ಸೋಮವಾರ, ನವೆಂಬರ್ 28, 2022
20 °C
ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ; ಬಿ.ಎಸ್.ರೇಖಾ ಹೇಳಿಕೆ

ಜೈಲುಗಳು ಸುಧಾರಣಾ ಕೇಂದ್ರಗಳಾಗಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ಆಕಸ್ಮಿಕವಾಗಿ ಅಥವಾ ಸನ್ನಿವೇಶಕ್ಕೆ ಬಲಿಯಾಗಿ ದುರ್ಬಲ ಮನಸ್ಥಿತಿಯಲ್ಲಿ ಅಪರಾಧವೆಸಗಿ ಜೈಲುಸೇರಿದ ವಾಸ ಮಾಡುತ್ತಿರುವ ಕೈದಿಗಳ ಸುಧಾರಣೆ ಮೂಲಕ ಜೈಲುಗಳು ಸುಧಾರಣಾ ಕೇಂದ್ರಗಳಾಗಿ ಮಾರ್ಪಾಡಾಗಬೇಕು’ ಎಂದು ಜಿಲ್ಲಾ ಸೆಷೆನ್ಸ್‌ ನ್ಯಾಯಾಧೀಶರಾದ ಬಿ.ಎಸ್.ರೇಖಾ ಅವರು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಮತ್ತು ಅರಿವಿನ ಮೂಲಕ ನಾಗರಿಕ ಸಬಲೀಕರಣ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದೇ ವೇಳೆ ಬಂಧಿತ ವ್ಯಕ್ತಿಗಳ ವಿಶೇಷ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

‘ಉದ್ದೇಶಪೂರ್ವಕವಾಗಿ ಮಾಡುವ ತಪ್ಪಿಗೆ ಕ್ಷಮೆ ಇಲ್ಲ. ಆದರೆ, ದುರ್ಬಲ ಕ್ಷಣಗಳಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಅಪರಾಧ ಮಾಡುವ ವ್ಯಕ್ತಿಗೆ ಉತ್ತಮ ಬದುಕು ರೂಪಿಸಿಕೊಳ್ಳಲು ಇನ್ನೊಂದು ಅವಕಾಶ ನೀಡಬಹುದು. ಕಾನೂನು ನೀಡುವ ಶಿಕ್ಷೆ ಪೂರ್ಣಗೊಳಿಸಿ ಉತ್ತಮ ಬದುಕು ನಡೆಸಬೇಕು. ಜೈಲಿನಲ್ಲಿ ಗ್ರಂಥಾಲಯ, ಆರೋಗ್ಯ ಸೇವೆ ಹಾಗೂ ಉಚಿತ ಕಾನೂನು ಸಲಹೆಗಳು ದೊರೆಯುತ್ತವೆ. ಅವುಗಳನ್ನು ಬಳಸಿಕೊಂಡು ಪರಿವರ್ತನೆ ಹೊಂದಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ್ ಮಾತನಾಡಿ ‘ಪ್ರಾಧಿಕಾರ ಸ್ಥಾಪನೆಯಾಗಿ 26 ವರ್ಷಗಳು ಪೂರ್ಣಗೊಂಡಿವೆ. ಇದುವರೆಗೂ ದುರ್ಬಲ ಹಾಗೂ ಬಡ ವರ್ಗದವರ ಕೋಟ್ಯಂತರ ಪ್ರಕರಣಗಳನ್ನು ಪ್ರಾಧಿಕಾರದಿಂದ ನಿರ್ವಹಿಸಲಾಗಿದೆ. ಪ್ರಾಧಿಕಾರದಿಂದ ಬರೀ ಕಾನೂನು ಸಲಹೆ ಮಾತ್ರವಲ್ಲದೆ ಆರೋಪಿ ಬಯಸಿದಲ್ಲಿ ಅವರ ಪರವಾಗಿ ವಾದಿಸಲು ವಕೀಲರನ್ನು ಸಹ ನೇಮಕ ಮಾಡಿ ಕೊಡಲಾಗುತ್ತದೆ’ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಲಕನಂದಾ ಮಳಗಿ, ವಕೀಲರಾದ ಎಸ್.ಬಿ.ಪಾಟೀಲ, ಎಂ.ಎ.ಹನಮಂತರಾವ್, ಜಿಲ್ಲಾ ಕಾರಾಗೃಹದ ಜೈಲರ್ ಹನುಮಂತ್ರಾಯ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶಶಿಧರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಚಾಲನೆ: ನಾಗರಿಕ ಸಬಲೀಕರಣ ಅಭಿಯಾನ ಅಂಗವಾಗಿ ಬಂಧಿತ ವ್ಯಕ್ತಿಗಳಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ ನಡಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.