ಕುಷ್ಟಗಿ: ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಕಲುಷಿತಗೊಂಡಿದ್ದು, ಗ್ರಾಮಸ್ಥರು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವುದು ಕಂಡುಬಂದಿದೆ.
ಮುದೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಮರೀಚಿಕೆಯಂತಾಗಿದ್ದು, ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದ ನಾಲ್ಕೈದು ತಿಂಗಳುಗಳಿಂದ ಕುಡಿಯುವುದಕ್ಕೆ ಯೋಗ್ಯವಲ್ಲದ ನೀರನ್ನೇ ಅಲ್ಲಿಯ ಜನ ಬಳಕೆ ಮಾಡುತ್ತಿದ್ದಾರೆ. ಸಮಸ್ಯೆ ಗಮನಕ್ಕೆ ಬಂದರೂ ಗ್ರಾಮದಲ್ಲಿರುವ ಮೂವರು ಪಂಚಾಯಿತಿ ಸದಸ್ಯರು ಈ ವಿಷಯ ತಮಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.
ಜೆಜೆಎಂ ಕನಸು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಜಲ ಜೀವನ ಮಿಷನ್ ಯೋಜನೆ ಇನ್ನೂ ಅಪೂರ್ಣ ಸ್ಥಿತಿಯಲ್ಲಿಯೇ ಇದ್ದು ಗುತ್ತಿಗೆದಾರ ಅರೆಬರೆ ಕಾಮಗಾರಿ ಮುಗಿಸಿ ಕೈತೊಳೆದುಕೊಂಡಿದ್ದಾರೆ. ಕೊಳವೆ ಜೋಡಣೆ, ನಳಗಳ ಜೋಡಣೆ ಕೆಲಸ ಇನ್ನೂ ಬಹಳಷ್ಟು ಬಾಕಿ ಉಳಿದಿದ್ದು, ಈ ಯೋಜನೆ ಜನರ ಪಾಲಿಗೆ ಕನಸಾಗಿಯೇ ಉಳಿದಿದೆ.
ಒಪ್ಪಂದದ ಪ್ರಕಾರ ಕೆಲಸ ನಿರ್ವಹಿಸದ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಲು ಅವಕಾಶ ಇದ್ದರೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪ ವಿಭಾಗದ ಅಧಿಕಾರಿಗಳೂ ವಿಫಲರಾಗಿದ್ದಾರೆ ಎಂದು ಜನ ದೂರಿದ್ದಾರೆ.
ಸದ್ಯ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಕೊಳವೆಬಾವಿ ಮೂಲಕ ನೇರವಾಗಿ ನೀರು ಸರಬರಾಜು ಆಗುತ್ತಿರುವ ನಲ್ಲಿಯಲ್ಲಿ ಹೊಲಸು ನೀರು ಬರುತ್ತಿದೆ. ಸುಮಾರು ಒಂದು ತಾಸಿನವರೆಗೂ ಕೊಳಚೆ ನೀರನ್ನು ಹರಿಯಲು ಬಿಟ್ಟು ನಂತರ ನೀರನ್ನು ಬಟ್ಟೆಯಿಂದ ಸೋಸಿ ತುಂಬಿಕೊಳ್ಳಬೇಕು. ಆದರೂ ನೀರು ಸ್ವಚ್ಛವಾಗಿರುವುದಿಲ್ಲ.
‘ಅನಿವಾರ್ಯವಾಗಿ ಅದೇ ನೀರನ್ನು ಬಳಕೆ ಮಾಡುತ್ತಿದ್ದೇವೆ. ಕೆಲವರು ನೀರನ್ನು ಕುದಿಸಿ ಆರಿಸಿ ಕುಡಿದರೆ ಸಾಮಾನ್ಯ ಜನ ಅದೇ ನೀರನ್ನು ನೇರವಾಗಿ ಸೇವಿಸುತ್ತಿದ್ದಾರೆ. ಇದರಿಂದ ವಿವಿಧ ರೀತಿಯ ಕಾಯಿಲೆಗಳು ಬಾಧಿಸುತ್ತಿವೆ’ ಎಂದು ಗ್ರಾಮಸ್ಥರಾದ ರಾಮನಗೌಡ, ಬಸವರಾಜ ಇತರರು ಹೇಳಿದರು.
ಗ್ರಾಮ ಪಂಚಾಯಿತಿಯ ಪಿವಿಸಿ ಪೈಪ್ ಹಾಳಾಗಿದ್ದು ಕೊಳಚೆ ನೀರು ಅದರಲ್ಲಿ ಬೆರೆಯುತ್ತಿದೆ. ಅಶುದ್ಧ ನೀರು ಪೂರೈಕೆಯಾಗುತ್ತಿರುವ ಬಗ್ಗೆ ತಿಳಿಸಿದರೆ ಅಭಿವೃದ್ಧಿ ಅಧಿಕಾರಿ ‘ಇತರೆ ಗ್ರಾಮಗಳಿಗಿಂತ ನಿಮ್ಮ ಊರಿಗೆ ಪ್ರತಿ ವರ್ಷ ಕೊಳವೆ, ಮೋಟರ್ ದುರಸ್ತಿಗೆ ಅತಿ ಹೆಚ್ಚು ಹಣ ಖರ್ಚಾಗುತ್ತಿದೆ’ ಎನ್ನುತ್ತಾರೆ ಎಂದರು.
‘ವಾಸ್ತವದಲ್ಲಿ ದುರಸ್ತಿ ಕೆಲಸವೇ ನಡೆದಿಲ್ಲ. ಆದರೂ ಪಂಚಾಯಿತಿ ದಾಖಲೆಗಳಲ್ಲಿ ಲಕ್ಷಾಂತರ ಹಣ ದುರಸ್ತಿ ಹೆಸರಿನಲ್ಲಿ ಖರ್ಚಾಗಿದೆ. ಆದರೂ ಕೊಳಚೆ ನೀರು ಬರುವುದು ತಪ್ಪಿಲ್ಲ, ಸದಸ್ಯರು, ಪಿಡಿಒ ಪರಸ್ಪರ ಶಾಮೀಲಾಗಿ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ’ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು.
ಜೆಜೆಎಂ ಕಾಮಗಾರಿ ಇನ್ನೂ ಅಪೂರ್ಣ ಸಮಸ್ಯೆಗೆ ಸ್ಪಂದಿಸದ ಗ್ರಾ.ಪಂ ಸದಸ್ಯರು ಕೊಳವೆಗಳ ದುರಸ್ತಿ ನೆಪದಲ್ಲಿ ಹಣ ಪೋಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.