ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಬುರ್ಗಾ | ಅಕ್ರಮವಾಗಿ ಮನೆ ನಿರ್ಮಿಸಿದ ಕಂಪನಿ: ಆಕ್ಷೇಪ

Published 1 ಜನವರಿ 2024, 6:11 IST
Last Updated 1 ಜನವರಿ 2024, 6:11 IST
ಅಕ್ಷರ ಗಾತ್ರ

ಯಲಬುರ್ಗಾ: ತಾಲ್ಲೂಕಿನ ಹೊಸಳ್ಳಿ ಗ್ರಾಮದ ಹೊರವಲಯದಲ್ಲಿ ಖಾಸಗಿ ಕಂಪನಿಯವರು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿದ್ದು, ಗ್ರಾಮದ ಕೆಲ ಮುಖಂಡರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಸಂಬಂಧಪಟ್ಟ ಇಲಾಖೆಯವರಿಂದ ಯಾವುದೇ ಪರವಾನಗಿ ಪಡೆದುಕೊಳ್ಳದೇ ರೈತರೊಂದಿಗೆ ಒಪ್ಪಂದ ಮಾಡಿಕೊಂಡ ವಿದ್ಯುತ್‌ ಉತ್ಪಾದಕ ಕಂಪನಿಯವರು ಈ ಅಕ್ರಮ ಕಾಮಗಾರಿಗೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಿದ್ಯುತ್ ಉತ್ಪಾದನಾ ಕಂಪನಿ ವಿವಿಧ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ಹಾಗೂ ಸಿಬ್ಬಂದಿಯ ವಾಸಕ್ಕಾಗಿ ಗ್ರಾಮದ ಶಿವನಗೌಡ, ಸುವರ್ಣಮ್ಮ ಹಾಗೂ ದೊಡ್ಡನಗೌಡ ಎಂಬ ಮೂವರು ರೈತರಿಂದ ಸುಮಾರು 10 ಎಕರೆ ಜಮೀನು ಒಪ್ಪಂದದ ಆಧಾರದ ಮೇಲೆ ಪಡೆದುಕೊಂಡಿದ್ದಾರೆ. ಆದರೆ, ಈ ಬಗ್ಗೆ ಕಂದಾಯ ಇಲಾಖೆಗೆ ಮಾಹಿತಿ ನೀಡಿಲ್ಲ. ಅಲ್ಲದೇ ಯಾವುದೇ ರೀತಿಯ ಭೂ ಪರಿವರ್ತನೆಯಾಗದೇ ಇದ್ದ ಕೃಷಿ ಜಮೀನಿನಲ್ಲಿ ಕೃಷಿಯೇತರ ಚಟುವಟಿಕೆ ಕೈಗೊಳ್ಳುತ್ತಿರುವುದು ಕಾನೂನು ಬಾಹಿರವಾಗಿದೆ. ದೊಡ್ಡ ವಾಹನಗಳ ಸಂಚಾರ, ಬೃಹದಾಕಾರದ ಪರಿಕರಗಳ ಸಂಗ್ರಹಣೆಯ ಕೆಲಸ ಈ ಸ್ಥಳದಲ್ಲಿಯೇ ನಡೆಯಲಿದೆ. ಇದರಿಂದ ಗ್ರಾಮಸ್ಥರಿಗೆ ಅನಗತ್ಯ ತೊಂದರೆಯಾಗುತ್ತಿರುವುದರಿಂದ ಗ್ರಾಮದ ಅನೇಕ ನಾಗರಿಕರು, ವಿವಿಧ ಸಂಘಟನೆಯ ಪದಾಧಿಕಾರಿಗಳು ಖಾಸಗಿ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೋಡಲು ಶೆಡ್ ರೂಪದಲ್ಲಿರುವ ಈ ಮನೆಗಳು ತಾತ್ಕಾಲಿವಾಗಿ ಕಂಡು ಬಂದರೂ ಆಳವಾಗಿ ಬುನಾದಿ ತೋಡಿ ಸಿಮೆಂಟ್ ಬಳಸಿ ಕಾಮಗಾರಿ ಕೈಗೊಂಡಿದ್ದಾರೆ. ಶೌಚಾಲಯ, ಕಚೇರಿ ಹಾಗೂ ವಾಸಯೋಗ್ಯವಾದ ಅಗತ್ಯತೆ ಕೈಗೊಂಡಿದ್ದಾರೆ. ಹೀಗೆ ಸಂಬಂಧಪಟ್ಟ ವಿವಿಧ ಇಲಾಖೆಗಳ ಗಮನಕ್ಕೆ ತರದೇ ಕೈಗೊಳ್ಳುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

‘ಶ್ರೀಮಂತರಿಗೊಂದು ನ್ಯಾಯ ಬಡವರಿಗೊಂದು ನ್ಯಾಯವೇ. ಮನೆಮುಂದೆ ಒಂದು ಕಟ್ಟೆಯನ್ನೂ ಪರವಾನಗಿ ಇಲ್ಲದೇ ಕಟ್ಟಲು ಬರುವುದಿಲ್ಲ ಎನ್ನುವ ಅಧಿಕಾರಿಗಳು ಖಾಸಗಿ ಕಂಪನಿಯೊಂದು ಹೆಜ್ಜೆ ಹೆಜ್ಜೆಗೂ ಅಕ್ರಮಗಳನ್ನು ಎಸಗುತ್ತಿರುವುದನ್ನು ನೋಡಿಯೂ ಮೌನವಹಿಸಿದ್ದು ಬೇಸರಕ್ಕೆ ಕಾರಣವಾಗಿದೆ’ ಎಂದು ಯಮನೂರಪ್ಪ ಹೊಸಮನಿ, ಶರಣಪ್ಪ ಗೌಡ್ರ ಸೇರಿ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕಂದಾಯ ಇಲಾಖೆಯ ಸಿಬ್ಬಂದಿ ಈ ಬಗ್ಗೆ ಕಂಪನಿಯವರ ಕಾಮಗಾರಿ ಕೈಗೊಂಡಿದ್ದ ಸ್ಥಳಕ್ಕೆ ಭೇಟಿ ನೀಡಿ ಪರವಾನಗಿ ಪಡೆದುಕೊಳ್ಳುವಂತೆ ಒತ್ತಾಯಿಸಿದರೂ ಸ್ಪಂದಿಸಿಲ್ಲ. ಕಂಪನಿ ಉಸ್ತುವಾರಿಗಳು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಹೆಸರನ್ನು ಹೇಳಿಕೊಂಡು ಕಾಮಗಾರಿ ಮುಂದುವರಿಸಿದ್ದಾರೆ. ವಿವಿಧ ಸಂಘಟನೆಯ ಮುಖಂಡರು ಕೂಡ ಕಾನೂನುಬದ್ಧವಾಗಿಯೇ ಎಲ್ಲ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದರೂ ಕೇಳುತ್ತಿಲ್ಲ’ ಎಂದು ಗ್ರಾಮದ ಯುವ ಮುಖಂಡ ಶಿವಕುಮಾರ ನಾಗನಗೌಡ್ರ ಹಾಗೂ ಇತರರು ಒತ್ತಾಯಿಸಿದ್ದಾರೆ.

‘ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’

ಪರವಾನಿಗೆ ಇಲ್ಲದೇ ಜಮೀನಿನಲ್ಲಿ ಕಾಮಗಾರಿ ಕೈಗೊಂಡಿರುವ ಉಸ್ತುವಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿಯಲ್ಲಿ ಯಾವುದೇ ಕೃಷಿ ಭೂಮಿಯಲ್ಲಿ ಕೃಷಿಯೇತರ ಚಟುವಟಿಕೆ ಕೈಗೊಳ್ಳುವುದಾದರೆ ಕಂದಾಯ ಇಲಾಖೆಗೆ ಮಾಹಿತಿ ನೀಡಿ ಕೆಲ ನಿಯಮಗಳನ್ನು ಪಾಲಿಸಿಕೊಂಡು ಮುಂದಿನ ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ಆದರೆ ಅವರು ಹಾಗೆ ಮಾಡದೇ ಇರುವುದರಿಂದ ಅಕ್ರಮ ಕಾಮಗಾರಿಯಾಗುತ್ತದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುತ್ತಿದೆ ಎಂದು ಕಂದಾಯ ನಿರೀಕ್ಷಕ ಹಸನ್ ಹೇಳಿದ್ದಾರೆ.

‘ನೋಟಿಸ್ ಜಾರಿ ಮಾಡಲಾಗಿದೆ’

‘ಗ್ರಾಮದಲ್ಲಿ ಯಾವುದೇ ಚಟುವಟಿಕೆಗಳ ಕುರಿತು ಇಲಾಖೆ ನಿಗಾವಹಿಸಿರುತ್ತದೆ. ವಿದ್ಯುತ್ ಉತ್ಪಾದನಾ ಕಂಪೆನಿಯೊಂದು ಏಕಾಏಕಿ ಕಾಮಗಾರಿ ಕೈಗೊಂಡಿದ್ದು ಬೆಳಕಿಗೆ ಬಂದಿದೆ. ರೈತರೊಂದಿಗೆ ಮಾಡಿಕೊಂಡ ಒಪ್ಪಂದವಾಗಿದ್ದರಿಂದ ಕಂಪೆನಿಗೂ ಹಾಗೂ ರೈತರಿಗೂ ನೋಟಿಸ್ ಜಾರಿಮಾಡಿ ಭೂ ಪರಿವರ್ತನೆ ಮತ್ತು ಕಟ್ಟಡ ಕಾಮಗಾರಿಗೆ ಸಂಬಂಧಿಸಿದ ದಾಖಲೆಪತ್ರಗಳನ್ನು ಇಲಾಖೆಗೆ ಪೂರೈಸುವಂತೆ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ಹೊಸಳ್ಳಿ ಗ್ರಾಮ ಲೆಕ್ಕಾಧಿಕಾರಿ ಜಯಶ್ರೀ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT