ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿಯಲ್ಲಿ ಸಮಸ್ಯೆಗಳದ್ದೇ ಕಾರುಬಾರು

ಉತ್ತಮ ಚರಂಡಿಗಳಿಲ್ಲ, ಶೌಚಾಲಯ ಸ್ಥಿತಿ ಶೋಚನೀಯ, ಸ್ವಚ್ಛತೆ ಮರೀಚಿಕೆ
Last Updated 20 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಗಂಗಾವತಿ: ಮೇಲ್ನೋಟಕ್ಕೆ ಸುಂದರವಾಗಿ ಕಾಣುವ ಇಲ್ಲಿನ ಪಂಪಾನಗರ, ಬೆಂಡರವಾಡಿ, ಜಯನಗರ, ಮುತ್ತಣ್ಣಗಲ್ಲಿ ಪ್ರದೇಶಗಳಲ್ಲಿ ಒಳಹೊಕ್ಕರೆ ಸಾಕು ಸಾಲು ಸಾಲು ಸಮಸ್ಯೆಗಳು ಕಣ್ಣಿಗೆ ರಾಚುತ್ತವೆ.

ಇಲ್ಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಎನ್ನುವುದೇ ಮರೀಚಿಕೆಯಾಗಿದೆ. ಉತ್ತಮ ಚರಂಡಿಗಳಿಲ್ಲ. ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿದೆ. ಕಸ ವಿಲೇವಾರಿಯಾಗದೆ ಎಲ್ಲಂದರಲ್ಲಿ ಬಿದ್ದಿದೆ. ಖಾಲಿ ನಿವೇಶನಗಳಂತೂ ತ್ಯಾಜ್ಯ ಸಂಗ್ರಹದ ತೊಟ್ಟಿಗಳಾಗಿವೆ. ಶೌಚಾಲಯಗಳ ಸ್ಥಿತಿಯಂತೂ ಹೇಳತೀರದಾಗಿದೆ.

ಈ ನಾಲ್ಕು ವಾರ್ಡುಗಳಲ್ಲಿ ಸೇರಿ ಒಟ್ಟು 12 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ನಗರಸಭೆ ವತಿಯಿಂದ ದೊರೆಯಬೇಕಾದ ಮೂಲಸೌಕರ್ಯಗಳು ಸರಿಯಾಗಿ ತಲುಪುತ್ತಿಲ್ಲ‌. ಇಲ್ಲಿನ ಖಾಲಿ ನಿವೇಶನಗಳು ಅವ್ಯವಸ್ಥೆ ಆಗರವಾಗಿ ಮಾರ್ಪಟ್ಟಿವೆ.

2ನೇ ವಾರ್ಡಿನ ಬೆಂಡರವಾಡಿ, ವಾಲ್ಮೀಕಿ ವೃತ್ತ, 3ನೇ ವಾರ್ಡ್‌ನ ಕುಮಾರರಾಮ ಬಡವಾಣೆ, ಜಯನಗರ, ಈದ್ಗಾ ಕಾಲೊನಿ ರಸ್ತೆಗಳಲ್ಲಿ ಜನರು ತಾಜ್ಯ ಎಸೆಯುತ್ತಿರುವುದರಿಂದ ಈ ಪ್ರದೇಶಗಳು ಗಬ್ಬುನಾರುತ್ತಿವೆ. ಅಲ್ಲದೆ ಬಡಾವಣೆ ಒಳಗಿನ ರಸ್ತೆ ಬದಿಯು ಕಸ ಸಂಗ್ರಹವಾಗಿ, ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ.

ಇಲ್ಲಿನ ಕಸದಲ್ಲಿ ಹಂದಿ, ಬೀದಿನಾಯಿ, ಬಿಡಾಡಿ ದನಗಳ ಹಾವಳಿ ಮಿತಿಮೀರಿ ಹೋಗಿದ್ದು, ನಗರಸಭೆ ಮಾತ್ರ ಇತ್ತ ಗಮನ ಹರಿಸುತ್ತಿಲ್ಲ ಎಂಬುದು ವಾರ್ಡಿನ ನಿವಾಸಿಗಳ ದೂರು.

ಚರಂಡಿಗಳ ಸ್ವಚ್ಚತೆ ಇಲ್ಲ: ಜಯನಗರ ಭಾಗದಲ್ಲಿನ 4 ವಾರ್ಡುಗಳಲ್ಲಿ ಸಮಯಕ್ಕೆ ತಕ್ಕಂತೆ ಚರಂಡಿ ನಿರ್ವಹಣೆ ಮಾಡದ ಕಾರಣ ದುರ್ವಾಸನೆ ಬೀರುತ್ತಿವೆ. ಇದರಲ್ಲಿ ತಾಜ್ಯ ಸರಾಗವಾಗಿ ಹರಿದು ಹೋಗದ ಕಾರಣ ಸೊಳ್ಳೆಗಳ ಕಾಟ ವಿಪರೀತವಾಗಿರುತ್ತದೆ. ಇದರಿಂದ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಪಾಲಾಗುತ್ತಿದ್ದಾರೆ.

ದುರಸ್ತಿ ಕಾಣದ ಶೌಚಾಲಯ: 2ನೇ ವಾರ್ಡಿನಲ್ಲಿನ ಮಹಿಳೆಯರ ಶೌಚಾಲಯ ಹಾಳಾಗಿದ್ದು, ಇನ್ನೂ ಸರಿಪಡಿಸಿಲ್ಲ. ಈ ಶೌಚಾಲಯವನ್ನು 600ಕ್ಕೂ ಹೆಚ್ಚು ಮಹಿಳೆಯರು ಬಳಸುತ್ತಿದ್ದು, ನಿರ್ವಹಣೆ ಕೊರತೆಯಿಂದ ಗಬ್ಬುನಾರುತ್ತಿದೆ. ಇದರಿಂದ ಮಹಿಳೆಯರು ಶೌಚಕ್ಕಾಗಿ ಬಯಲನ್ನೆ ಆಶ್ರಯಿಸಿದ್ದಾರೆ.

ಆಗದ ತ್ಯಾಜ್ಯ ವಿಲೇವಾರಿ: 1,2 ಮತ್ತು 3ನೇ ವಾರ್ಡಿನ ಮನೆಗಳಿಂದ ನಗರಸಭೆ ಸಿಬ್ಬಂದಿ 5 ರಿಂದ 6 ದಿನಕ್ಕೊಮ್ಮೆ ಕಸ ಸಂಗ್ರಹ ಮಾಡುತ್ತಿರುವ ಕಾರಣ, ಉಳಿದ ಕಸವನ್ನು ಜನರು ಎಲ್ಲೆಂದರಲ್ಲೆ ಎಸೆಯುತ್ತಿದ್ದಾರೆ. ವಾರ್ಡಿನ ಸಾರ್ವಜನಿಕ ಸ್ಥಳದಲ್ಲಿನ ಕಸವನ್ನು ನಗರಸಭೆ 15 ದಿನಕೊಮ್ಮೆ ವಿಲೇವಾರಿ ಮಾಡುತ್ತಿರುವುದರಿಂದ ಉಳಿದ ದಿನಗಳಲ್ಲಿ ವಾರ್ಡುಗಳು ಅಸ್ವಚ್ಚತೆಯಿಂದ ಕೂಡಿರುತ್ತವೆ.

ಬೆಳಗದ ಬೀದಿ ದೀಪಗಳು: ಜಯನಗರದ ಮುಖ್ಯರಸ್ತೆ ಸೇರಿದಂತೆ ಬಡವಾಣೆ ಒಳಗಿನ ವಿದ್ಯುತ್ ಕಂಬಗಳಿಗೆ ಸರಿಯಾದ ಬೀದಿ ದೀಪಗಳೇ ಇಲ್ಲ. ರಾತ್ರಿ ವೇಳೆಯಲ್ಲಿ ವಿದ್ಯುತ್ ಸಂಪರ್ಕ ಕಡಿತವಾದರೆ, ವೃದ್ಧರು, ಮಹಿಳೆಯರು, ಮಕ್ಕಳು ಕತ್ತಲಲ್ಲೆ ಸಂಚಾರ ಮಾಡಬೇಕಾಗುತ್ತದೆ‌.

ನೀರಿನ ಸಮಸ್ಯೆ: ನಗರಸಭೆ ವತಿಯಿಂದ 1 ದಿನ ಬಿಟ್ಟು 1 ದಿನ 2 ಗಂಟೆ ನೀರು ಪೂರೈಸುತ್ತಿದ್ದು, ಬೇಸಿಗೆ ಇರುವ ಕಾರಣ ಜನರು ನೀರಿಗೆ ಪರದಾಡಬೇಕಾದ ಸ್ಥಿತಿ ಇದೆ. ನಗರಸಭೆಯಿಂದ 24x7ನೀರು ಪೂರೈಸುವ ಯೋಜನೆ ಕೈಗೆತ್ತಿಕೊಂಡರು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

*

ಶೌಚಾಲಯ ಹಾಳಾಗಿ ಹಲವು ತಿಂಗಳು ಕಳೆದಿವೆ. ನಗರಸಭೆ ಸದಸ್ಯರು ದುರಸ್ತಿ ಮಾಡಿಸುತ್ತಿಲ್ಲ. ಶೌಚಾಲಯದಿಂದ ದುರ್ವಾಸನೆ ಬರುತ್ತಿದೆ. ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ.

–ತಾಜ್ ಬೀ, 2ನೇ ವಾರ್ಡಿನ ನಿವಾಸಿ,

*

ವಾರ್ಡಿನಲ್ಲಿ ಬೀದಿ ದೀಪಗಳು ಹಾಳಾದರೆ, ತಕ್ಷಣ ಹೊಸ ದೀಪ ಅಳವಡಿಸಲ್ಲ. ಈ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

–ಹುಸೇನ್ ಭಾಷ, 3ನೇ ವಾರ್ಡಿನ ನಿವಾಸಿ

*

ಶೌಚಾಲಯವನ್ನು ಸಾಕಷ್ಟು ಬಾರಿ ದುರಸ್ತಿ ಮಾಡಿಸಿ ನಗರಸಭೆ ವತಿಯಿಂದ ಮೊರಂ ಹಾಕಿಸಲಾಗಿದೆ. ಮಹಿಳೆಯರು ಅದನ್ನು ಸ್ವಚ್ಛವಾಗಿ ಇಟ್ಟುಕೊಳ್ಳುತ್ತಿಲ್ಲ. ಕೆಲ ಕಿಡಿಗೇಡಿಗಳು ನೀರಿನ ಪೈಪ್, ಮೋಟರ್ ಹಾಳು ಮಾಡುತ್ತಾರೆ. ಈ ವಿಷಯ ಗಮನಕ್ಕೆ ಬಂದಿದ್ದು, ಕ್ರಮ ಕೈಗೊಳ್ಳಲಾಗುವುದು

–ಶರಭೋಜಿರಾವ್, ನಗರಸಭೆ ಸದಸ್ಯ, 4ನೇ ವಾರ್ಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT