ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಗ ಪಡೆಯದ 104 ಕೆರೆ ತುಂಬಿಸುವ ಯೋಜನೆ

ದಶಕಗಳಿಂದ ಹನಿ ನೀರೂ ಕಾಣದೆ ಒಡಲು ಒಣಗಿಸಿಕೊಂಡು ನಿಂತ ಕೆರೆಗಳು: ಕೆರೆ ನಿರ್ಮಿಸಿ ಇತರರಿಗೆ ಮಾದರಿಯಾದ ಗ್ರಾಮಸ್ಥರು
Last Updated 20 ಸೆಪ್ಟೆಂಬರ್ 2021, 9:03 IST
ಅಕ್ಷರ ಗಾತ್ರ

ಕೊಪ್ಪಳ: ಕೊಪ್ಪಳ ಏತ ನೀರಾವರಿ ಯೋಜನೆಯಡಿ 24 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಜಿಲ್ಲೆಯ 104ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಭೂಮಿಪೂಜೆಯಲ್ಲಿಯೇ ಸಂಪನ್ನಗೊಂಡಿದೆ. ಕೆರೆಗಳಿಗೆ ಹನಿ ನೀರು ಬಾರದೇ ಸತತ ಬರಗಾಲದ ಪ್ರದೇಶ ಎಂಬ ಹಣೆಪಟ್ಟಿ ಕಾಯಂ ಆಗುತ್ತಿದೆ.

ಕೊಪ್ಪಳ ಏತ ನೀರಾವರಿ ಯೋಜನೆ, ಶಿಂಗಟಾಲೂರು, ಕೃಷ್ಣಾ ಬಿ ಸ್ಕೀಂ, ತುಂಗಭದ್ರಾ ಜಲಾಶಯದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ವೇಗ ದೊರೆಯದೇ ಸಂಪೂರ್ಣ ನೀರಾವರಿ ಸಂಕಲ್ಪದ ಆಶಯ ಈಡೇರದೆ ಹಾಗೆ ಉಳಿದಿದೆ. ತುಂಗಭದ್ರಾದಲ್ಲಿ ನೀರು ಹರಿದಂತೆ ಹಣದ ಹೊಳೆಯೇ ಹರಿದಿದ್ದರು ಯಾವುದೇ ಯೋಜನೆ ಸಾಕಾರಗೊಂಡಿಲ್ಲ.

ಪುನಶ್ಚೇತನ: ಕುಷ್ಟಗಿ ತಾಲ್ಲೂಕಿನ ನಿಡಶೇಶಿ, ಕೊಪ್ಪಳ ತಾಲ್ಲೂಕಿನ ಗಿಣಗೇರಾ, ಕಲ್ಲತಾವರಗೇರಾ ಮತ್ತು ಹಿರೇಹಳ್ಳವನ್ನು ಸಾರ್ವಜನಿಕರ ಸಹಭಾಗಿತ್ವ ಮತ್ತು ಇಲ್ಲಿನ ಉದ್ಯಮಗಳ ಸಹಕಾರದಿಂದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ದಾಖಲೆ ಅವಧಿಯಲ್ಲಿ ಪುನಶ್ಚೇತನಗೊಳಿಸಿ ಸೈ ಎನಿಸಿಕೊಂಡರು. ಈ ಸಾರಿ ಹೆಚ್ಚಿನ ಮುಂಗಾರು ಮಳೆಯಿಂದ ಕೆರೆಗೆ ನೀರು ಬಂದಿದೆ.

ಈ ಕೆರೆಗಳಿಗೆ ತುಂಗಭದ್ರಾ ಜಲಾಶಯದಿಂದ ಪೈಪ್‌ಲೈನ್ ಮೂಲಕ ನೀರು ತರಬೇಕಾಗಿದೆ. ಮಳೆಯಾಶ್ರಿತ ಈ ಪ್ರದೇಶದಲ್ಲಿ ಕೆರೆಗಳು ಹೆಚ್ಚು ಮಹತ್ವ ಪಡೆದಿವೆ. ಅವುಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುವುದು ಇಲ್ಲಿನ ಜನರ ಅಭಿಮತವಾಗಿದೆ. ಚುನಾವಣೆ ಸಂದರ್ಭದಲ್ಲಿ 'ಕೆರೆಗೆ ನೀರು' ಮತ ತರುವ ವಿಷಯವಾಗಿದ್ದು, ಆಳುವ ಸರ್ಕಾರಗಳು ಮುತುವರ್ಜಿ ವಹಿಸದೇ ಹಾಗೆ ಉಳಿದಿದೆ.

ಹನುಮಸಾಗರ ಹೋಬಳಿಯ ಹನುಮಸಾಗರ, ಕಾಟಾಪುರ, ಕಬ್ಬರಗಿ, ಬೀಳಗಿ, ಹೊಸಹಳ್ಳಿ ಮುಂತಾದ ಕೆರೆಗಳನ್ನು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಸತತ ಹೋರಾಟ ನಡೆದಿದೆ. ಇಲ್ಲಿನ ಕೆರೆಗಳು ಮಳೆಯಿಲ್ಲದೇ ಬತ್ತಿಹೋಗಿ ಬರಿದಾಗಿವೆ. ಕೆರೆಗಳು ಜನರ ಜೀವನಾಡಿಯಾಗಿದ್ದು, ಅಂತರ್ಜಲ ಕುಸಿತದಿಂದ ಕುಡಿಯುವ ನೀರಿಗೂ ತತ್ವಾರವಾಗಿದೆ. ಮಳೆ ಇಲ್ಲದೇ ಜನ, ಜಾನುವಾರುಗಳಿಗೆ ತೊಂದರೆಯಾಗಿದೆ. ಹನುಮಸಾಗರದ ಉತ್ತರ ಭಾಗದ ಗುಡ್ಡದ ಕೆಳಗಿರುವ ಕೆರೆ ಮತ್ತು ದಕ್ಷಿಣ ಭಾಗದ ಕೆರೆ ತುಂಬಿಸುವ ಒತ್ತಡ ಸರ್ಕಾರದ ಮೇಲೆ ಇದೆ.

ತುಂಗಭದ್ರಾ, ಕೃಷ್ಣಾ ಮತ್ತು ಸಿಂಗಟಾಲೂರ ಏತ ನೀರಾವರಿಯಿಂದ ಜಿಲ್ಲೆಯ ನಾಲ್ಕು ತಾಲ್ಲೂಕಿನ 104 ಕೆರೆ ತುಂಬಿಸುವ ಯೋಜನೆಗೆ ₹ 1527 ಕೋಟಿ ಪ್ರಸ್ತಾವ ಸಲ್ಲಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳದೇ ಯಥಾಸ್ಥಿತಿ ಇದೆ. ಬರಗಾಲಪೀಡಿತ ಜಿಲ್ಲೆಯ ಜನರ ನೀರಿನ ಬವಣೆ ಅರಿತ ಸರ್ಕಾರ ಕೆರೆತುಂಬಿಸುವ ಯೋಜನೆಗಳಿಗೆ ಚಾಲನೆ ನೀಡಿತ್ತು. ಕೆಲವು ಯೋಜನೆ ಆರಂಭಿಸಬೇಕು ಎಂದು ಕಾರ್ಯಾದೇಶ ನೀಡಿದ್ದರೂ ಶೇ 95ರಷ್ಟು ಕಾಮಗಾರಿ ನಿಗದಿತ ಅವಧಿಯಲ್ಲಿ ನಡೆಯದೇ ಯೋಜನೆ ದುಬಾರಿಯಾಗುತ್ತಾ ಸಾಗಿದೆ.

ಬೃಹತ್ ನೀರಾವರಿ ಮತ್ತು ಸಣ್ಣ ನೀರಾವರಿ ಮತ್ತು ಅಂತರ್ಜಲ ವೃದ್ಧಿ ಇಲಾಖೆಯಿಂದ ಪ್ರಸ್ತಾವ ಸಲ್ಲಿಸಲಾಗಿದೆ. ಕೆಲವು ತಾಂತ್ರಿಕ, ರಾಜಕೀಯ ಅಡ್ಡಿಗಳಿಂದ ಈ ಯೋಜನೆಗಳು ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡದೇ ಇರುವುದರಿಂದ ಸಾಧಕ-ಬಾಧಕ ಪರಿಶೀಲಿಸುವಂತೆ ಮಾಡಿದೆ.

ತಾವರಗೇರಾ ಸಮೀಪದ ಪುರ ಗ್ರಾಮದಲ್ಲಿ ಕೆರೆ ನಿರ್ಮಾಣವಾಗಿ 14 ವರ್ಷ ಕಳೆದಿವೆ. ಆದರೆ ಅದು ತುಂಬಿರುವುದು ಕೇವಲ ಎರಡು ಬಾರಿ ಮಾತ್ರ. 2005-2006 ರಲ್ಲಿ ಸಣ್ಣ ನೀರಾವರಿ ಇಲಾಖೆಯು ₹ 32 ಕೋಟಿ ವೆಚ್ಚದಲ್ಲಿ ಈ ಕೆರೆ ನಿರ್ಮಿಸಿದೆ. ಇದು 144.29 ಮಿಲಿಯನ್‌ ಕ್ಯೂಬಿಕ್‌ ಫೀಟ್‌ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.

2009ರಲ್ಲಿ ಈ ಕೆರೆ ಮೊದಲ ಬಾರಿ ತುಂಬಿ ಕೋಡಿ ಬಿದ್ದಿತ್ತು. 14 ವರ್ಷಗಳ ನಂತರ ಈ ವರ್ಷ ತುಂಬಿದೆ.

ಕೆರೆ ನಿರ್ಮಾಣದಿಂದ ಕನ್ನಾಳ ಹಾಗೂ ಪುರ ಗ್ರಾಮಗಳ ರೈತರ 673 ಹೆಕ್ಟೇರ್ ಜಮೀನು ಮುಳುಗಡೆಯಾಗಿದೆ. ಅದರೆ ಈ ಭಾಗದ ರೈತರಿಗೆ ನೀರಾವರಿ ಮಾತ್ರ ಮರೀಚಿಕೆಯಾಗಿದೆ. ಸಕಾಲಿಕ ನಿರ್ವಹಣೆ, ಸಣ್ಣಪುಟ್ಟ ದುರಸ್ತಿ ಅಷ್ಟಕಷ್ಟೇ ಆಗಿದೆ. ರಕ್ಷಣಾ ಗೋಡೆ ಬಿರುಕು ಬಿಟ್ಟಿದೆ. ಕುಸಿಯುವ ಹಂತದಲ್ಲಿದೆ. ಕೆರೆಯ ತಡೆಗೋಡೆ ಮೇಲೆ ಮುಳ್ಳು ಕಂಟಿ ಬೆಳೆದಿದೆ. ಇರುವೆ, ಇಲಿ, ಹೆಗ್ಗಣ ಹಾಗೂ ಉಡದ ಬಿಲಗಳು ನಿರ್ಮಾಣವಾಗಿವೆ. ಇವುಕೆರೆಏರಿಯ ತಡೆಗೋಡೆಗೆ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ.

ಜಿಲ್ಲೆಯಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆ ಅತ್ಯಂತ ಮಹತ್ವಾಕಾಂಕ್ಷೆಯದಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಗಂಭೀರವಾದ ಪ್ರಯತ್ನ ಮಾಡಬೇಕು ಎಂದು ಜಿಲ್ಲೆಯ ಜನರ ಒತ್ತಾಶೆ ಕೂಡ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT