ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ವಿನ್ಯಾಸದಲ್ಲಿ ಗಣಿಗಾರಿಕೆ ಮೂಡಿದ ‘ಅನುಮತಿ’ ಜಿಜ್ಞಾಸೆ!

Published 29 ಫೆಬ್ರುವರಿ 2024, 5:11 IST
Last Updated 29 ಫೆಬ್ರುವರಿ 2024, 5:11 IST
ಅಕ್ಷರ ಗಾತ್ರ

ಕುಷ್ಟಗಿ: ನಿರ್ಮಾಣ ಹಂತದ ವಸತಿ ವಿನ್ಯಾಸ, ಪುರಸಭೆಗೆ ಸೇರಿದ ಉದ್ಯಾನ ಜಾಗ ಅಥವಾ ಸಾರ್ವಜನಿಕ ಬಳಕೆಗೆ ಮೀಸಲಿರಿಸಿದ ಪ್ರದೇಶದಲ್ಲಿ ಆಳದ ಗಣಿಗಾರಿಕೆ ನಡೆಸಿ ಗೆರಸು ಮಣ್ಣು, ಕಲ್ಲು ಬಳಕೆ ಮಾಡಿಕೊಂಡರೆ ಅದು ಅಕ್ರಮವಲ್ಲ, ಸರ್ಕಾರಕ್ಕೆ ನಷ್ಟವೂ ಆಗುವುದಿಲ್ಲ. ಅಷ್ಟೇ ಏಕೆ ಇಲಾಖೆಯ ಅನುಮತಿಯ ಅಗತ್ಯವೂ ಇಲ್ಲ?!

ಹೌದು, ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಜಿಲ್ಲಾ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸಲ್ಲಿಸಿರುವ ಅಧಿಕೃತ ತಾಂತ್ರಿಕ ವರದಿಯು ಅಚ್ಚರಿಗೆ ಕಾರಣವಾಗಿದೆ.

ಆಗಿದ್ದೇನು: ಪಟ್ಟಣದ ಶಾಖಾಪುರ ರಸ್ತೆ ಸಮೀಪದಲ್ಲಿ ಕಟ್ಟಿಹೊಲ ಎಂಬುವವರಿಗೆ ಸೇರಿದ ವಸತಿ ವಿನ್ಯಾಸಕ್ಕೆ ಸಂಬಂಧಿಸಿದ ಹೊಸ ಬಡವಾಣೆ ನಿರ್ಮಾಣದ ಉದ್ದೇಶದಿಂದ ಭೂಪರಿವರ್ತನೆ ಆಗಿದ್ದು, ಅಲ್ಲಿ ವಸತಿ ವಿನ್ಯಾಸ ರೂಪುಗೊಳ್ಳುತ್ತಿದೆ. ನಗರ ಯೋಜನಾ ಪ್ರಾಧಿಕಾರ ವಸತಿ ವಿನ್ಯಾಸದ ನಕ್ಷೆಗೆ ಅನುಮೋದನೆ ನೀಡಿದೆ. ನಕ್ಷೆಯಲ್ಲಿ ಗುರುತಿಸಿರುವಂತೆ ಸರ್ಕಾರಕ್ಕೆ ಮೀಸಲಿರಿಸಿದ, ಪುರಸಭೆಗೆ ಸೇರಿದ ಸಂರಕ್ಷಿತ ಪ್ರದೇಶ (ಬಫರ್‌ ಝೋನ್)ದಲ್ಲಿ ಅಕ್ರಮ ಗರಸು ಮಣ್ಣು ಗಣಿಗಾರಿಕೆ ನಡೆಸಲಾಗಿದೆ ಎಂಬ ಸಾರ್ವಜನಿಕರ ಆರೋಪದ ಮೇಲೆ ಜ.20 ರಂದು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಸ್ಥಳ ಪರಿಶೀಲನೆ ನಡೆಸಿದ್ದ ಜಿಲ್ಲಾ ಅಭಿವೃದ್ಧಿ ಕೋಶದ ಆಗಿನ ಯೋಜನಾ ನಿರ್ದೇಶಕಿ ಕಾವ್ಯಾರಾಣಿ ಈ ಬಗ್ಗೆ ವರದಿ ಸಲ್ಲಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರ ಬರೆದಿದ್ದರು. ಜ.23 ರಂದು ಸ್ಥಳ ಪರಿಶೀಲನೆ ನಡೆಸಿದ್ದ ಭೂ ವಿಜ್ಞಾನಿಗಳು ಫೆ.8 ರಂದು ವರದಿ ಸಲ್ಲಿಸಿದ್ದಾರೆ.

ವರದಿಯಲ್ಲಿ ಏನಿದೆ?: ಗಣಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ ಸ್ಥಳ ಇನ್ನೂ ಪಟ್ಟಾಭೂಮಿ ಎಂದೇ ವಿವರಿಸಿದ್ದಾರೆ. ಬಫರ್‌ ವಲಯದಲ್ಲಿ ತಲಾ 30x30 ಉದ್ದ ಮತ್ತು ಅಗಲದಲ್ಲಿ ಹಾಗೂ ಸರಾಸರಿ 4.5 ಮೀಟರ್‌ ಆಳದಲ್ಲಿ ಮರಂ ಅನ್ನು ತೆಗೆಯಲಾಗಿದೆ. ಗುಂಡಿ ತೋಡಿದ ಸ್ಥಳದಲ್ಲಿನ ಗೆರಸು ಮಣ್ಣನ್ನು ನಿರ್ಮಾಣ ಹಂತದ ಬಡವಾಣೆಯಲ್ಲಿನ ರಸ್ತೆಗಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಪಟ್ಟಾ ಜಮೀನಿನಲ್ಲಿ ಬಂದ ಕಪ್ಪುಮಣ್ಣಿನ ಮೂಲಕ ಗುಂಡಿ ಭರ್ತಿ ಮಾಡಿದ್ದಾರೆ ಎಂದು ವಿವರಿಸಲಾಗಿದೆ.

ಅಡಿಪಾಯಕ್ಕೆ ಅನುಮತಿ ಬೇಕಿಲ್ಲ–ಸರ್ಕಾರಕ್ಕೆ ನಷ್ಟವಿಲ್ಲ: ಕೆಎಂಎಂಸಿಆರ್ 1994ರ ನಿಯಮ 3-A(a) ಪ್ರಕಾರ ‘ಅಡಿಪಾಯ’ಕ್ಕೆ ತೆಗೆದ ಕಲ್ಲು ಮಣ್ಣ ವಿಲೇವಾರಿಗೆ ಪರವಾನಗಿ ಪಡೆಯುವುದಕ್ಕೆ ಗಣಿ ಇಲಾಖೆಯ ವಿನಾಯಿತಿ ಇರುವುದರಿಂದ ಸರ್ಕಾರಕ್ಕೆ ನಷ್ಟ ಇಲ್ಲ ಎಂದಿದ್ದಾರೆ.

ಆದರೆ, ಅಡಿಪಾಯಕ್ಕೆ ಅನುಮತಿ ಬೇಕಿಲ್ಲ ಎಂದು ಗಣಿ ಅಧಿಕಾರಿಗಳ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ, ಕಟ್ಟಿಹೊಲ ಬಡಾವಣೆಯಲ್ಲಿನ ಬಫರ್‌ ವಲಯದಲ್ಲಿ ಉಂಟಾಗಿರುವ ಗುಂಡಿ ಅಡಿಪಾಯಕ್ಕೆ ತೆಗೆದಿದ್ದಲ್ಲ ಎಂಬ ವರದಿ ಚರ್ಚೆಗೆ ಇಂಬು ನೀಡಿದೆ.

‘ಗಣಿ ಇಲಾಖೆ ವರದಿಯಿಂದ ಅನುಕೂಲ’

ಗಣಿ ಇಲಾಖೆ ನೀಡಿರುವ ವರದಿಗೆ ಸಾರ್ವಜನಿಕರು ಆಕ್ಷೇಪದ ಜೊತೆಗೆ ಪರವಾಗಿಯೂ ಹೇಳಿಕೆ ನೀಡಿದ್ದಾರೆ. ಕಪ್ಪುಮಣ್ಣಿನಲ್ಲಿ ರಸ್ತೆ ಇತರೆ ಕಾಮಗಾರಿ ನಡೆಸಲು ಗರಸುಮಣ್ಣಿಗೆ ಪರದಾಡಬೇಕಿತ್ತು. ಆದರೆ, ಇನ್ನು ಮುಂದೆ ಹೊಸ ಬಡಾವಣೆ ನಿರ್ಮಿಸುವ ಮಾಲೀಕರು ಬಫರ್‌ ವಲಯ, ಉದ್ಯಾನ, ಸಿಎ ಸೈಟ್‌ದಲ್ಲಿ ಗುಂಡಿ ತೋಡಿ ಗರಸುಮಣ್ಣು ಬಳಕೆ ಮಾಡುವುದಕ್ಕೆ ಅನುಕೂಲವಾಗಲಿದೆ ಎಂದು ಎಂ.ದೇವಪ್ಪ ಇತರರು ಹೇಳಿದರು.

ಆದರೆ, ಆಳ, ಅಗಲದ ಗುಂಡಿ ತೆಗೆದು ನಂತರ ಅದನ್ನು ಕಪ್ಪುಮಣ್ಣಿನಿಂದ ಭರ್ತಿ ಮಾಡಿರುವುದು ನಿಯಮಗಳಿಗೆ ವಿರುದ್ಧವಾಗಿದೆ, ಅಷ್ಟಕ್ಕೂ ಕಪ್ಪುಮಣ್ಣು ಭರ್ತಿಯಾಗಿರುವುದರಿಂದ ಮುಂದೆ ಆ ಸರ್ಕಾರಿ ಜಾಗದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಪುರಸಭೆಯ ಕೆಲ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಸ್ಥಳ ಪರಿಶೀಲಿಸಿ ವರದಿ ನೀಡುತ್ತೇವೆ, ನಿಯಮ ಉಲ್ಲಂಘಿಸಿದ್ದರೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.

ವಸತಿ ವಿನ್ಯಾಸದಲ್ಲಿ ಗುಂಡಿ ತೋಡಿರುವುದಕ್ಕೆ ಸಂಬಂಧಿಸಿದಂತೆ ವರದಿ ನೀಡಲು ಪುರಸಭೆಗೆ ಸೂಚಿಸಲಾಗಿದೆ. ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.
ರೇಷ್ಮಾ ಹಾನಗಲ್, ಡಿಯುಡಿಸಿ, ಯೋಜನಾ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT