾರ್ಯ ಕೃಷ್ಣಪ್ಪ ಅವರು ಬಿಲ್ ಎತ್ತುವಳಿ ಮಾಡಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಬಿಇಒ ಕಚೇರಿ ಎದುರು ಎಸ್ಎಫ್ಐ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು.
ಸಂಘಟನೆ ರಾಜ್ಯಾಧ್ಯಕ್ಷ ಅಮರೇಶ ಕಡಗದ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ಸಮಸ್ಯೆ ನೀಗಿಸುವ ಉದ್ದೇಶದಿಂದ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಶಾಲೆಯಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸುತ್ತೊಲೆ ಹೊರಡಿಸಿದೆ. ಆದರೆ ಗಂಗಾವತಿ ಎಂಎನ್ಎಂ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಉಪಪ್ರಾಚಾರ್ಯ ಕೃಷ್ಣಪ್ಪ ಶಾಲೆಯ ಅತಿಥಿ ಶಿಕ್ಷಕಿ ಹುದ್ದೆಗೆ ಬಿಇಡಿ 4ನೇ ಸೆಮಿಸ್ಟರ್‌ನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯನ್ನು ವಿಜ್ಞಾನ ವಿಭಾಗಕ್ಕೆ (ಸಿಬಿಝಡ್) ಅಕ್ರಮವಾಗಿ ನೇಮಕ ಮಾಡಿ, ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಆಗಸ್ಟ್, ಸೆಪ್ಟೆಂಬರ್ ತಿಂಗಳ ಗೌರವ ಧನ ಎತ್ತುವಳಿ ಮಾಡಿದ್ದಾರೆ ಎಂದು ಆರೋಪಿಸಿದರು.
ನಂತರ ಸಂಘಟನೆ ಸದಸ್ಯರು ಅಕ್ರಮ ನೇಮಕಾತಿ, ಅತಿಥಿ ಶಿಕ್ಷಕಿ ಹುದ್ದೆಯ ಗೌರವಧನ ಎತ್ತುವಳಿ ಮಾಡಿದ ಗಂಗಾವತಿ ಎಂಎನ್ಎಂ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಉಪ ಪ್ರಾಚಾರ್ಯ ಕೃಷ್ಣಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಎಸ್ಎಫ್ಐ ಸಂಘಟನೆ ತಾಲ್ಲೂಕು ಅಧ್ಯಕ್ಷ ಗ್ಯಾನೇಶ ಕಡಗದ, ಕಾರ್ಯದರ್ಶಿ ಶಿವಕುಮಾರ, ಉಪಾಧ್ಯಕ್ಷ ನಾಗರಾಜ ಉತ್ತುನೂರ, ಸದಸ್ಯರಾದ ಬಾಲಜಿ, ಶರೀಫ್, ನಾಗರಾಜ, ಪ್ರಶಾಂತ, ಬಸಯ್ಯ ಹಿರೇಮಠ, ಶಂಕರ, ಬಾಳಪ್ಪ ಹುಲಿಹೈದರ ಇದ್ದರು.