ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ಕಾಣದ ಭಟ್ಟರನರಸಾಪುರ

ಇಡೀ ಗ್ರಾಮದಲ್ಲಿ ಒಂದೇ ಚರಂಡಿ, ರಸ್ತೆಯಲ್ಲಿಯೇ ಹರಿಯುವ ಚರಂಡಿ ನೀರು, ಸಂಚಾರಕ್ಕೆ ತೊಂದರೆ
Last Updated 3 ಮಾರ್ಚ್ 2022, 13:30 IST
ಅಕ್ಷರ ಗಾತ್ರ

ಭಟ್ಟರನರಸಾಪುರ (ಗಂಗಾವತಿ): ತಾಲ್ಲೂಕಿನ ಭಟ್ಟರ ನರಸಾಪುರ ಗ್ರಾಮದಲ್ಲಿ ಸರಿಯಾದ ಮೂಲಸೌಕರ್ಯಗಳ ಸೌಲಭ್ಯವಿಲ್ಲದೆ ಜನರು ನಿತ್ಯ ತೊಂದರೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಈ ಗ್ರಾಮದಲ್ಲಿ ಸಾವಿರ ಜನಸಂಖ್ಯೆ ಇದ್ದು, ಈವರೆಗೆ ಇಲ್ಲಿ ಶುದ್ದ ಕುಡಿಯುವ ನೀರು, ಚರಂಡಿ, ಶೌಚಾಲಯ, ಸಿಸಿರಸ್ತೆ, ಗ್ರಾಮದ ಸ್ವಚ್ಚತೆ, ರುದ್ರಭೂಮಿ ವ್ಯವಸ್ಥೆ ಕಲ್ಪಿಸಿಲ್ಲ. ಈ ಗ್ರಾಮದಲ್ಲಿ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು ಕಾಣುತ್ತವೆ.

ಇಲ್ಲಿ ಚರಂಡಿಗಳು ನಿರ್ಮಾಣವಾಗದ ಕಾರಣ, ರಸ್ತೆಯಲ್ಲೇ ಕಸ, ಕಡ್ಡಿ, ಪ್ಯಾಸ್ಟಿಕ್ ಮತ್ತಿತರ ತ್ಯಾಜ್ಯ ತುಂಬಿ ತುಳುಕುವ ಜೊತೆಗೆ ಮನೆಗಳಲ್ಲಿನ ತ್ಯಾಜ್ಯ ನೀರು ಹರಿಯುತ್ತಿದ್ದು, ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಎದುರಾಗಿದೆ.

ಇಷ್ಟೇಲ್ಲ ಸಮಸ್ಯೆಗಳು ಕಣ್ಣಿಗೆ ಕಂಡರೂ ಗ್ರಾ.ಪಂ ಪಿಡಿಒ ಮತ್ತು ಗ್ರಾಮದ ಸದಸ್ಯ ಕಾಣದಂತೆ ಜಾಣ ಕುರಡು ತೋರುತ್ತಿದ್ದಾರೆ. ಗ್ರಾ.ಪಂನಿಂದ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಕಾಮಗಾರಿಗಳನ್ನು ಹಾಕಿಕೊಂಡು ಕೆಲಸ ಮಾಡಬಹುದಿತ್ತು. ಆದರೆ ಈವರೆಗೆ ಯಾವ ಕಾಮಗಾರಿ ಮಾಡಿಲ್ಲ ಎಂದು ಗ್ರಾಮಸ್ಥ ಶೇಖಪ್ಪ ಹೇಳುತ್ತಾರೆ

ಕುಡಿಯಲು ನೀರಿಲ್ಲ: ಗ್ರಾಮದಲ್ಲಿನ ಜನರು ಕುಡಿಯಲು ಶುದ್ಧ ನೀರಿಲ್ಲದೆ, ಭತ್ತದ ಜಮೀನುಗಳಿಂದ ಹರಿದು ಬರುವ ಕಾಲುವೇ ನೀರು ಕುಡಿಯಬೇಕಾಗಿದೆ. ಇದರಿಂದ ಇಲ್ಲನ ಜನರಿಗೆ ಜ್ವರ, ಕೈ, ಕಾಲು ನೋವು ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇಲ್ಲಿ ನೆಪಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಒಂದಿದ್ದು, ದುರಸ್ತಿ ಕಾದು 2 ವರ್ಷಗಳಾಗಿವೆ.

ಗ್ರಾಮವೆಲ್ಲ ಸುತ್ತಿದರೆ ಒಂದೇ ಚರಂಡಿ ಕಾಣುತ್ತದೆ. ಚರಂಡಿ ಇದ್ದರೂ, ನೀರು ಸರಾಗವಾಗಿ ಹರಿಯುವುದಿಲ್ಲ. ಇರುವ ಚರಂಡಿಯನ್ನು ಸ್ವಚ್ಛಗೊಳಿಸುವ ಕಾರ್ಯವು ನಡೆಯುತ್ತಿಲ್ಲ. ಚರಂಡಿ ಇಲ್ಲದೆ ರಸ್ತೆ ಮಧ್ಯೆದಲ್ಲೆ ಚರಂಡಿ ಸೃಷ್ಟಿಯಾಗಿ ಕೊಳಚೆ ನೀರು ನಿಂತು ಗ್ರಾಮ ಗಬ್ಬು ನಾರುತ್ತಿದೆ.

ರಸ್ತೆ ಇಲ್ಲ: ಗ್ರಾಮದ ವಿವಿಧ ಓಣಿಗಳಿಗೆ ಇನ್ನೂ ರಸ್ತೆ ಭಾಗ್ಯ ಬಂದಿಲ್ಲ. ಜನರು ಕಲ್ಲು ಮಣ್ಣು ರಸ್ತೆಯಲ್ಲೇ ಸಂಚರಿಸಬೇಕು. ಮಳೆಗಾಲದಲ್ಲಿ ಈ ಗ್ರಾಮದ ರಸ್ತೆಗಳು ಕೆಸರು ಗದ್ದೆಯಂತಾಗಿ, ಮಳೆ ನೀರು ಮನೆಗಳಿಗೆ ನುಗ್ಗುತ್ತವೆ. ಈ ಕುರಿತು ಪಿಡಿಒ ತಿಳಿಸಿದರೆ ತಾತ್ಕಾಲಿಕವಾಗಿ ಮೊರಮ್ ಹಾಕಿಸಿ ಕೈಬಿಡುತ್ತಾರೆ ಎಂದು ಗ್ರಾಮದ ನಿವಾಸಿ ಮಹೇಶ ನಾಯಕ ಹೇಳುತ್ತಾರೆ.

ಗ್ರಾಮದ ಮುಖ್ಯ ರಸ್ತೆ ಬಹಿರ್ದೆಸೆಯ ಜಾಗವಾಗಿದೆ. ಇಲ್ಲಿ ಸಾರ್ವಜನಿಕ ಶೌಚಾಲಯ, ವೈಯಕ್ತಿಕ ಶೌಚಾಲಯಗಳ ಸಂಖ್ಯೆ ಕಡಿಮೆ ಇದ್ದು, ಜನ ಬಯಲನ್ನೇ ಅವಲಂಬಿಸಿದ್ದಾರೆ. ಇದರಿಂದ ಶಾಲಾ ಮಕ್ಕಳ, ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 230ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಶಾಲೆ ಮುಂಭಾಗ ಕೊಳಚೆ ನೀರು ಹರಿಯುತ್ತವೆ. ಅದರ ಪಕ್ಕ ಮಹಿಳೆಯರು ಬಟ್ಟೆ ತೊಳೆದು, ಪ್ಲಾಸ್ಟಿಕ್ ತ್ಯಾಜ್ಯ, ಬಟ್ಟೆ ಎಸೆದು ಹೊಲಸು ಮಾಡಲಾಗುತ್ತಿದೆ.

*

ನರೇಗಾ ಯೋಜನೆಯಡಿ ಕಡಿಮೆ ಪ್ರಮಾಣದ ಚರಂಡಿ, ಸಿಸಿ ರಸ್ತೆಗಳ ನಿರ್ಮಾಣಕ್ಕೆ ಮಾತ್ರ ಅವಕಾಶವಿದೆ. ಶಾಲೆಯ ಸಮೀಪ ಮಹಿಳೆಯರು ಬಟ್ಟೆ ತೊಳೆಯುವ ನೀರಿನ ಟ್ಯಾಂಕನ್ನು ಶೀಘ್ರವೇ ಸ್ಥಳಾಂತರಿಸಲಾಗುತ್ತದೆ.

ಕೃಷ್ಣ, ಪಿಡಿಒ, ಕೆಸರಹಟ್ಟಿ

ಭಟ್ಟರನರಸಾಪುರ ಗ್ರಾಮಕ್ಕೆ ಈವರೆಗೆ ರಸ್ತೆ, ಚರಂಡಿ, ರುದ್ರಭೂಮಿ ಸೇರಿದಂತೆ ಮೂಲಸೌಕರ್ಯಗಳೇ ಇಲ್ಲ. ಕ್ಷೇತ್ರದ ಶಾಸಕರು ಮತ ಕೇಳಲು ಗ್ರಾಮಕ್ಕೆ ಬರುತ್ತಾರೆ. ಅಭಿವೃದ್ಧಿ ಮಾಡಲು ಬರಲ್ಲ.

ದೇವರಾಜ, ಗ್ರಾಮದ ನಿವಾಸಿ ಭಟ್ಟರನರಸಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT