ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂತರಾಜ್‌ ವರದಿ ಜಾರಿಗೆ ಬದ್ಧ: ಸಚಿವ ಶಿವರಾಜ್ ತಂಗಡಗಿ

ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Published 6 ಆಗಸ್ಟ್ 2023, 16:24 IST
Last Updated 6 ಆಗಸ್ಟ್ 2023, 16:24 IST
ಅಕ್ಷರ ಗಾತ್ರ

ಕಾರಟಗಿ: ‘ಬ್ರಿಟಿಷರ ಆಡಳಿತದ ಬಳಿಕ ಎಚ್.‌ ಕಾಂತರಾಜ್‌ ಸಮಿತಿ ಜಾತಿ ಗಣತಿ ನಡೆಸಿದೆ. ಹೆಜ್ಜೇನಿಗೆ ಕೈ ಹಾಕುವುದು ಬೇಡ ಎಂದು ಹಿಂದಿನ ಸರ್ಕಾರಗಳು ವರದಿಯ ತಂಟೆಗೆ ಹೋಗಿಲ್ಲ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಬಹಿರಂಗ ಹಾಗೂ ಜಾರಿಗೆ ಉತ್ಸುಕತೆ ತೋರಿ, ಅನುಷ್ಠಾನಕ್ಕೆ ನನಗೆ ಸೂಚಿಸಿದ್ದಾರೆ. ವರದಿ ಜಾರಿಯಿಂದ ಎಲ್ಲಾ ಜಾತಿಯ ಬಡವರ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಲಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಪಟ್ಟಣದ ಪದ್ಮಶ್ರೀ ಕನ್ವೆನ್ಶನ್‌ ಹಾಲ್‌ನಲ್ಲಿ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕ ಭಾನುವಾರ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಸಚಿವರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಎಲ್ಲಾ ಜಾತಿಗಳಲ್ಲೂ ಬಡವರಿದ್ದಾರೆ. ಕಾಂತರಾಜ್‌ ವರದಿಯಲ್ಲಿ ಬಡವರ ವೈಯಕ್ತಿಕ ವಿವರದ ಸಮಗ್ರ ಮಾಹಿತಿ ಇದೆ. ವರದಿ ಜಾರಿಯ ವಿಷಯ ನನ್ನ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ವರದಿ ಜಾರಿಯಿಂದ ಎಲ್ಲಾ ಸಮಾಜಗಳಲ್ಲಿನ ಬಡವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ಧಿಯಾಗುವುದು ಸತ್ಯ. ವರದಿ ಜಾರಿಗೆ ಸರ್ಕಾರ ಬದ್ಧವಾಗಿದ್ದು, ಇದಕ್ಕೆ ಪ್ರಾಮಾಣಿಕ ಯತ್ನ ಮಾಡಲಾಗುವುದು’ ಎಂದು ಅವರು ಭರವಸೆ ನೀಡಿದರು.

‘ಬಣಜಿಗ ಸಮಾಜದ ಬೇಡಿಕೆಯಂತೆ ಪುರಸಭೆ ವ್ಯಾಪ್ತಿಯಲ್ಲಿ ಸಿಎ ನಿವೇಶನ ಮಂಜೂರಿಗೆ ಬದ್ಧ. ನಿಯಮದ ಪ್ರಕಾರ ಹಣ ಪಾವತಿಸಬೇಕು. ಮುಂದೆ ₹1 ಕೋಟಿ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕೊಡಿಸುವೆ. ಎಲ್ಲಾ ಸಮಾಜಗಳಿಗೂ ಸಿಎ ಸೈಟ್‌ ಮಂಜೂರು ಮಾಡಿಸುವ ವಿನೂತನ ಯೋಜನೆಯ ಜಾರಿಗೆ ಬದ್ಧನಾಗಿದ್ದೇನೆ. ಇದರಿಂದ ಎಲ್ಲಾ ಸಮಾಜಗಳ ಹಿತ ರಕ್ಷಣೆ ಮಾಡಿದಂತಾಗುವುದಲ್ಲದೇ, ತಮ್ಮನ್ನು ಬೆಂಬಲಿಸಿ ಸಹಕರಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದಂತಾಗುವುದು’ ಎಂದರು.

‘ಸ್ವಾಭಿಮಾನದಿಂದ, ಎಲ್ಲರೊಂದಿಗೂ ಪ್ರೀತಿಯಿಂದ ಇದ್ದು, ಸ್ವಾಭಿಮಾನದಿಂದ ಬದುಕುವ ಬಣಜಿಗರ ಹಿತ ರಕ್ಷಣೆಗೆ ಸಿದ್ಧ’ ಎಂದ ಸಚಿವರು, ‘ಪ್ರತಿಭಾವಂತರನ್ನು ಪ್ರತಿ ವರ್ಷ ಸನ್ಮಾನಿಸಿ, ಇತರರಲ್ಲೂ ಸ್ಫೂರ್ತಿ, ಉತ್ಸಾಹ ಹೆಚ್ಚಿಸುವಂತೆ ಮಾಡುವುದರಲ್ಲಿ ಸಮಾಜ ಮುಂದಿದ್ದು, ಇದು ಇತರರಿಗೂ ಮಾದರಿಯಾಗಿದೆ’ ಎಂದರು.

ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ, ಉದ್ಯಮಿ ಸಣ್ಣ ವೀರೇಶಪ್ಪ ಚಿನಿವಾಲ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ‘ಶಿಕ್ಷಣದಿಂದ ಎಲ್ಲರಲ್ಲೂ ಶಕ್ತಿ ಬರಲಿದೆ. ಮಠಗಳು ನಡೆಯುವುದಕ್ಕೆ, ರಾಜ್ಯದ ಆಡಳಿತ ನಡೆಸುವುದರ ಹಿಂದೆ ಬಣಜಿಗ ಸಮಾಜದ ಕೊಡುಗೆ ದೊಡ್ಡದಿದೆ. ಸಮಾಜ ಬೆಳೆದರೆ ಅಪರೋಕ್ಷವಾಗಿ ನಾವು ಬೆಳೆದಂತೆ’ ಎಂದರು.

ಬಾದಾಮಿಯ ಡಾ.ಅವಿನಾಶ ಮಮದಾಪೂರ ಮತ್ತು ಸಂಗೀತಾ ಪಟ್ಟಣಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು.

ಸಮಾಜದ ಪ್ರಮುಖರಾದ ಅಮರಗುಂಡಪ್ಪ ಕೋರಿ, ನಾಗರಾಜ್‌ ಅರಳಿ, ರಾಜಶೇಖರ ಸಿರಿಗೇರಿ, ಪಾರ್ವತಿ ಪವಾಡಶೆಟ್ಟಿ, ಶಿವಬಸಪ್ಪ ಹೆಸರೂರ, ವಿಶ್ವನಾಥ ಹಳ್ಳೊಳ್ಳಿ, ಶರಣಪ್ಪ ಭತ್ತದ, ಅಮರೇಶ ನಾಗಲಾಪೂರ, ಬೆಳಗಲ್ ಗೌಡ, ಉಮಾಕಾಂತಪ್ಪ ಸಂಗನಾಳ ಉಪಸ್ಥಿತರಿದ್ದರು.

ಶರಣಪ್ಪ ಗದ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಂದಗಲ್ ಇಂಚರಾ‌, ಕನಸು, ಕಂಚಿ ಚನ್ನಪ್ಪ, ಮೇಘಾ ದಿವಟರ್‌ ಕಾರ್ಯಕ್ರಮ ನಿರ್ವಹಿಸಿದರು.

ಕಾರಟಗಿಯಲ್ಲಿ ಭಾನುವಾರ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದಿಂದ ನಡೆದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು
ಕಾರಟಗಿಯಲ್ಲಿ ಭಾನುವಾರ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದಿಂದ ನಡೆದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು
ಸಮಾಜದ ನಾಗಕರಿಕರು ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು
ಸಮಾಜದ ನಾಗಕರಿಕರು ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT