ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ | ಆರೋಗ್ಯ ಕೇಂದ್ರ ಬಂದ್‌; ರೋಗಿಗಳ ಪರದಾಟ

Published 30 ಮೇ 2023, 13:31 IST
Last Updated 30 ಮೇ 2023, 13:31 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಸಾಣಾಪುರ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಉಪಕೇಂದ್ರಕ್ಕೆ ಕಳೆದ ಎಂಟೊಂಬತ್ತು ತಿಂಗಳಿಂದ ಬೀಗ ಹಾಕಿ ಬಂದ್‌ ಮಾಡಲಾಗಿದ್ದು, ರೋಗಿಗಳು ಪರದಾಡುವಂತಾಗಿದೆ.

ಜನರಿಗೆ ಉತ್ತಮ ಆರೋಗ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯಡಿ ಆರೋಗ್ಯ ಕೇಂದ್ರಗಳನ್ನ ಎಚ್.ಡಬ್ಲ್ಯು.ಸಿ. ಆಗಿ ಮೇಲ್ದರ್ಜೇರಿಸಿದ್ದು ಬಿಟ್ಟರೆ, ಗ್ರಾಮೀಣ ಭಾಗದ ಜನರಿಗೆ ಇದರಿಂದ ಲಾಭವಾಗುತ್ತಿಲ್ಲ.

ಸಣಾಪುರ ಗ್ರಾಮದಲ್ಲಿ ಗ್ರಾ.ಪಂ ಇದ್ದು, ಇದರ ವ್ಯಾಪ್ತಿಯಲ್ಲಿ 5 ಗ್ರಾಮಗಳಿವೆ. ಇಲ್ಲಿ 4,019ಕ್ಕೂ ಹೆಚ್ಚಿನ ಜನಸಂಖ್ಯೆಯಿದ್ದು, ಜನರ ಆರೋಗ್ಯ ತಪಾಸಣೆಗೆ ಅನುಕೂಲ ಆಗಬೇಕಾದ ಆರೋಗ್ಯ ಮತ್ತು ಕ್ಷೇಮ ಉಪಕೇಂದ್ರ ಸೌಕರ್ಯ, ನೈರ್ಮಲ್ಯ ಹಾಗೂ ಸಿಬ್ಬಂದಿ ಕೊರತೆ ಎದುರಿಸುತ್ತಿದೆ.

ಗ್ರಾಮಸ್ಥರು ಸಣ್ಣ-ಪುಟ್ಟ ಜ್ವರ, ತಲೆನೋವು, ಗಾಯಗಳ ಚಿಕಿತ್ಸೆ, ಹೆರಿಗೆ ಸೇರಿದಂತೆ ಸಾಮಾನ್ಯ ಚಿಕಿತ್ಸೆಗೂ ಗಂಗಾವತಿ ನಗರಕ್ಕೆ ಧಾವಿಸಬೇಕಾದ ಅನಿವಾರ್ಯ ಎದುರಾಗಿದೆ. ಇಷ್ಟೆಲ್ಲ ಸಮಸ್ಯೆಯಿದ್ದರೂ, ಗ್ರಾ.ಪಂ, ಅಧ್ಯಕ್ಷರು, ಸದಸ್ಯರು, ಪಿ.ಎಚ್.ಸಿ ಸಿಬ್ಬಂದಿ, ತಾಲ್ಲೂಕು ಆರೋಗ್ಯ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಮಳೆಗಾಲ ಆರಂಭವಾಗಲಿದ್ದು, ಮಕ್ಕಳಲ್ಲಿ, ಹಿರಿಯರಲ್ಲಿ ಶೀತ, ಜ್ವರದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಚಿಂತಿಸುತ್ತಿರುವ ಗ್ರಾ.ಪಂ ಅಧಿಕಾರಿಗಳು ಆರೋಗ್ಯ ಕ್ಷೇಮ ಉಪಕೇಂದ್ರಕ್ಕೆ ಸಿಬ್ಬಂದಿ ಕರೆತರುವ ಯತ್ನವಂತೂ ನಡೆಸುತ್ತಿಲ್ಲ.

ಸಿಬ್ಬಂದಿ ಕೊರತೆ: ಎಚ್.ಡಬ್ಲ್ಯು.ಸಿ ಕೇಂದ್ರಕ್ಕೆ ಪಿ.ಎಚ್.ಸಿ ಅಧಿಕಾರಿ, ಆರೋಗ್ಯ ನಿರೀಕ್ಷಕರ ಅಗತ್ಯವಿದೆ. ಇನ್ನೂ ಸಿ.ಎಚ್.ಒ ಅಧಿಕಾರಿಯಿದ್ದು, ವರದಿ ನೀಡಿಕೆಗೆ ಸೀಮಿತವಾಗಿದ್ದಾರೆ. ಈವರೆಗೆ ಕೇಂದ್ರದ ಬಳಿ ಆಶಾ, ಅಂಗನವಾಡಿ ಕಾರ್ಯಕರ್ತರ ಸುಳಿವೇ ಕಾಣಲ್ಲ. ಇದರಿಂದ ಜನರ ಆರೋಗ್ಯ ಚಿಕಿತ್ಸೆಗೆ ತೊಂದರೆಯಾಗಿದೆ.

ಕೇಂದ್ರದಲ್ಲಿ ನೈರ್ಮಲ್ಯದ ಕೊರತೆ: ಆರೋಗ್ಯ ಮತ್ತು ಕ್ಷೇಮ ಉಪಕೇಂದ್ರ ಹಲವು ತಿಂಗಳಿಂದ ಬಳಕೆ ಮಾಡದಿರುವುದರಿಂದ ಕೇಂದ್ರ ಹಿಂಬದಿ ಜಾಲಿ ಗಿಡಗಳು ಬೆಳೆದು ನೈರ್ಮಲ್ಯದ ಕೊರತೆ ಎದುರಿಸುತ್ತಿದೆ. ಪಕ್ಕವೇ ಚರಂಡಿಯಿದ್ದು, ಸ್ವಚ್ಛಗೊಳಿಸದ ಕಾರಣ ದುರ್ವಾಸನೆ ಬೀರುತ್ತಿದೆ. ಕೇಂದ್ರದ ಕೊಠಡಿಗಳು ದೂಳು ತುಂಬಿವೆ.

ನಿರ್ಲಕ್ಷ್ಯವಹಿಸಿದ ಗ್ರಾ.ಪಂ ಸದಸ್ಯರು: ಜನರು ಆರೋಗ್ಯದ ಕಾಳಜಿ ವಹಿಸಬೇಕಾದ ಗ್ರಾ.ಪಂ ಅಧ್ಯಕ್ಷರು, ಸದಸ್ಯರು ನರೇಗಾ ಕೆಲಸದ ಬಳಿ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಮಾಡಿಸುತ್ತಾರೆ ಹೊರತು, ಗ್ರಾಮದಲ್ಲಿನ ಆರೋಗ್ಯ ಮತ್ತು ಕ್ಷೇಮ ಉಪಕೇಂದ್ರಕ್ಕೆ ಸಿಬ್ಬಂದಿ ತರುವ ಬಗ್ಗೆ ಕಿಂಚಿತ್ತು ತಲೆಕೆಡಿಸಿಕೊಳ್ಳುತ್ತಿಲ್ಲ.

ಸಾಣಾಪುರ ಗ್ರಾಮದಲ್ಲಿನ ಆರೋಗ್ಯ ಮತ್ತು ಕ್ಷೇಮ ಉಪ ಕೇಂದ್ರಕ್ಕೆ ಬೀಗ ಜಡಿದಿದ್ದು ಜನರ ಪಾಲಿಗೆ ಆರೋಗ್ಯ ಉಪ ಕೇಂದ್ರಇದ್ದೂ ಇಲ್ಲದಂತಾಗಿರುವುದು
ಸಾಣಾಪುರ ಗ್ರಾಮದಲ್ಲಿನ ಆರೋಗ್ಯ ಮತ್ತು ಕ್ಷೇಮ ಉಪ ಕೇಂದ್ರಕ್ಕೆ ಬೀಗ ಜಡಿದಿದ್ದು ಜನರ ಪಾಲಿಗೆ ಆರೋಗ್ಯ ಉಪ ಕೇಂದ್ರಇದ್ದೂ ಇಲ್ಲದಂತಾಗಿರುವುದು

ಜನರಿಗೆ ಸಿಗದ ಕನಿಷ್ಠ ಚಿಕಿತ್ಸೆ ಚಿಕತ್ಸೆಗಾಗಿ ನರಗಕ್ಕೆ ತೆರಳುವ ಪರಿಸ್ಥಿತಿ ಸಿಬ್ಬಂದಿ ಕೊರತೆ

ವರ್ಷದ ಹಿಂದೆ ಆರೋಗ್ಯ ಮತ್ತು ಕ್ಷೇಮ ಉಪಕೇಂದ್ರದಲ್ಲಿ ಸಿಬ್ಬಂದಿ ಜ್ವರ ಶೀತ ಕಣ್ಣು ಕಿವಿ ಮೂಗು ಕುರಿತ ಆರಂಭಿಕ ಹಂತದ ಚಿಕಿತ್ಸೆ ನೀಡಲಾಗುತ್ತಿತ್ತು. 9 ತಿಂಗಳಾಗಿದೆ ಇಲ್ಲಿ ಸಿಬ್ಬಂದಿಯಿಲ್ಲ. ಆರೋಗ್ಯ ತಪಾಸಣೆಗೆ ಖಾಸಗಿ ಆಸ್ಪತ್ರೆಗೆ ಹೋಗಬೇಕಾಗಿದೆ ಯೋಹಾನ್ ಸಣಾಪುರ ನಿವಾಸಿ

ಆರೋಗ್ಯ ಮತ್ತು ಕ್ಷೇಮ ಉಪಕೇಂದ್ರಕ್ಕೆ ಸಿಬ್ಬಂದಿ ಅಗತ್ಯ ಸೌಕರ್ಯ ಕಲ್ಪಿಸುವಂತೆ 2 ಬಾರಿ ಅರ್ಜಿ ಮೂಲಕ ಮನವಿ ಸಲ್ಲಿಸಲಾಗಿದೆ‌. ಅದರೂ ಕ್ರಮಕೈಗೊಂಡಿಲ್ಲ. ಇದೀಗ ಮತ್ತೊಮ್ಮೆ ಅರ್ಜಿ ಸಲ್ಲಿಸುವೆ ದುರ್ಗಮ್ಮ ಗ್ರಾ.ಪಂ ಅಧ್ಯಕ್ಷೆ ಸಣಾಪುರ

ಸಾಣಾಪುರ ಗ್ರಾಮದಲ್ಲಿಯೇ ಸಿಎಚ್‌ಒ ಇದ್ದು ನಿತ್ಯ ಕೆಲಸ ಮಾಡಲಾಗುತ್ತಿದೆ. ಸದ್ಯ ಸಿಬ್ಬಂದಿ ಕೊರತೆಯಿದ್ದು ಬೇರೆ ಸಿಬ್ಬಂದಿಯನ್ನು ಎಚ್.ಡಬ್ಲ್ಯೂ.ಸಿಗೆ ನಿಯೋಜಿಸಲಾಗಿದೆ. ಕೆಲಸ ಮಾಡದಿರುವ ಬಗ್ಗೆ ನಾಳೆ ಕೇಂದ್ರಕ್ಕೆ ಬಂದು ಪರಿಶೀಲಿಸುವೆ ಶರಣಪ್ಪ ಚಕೋಟಿ ಟಿಎಚ್‌ಒ ಗಂಗಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT