ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಲೂರು: ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಒದಗಿಸಲು ಆಗ್ರಹ

Published 19 ಜುಲೈ 2023, 15:11 IST
Last Updated 19 ಜುಲೈ 2023, 15:11 IST
ಅಕ್ಷರ ಗಾತ್ರ

ಅಳವಂಡಿ: ಸಮೀಪದ ಕವಲೂರು ಗ್ರಾಮದ ಗಿರಿಯಮ್ಮ ಪರಪ್ಪ ಹೆಬ್ಬಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಕೂಡಲು ಬೆಂಚ್‌, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಇದೆ. ಮುಖ್ಯವಾಗಿ ಗುಣಮಟ್ಟದ ಬಿಸಿಯೂಟ ತಯಾರಿಸುವುದಿಲ್ಲ ಎಂದು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಹೊರವಲಯದಲ್ಲಿರುವ ಈ ಶಾಲೆಯಲ್ಲಿ 287 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಮುಖ್ಯಶಿಕ್ಷಕ ಸೇರಿ 8 ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

‘ಮಕ್ಕಳಿಗೆ ಕ್ರೀಡಾ ಸಾಮಗ್ರಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸಬೇಕು ಹಾಗೂ ಗುಣಮಟ್ಟದ ಬಿಸಿಯೂಟ ತಯಾರಿಸಬೇಕು. ಗೋಧಿ ಹಾಗೂ ಬೇಳೆಯನ್ನು ಶಾಲೆ ಹಿಂದೆ ಮಣ್ಣಿನಲ್ಲಿ ಮುಚ್ಚಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥ ರಣದಪ್ಪ ಗುಗ್ರಿ ಆಗ್ರಹಿಸಿದರು.

‘ಶಾಲೆಯಲ್ಲಿ ದುರಸ್ತಿಯಾದ ಶೌಚಾಲಯವನ್ನು ವಿದ್ಯಾರ್ಥಿನಿಯರು ಉಪಯೋಗಿ‌ಸುತ್ತಿದ್ದು, ಗಂಡುಮಕ್ಕಳಿಗೆ ಶೌಚಕ್ಕೆ ಬಯಲೇ ಗತಿಯಾಗಿದೆ. ಈ ಬಗ್ಗೆ ಮುಖ್ಯಶಿಕ್ಷಕ ಕೊಟ್ರೇಶ ಅವರನ್ನು ಕೇಳಿದರೆ ಶೌಚಾಲಯ ಸೌಲಭ್ಯ ಕೇಳಬೇಡಿ. ಇದ್ದುದ್ದನ್ನೇ ಉಪಯೋಗಿಸಿ. ಇನ್ನೊಮ್ಮೆ ಕೇಳಿದರೆ ಟಿಸಿ ಕಿತ್ತಿಕೊಡುವುದಾಗಿ ಗದರಿಸುತ್ತಾರೆ’ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

‘ಶಾಲೆಯಲ್ಲಿ ಗುಣಮಟ್ಟದ ಬಿಸಿಯೂಟ ತಯಾರಿಸುವುದಿಲ್ಲ. ಅಡುಗೆಗೆ ಬೇಕಾದ ತರಕಾರಿ, ಬೇಳೆ, ಎಣ್ಣೆ ಹಾಗೂ ಇತರೆ ಪದಾರ್ಥಗಳನ್ನು ಬಳಸುತ್ತಿಲ್ಲ. ಹೀಗಾಗಿ ಅಡುಗೆ ರುಚಿಯಾಗುತ್ತಿಲ್ಲ. ಇನ್ನು ಕುಡಿಯಲು ಶುದ್ಧ ನೀರು ಒದಗಿಸುತ್ತಿಲ್ಲ’ ಎಂದೂ ಮಕ್ಕಳು ದೂರಿದರು.

‘ನಮ್ಮ ಮಕ್ಕಳು ಅನೇಕ ಸೌಲಭ್ಯಗಳ ಕೊರತೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ’ ಎಂದು ಪಾಲಕರು, ಗ್ರಾಮಸ್ಥರು ಮುಖ್ಯಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿ ಮುಖ್ಯಶಿಕ್ಷಕ ಕೊಟ್ರೇಶ ಛತ್ರಕಿ, ‘ಶೌಚಾಲಯ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ, ಬೆಂಚ್‌ ನೀಡುವಂತೆ ಶಾಸಕರು, ಮೇಲಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದೇನೆ. ಇನ್ನು ಬಿಸಿಯೂಟಕ್ಕೆ ಎಲ್ಲ ರೀತಿಯ ಪದಾರ್ಥಗಳನ್ನು ತರುವಂತೆ ಅಡುಗೆ ಸಿಬ್ಬಂದಿಗೆ ಸೂಚಿಸಲಾಗಿದೆ. ಅವರು ಸರಿಯಾದ ರೀತಿ ಬಳಕೆ ಮಾಡುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT