ಸೋಮವಾರ, ನವೆಂಬರ್ 18, 2019
21 °C

ಎರಡನೇ ಬೆಳೆಗೆ ನೀರು: ಎಡದಂಡೆ ಕಾಲುವೆ ರೈತರನ್ನು ಕಾಡುತ್ತಿರುವ ಸವಳು ನೆಲ

Published:
Updated:
Prajavani

ಕೊಪ್ಪಳ: ಜಿಲ್ಲೆಯ ವಾಣಿಜ್ಯ ನಗರಿಯೆಂದೇ ಹೆಸರುವಾಸಿಯಾದ ಕಾರಟಗಿ ತಾಲ್ಲೂಕು ಸಂಪೂರ್ಣ ನೀರಾವರಿ ಒಳಗೊಂಡ ಪ್ರದೇಶ. ಭತ್ತದ ಬೆಳೆಯೇ ಇಲ್ಲಿನ ಜೀವ ದ್ರವ್ಯ. ಭತ್ತಕ್ಕೆ ನೀರು ಇಲ್ಲವೆಂದರೆ ಈ ಭಾಗದ ಜನರ ಜಂಘಾಬಲವೇ ಉಡುಗುತ್ತದೆ. ಪ್ರಸ್ತುತ ವರ್ಷ ಎರಡನೇ ಬೆಳೆಗೆ ನೀರು ಬರಲಿದೆ ಎಂಬ ಆಶಾಭಾವದೊಂದಿಗೆ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ.

ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆ ವ್ಯಾಪ್ತಿಗೆ ಬರುವ ತಾಲ್ಲೂಕಿನಲ್ಲಿ ನದಿಯ ನೀರು ಸಮೃದ್ಧವಾಗಿ ಹರಿಯುತ್ತದೆ. ಹರಿಯದಿದ್ದರೆ ಪಂಪ್‌ಸೆಟ್‌ ಮೂಲಕ ಎತ್ತಿ ಹಾಕಿಕೊಳ್ಳುವುದು ಇಲ್ಲಿನ ರೈತರಿಗೆ ಗೊತ್ತು. ನದಿ, ನೀರು, ಕಾಲುವೆ, ಭತ್ತದ ಸುತ್ತಲೇ ನಿತ್ಯದ ಜೀವನ ಗಿರಕಿ ಹೊಡೆಯುತ್ತದೆ.

ತಾಲ್ಲೂಕಿನಲ್ಲಿ ಸಿದ್ದಾಪುರ ಮತ್ತು ಯರಡೋಣ ಪ್ರಮುಖ ಹೋಬಳಿ. ಭತ್ತ ಬಿಟ್ಟರೆ ಪರ್ಯಾಯ ಬೆಳೆಯುವುದು ಕಡಿಮೆ. ಎಲ್ಲಿ ನೋಡಿದರೂ ಕಣ್ಣಿಗೆ ಹಸಿರೇ ರಾಚಿದರೂ ಸೂರ್ಯನ ಪ್ರಖರ ಬಿಸಿಲು ನೆತ್ತಿ ಸುಡುತ್ತಲೇ ಇರುತ್ತದೆ. ಇದ್ದ ಮರಗಿಡಗಳನ್ನು ಕಡಿದು ಆ ಜಾಗದಲ್ಲಿ ಹಿಡಿ ಭತ್ತ ಹಾಕಿದರೆ ಚೀಲ ಭತ್ತ ಬೆಳೆಯುವ ಹಪಾಹಪಿಯಿಂದ ಗದ್ದೆಗಳಿಗೆ ರಾಸಾಯನಿಕ ತುಂಬಿ ಕ್ವಿಂಟಲ್‌ಗಟ್ಟಲೆ ಬೆಳೆಯುವ ಉಮೇದು ಜನರಲ್ಲಿ ಕಡಿಮೆಯಾಗಿಲ್ಲ. ಪರಿಣಾಮ ಭೂಮಿಗಳು ಸವಳು ಅಡರುತ್ತಿದ್ದು, ರೈತರನ್ನು ಆತಂಕದಲ್ಲಿ ಕೆಡವಿದೆ.

ಕಳೆದ ಮೂರು ವರ್ಷ ಎರಡನೇ ಬೆಳೆಗೆ ನೀರಿಲ್ಲದೆ ಕಂಗಾಲಾಗಿದ್ದ ರೈತರು ಈಚೆಗೆ ಸುರಿದ ಹಿಂಗಾರು ಮಳೆಯಿಂದ ಜಲಾಶಯ ಭರ್ತಿಯಾಗಿದ್ದು, ಸಂತಸ ಗೊಂಡಿದ್ದಾರೆ. ನೀರಾವರಿ ಸಲಹಾ ಸಮಿತಿ ಒಂದೇ ಬಾಕಿ ಇದ್ದು, ತಮ್ಮ ಪಾಲಿನ ನೀರು ಅವಧಿಗೆ ಮುಂಚೆ ಸೀಮಿತ ಮಾಡಿ ಲೆಕ್ಕ ಕೊಟ್ಟರೆ ಸಂಪೂರ್ಣ ಖುಷಿಯಾಗುತ್ತಾರೆ.

ಪ್ರತಿಕ್ರಿಯಿಸಿ (+)