ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ ನಗರಸಭೆ: ಅಮ್ಜದ್ ಪಟೇಲ್‌ಗೆ ಅಧ್ಯಕ್ಷ ಗರಿ ನಿಶ್ಚಿತ

35 ವರ್ಷಗಳ ಬಳಿಕ ಅಲ್ಪಸಂಖ್ಯಾತ ಸಮುದಾಯದ ಸದಸ್ಯನಿಗೆ ಮಣೆ
ಪ್ರಮೋದ ಕುಲಕರ್ಣಿ
Published 19 ಆಗಸ್ಟ್ 2024, 5:41 IST
Last Updated 19 ಆಗಸ್ಟ್ 2024, 5:41 IST
ಅಕ್ಷರ ಗಾತ್ರ

ಕೊಪ್ಪಳ: ಉಳಿದಿರುವ 14 ತಿಂಗಳ ಕಾಲಾವಧಿಗಾಗಿ ಇಲ್ಲಿನ ನಗರಸಭೆಗೆ 3ನೇ ವಾರ್ಡ್ ಸದಸ್ಯ ಕಾಂಗ್ರೆಸ್ ಪಕ್ಷದ ಅಮ್ಜದ್ ಪಟೇಲ್ ಅಧ್ಯಕ್ಷರಾಗುವುದು ಬಹುಪಾಲು ಖಚಿತವಾಗಿದೆ.

ಈ ಕುರಿತು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ ಸೇರಿದಂತೆ ಹಲವು ‌ನಾಯಕರ ಜೊತೆಗೆ ಪಕ್ಷದ ಸದಸ್ಯರ ಸಭೆ ನಡೆದಿದ್ದು, ನಾಲ್ಕನೇ ಬಾರಿ ಸದಸ್ಯರಾಗಿರುವ ಅಮ್ಜದ್ ಪಟೇಲ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಅಮ್ಜದ್ ಅವರು ಇತ್ತೀಚೆಗೆ ರಾಘವೇಂದ್ರ ಹಿಟ್ನಾಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಇದರಿಂದಾಗಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರೊಬ್ಬರು 35 ವರ್ಷಗಳ ಬಳಿಕ ನಗರಸಭೆ ಅಧ್ಯಕ್ಷರಾಗಲಿದ್ದಾರೆ. ಈ ಹಿಂದೆ ಎಸ್.ಎಚ್‌. ಖಾದ್ರಿ ಇಲ್ಲಿನ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರಾಗಿದ್ದರು.

ಇಲ್ಲಿನ ನಗರಸಭೆಯಲ್ಲಿ ಒಟ್ಟು 31 ಜನ ಸದಸ್ಯರಿದ್ದು, 15 ಕಾಂಗ್ರೆಸ್, ಒಂಬತ್ತು ಬಿಜೆಪಿ, ಮೂರು ಪಕ್ಷೇತರ ಮತ್ತು ಇಬ್ಬರು ಜೆಡಿಎಸ್‌ ಸದಸ್ಯರಿದ್ದಾರೆ. ಇಬ್ಬರು ರಾಜೀನಾಮೆ ನೀಡಿದ್ದಾರೆ.

11ನೇ ವಾರ್ಡ್‌ನಿಂದ ಬಿಜೆಪಿಯಿಂದ ಸದಸ್ಯರಾಗಿದ್ದ ಆಡೂರು ರಾಜಶೇಖರ ಲೋಕಸಭಾ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ ಸೇರಿದ್ದಾರೆ. ಎಂಟನೇ ವಾರ್ಡ್‌ನಿಂದ ಕಾಂಗ್ರೆಸ್‌ನಿಂದ ಗೆಲುವು ಪಡೆದಿದ್ದ ಸುನಿತಾ ಗಾಳಿ ಸರ್ಕಾರಿ ‌ನೌಕರಿ ಒಡೆದ ಕಾರಣ ರಾಜೀನಾಮೆ ಕೊಟ್ಟಿದ್ದಾರೆ.

ಬಹುಮತಕ್ಕೆ ಬೇಕಾದ 16 ಸದಸ್ಯರ ಬಲದ ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಹಾಗೂ ಸಂಸದರ ಮತವೂ ಇರುವ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಬಹುಮತಕ್ಕೆ ಬೇಕಾದಷ್ಟು ಬಲವಂತೂ ಇದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಸಭೆಯಲ್ಲಿ ಪಕ್ಷದ ಎಲ್ಲ ‌ಸದಸ್ಯರ ಅಭಿಪ್ರಾಯ ಪಡೆದು ಹೆಸರು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಹಿಂದಿನ ಅಧ್ಯಕ್ಷೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ ಹಾಗೂ ಉಪಾಧ್ಯಕ್ಷೆ ಆಯೇಷಾ ರುಬಿನಾ ಅವರ ಅಧಿಕಾರವಧಿ 2023ರ ಅಕ್ಟೋಬರ್‌ನಲ್ಲಿಯೇ ಪೂರ್ಣಗೊಂಡಿದ್ದು, ಈಗ ಆ. 21ರಂದು ಚುನಾವಣೆ ನಿಗದಿಯಾಗಿದೆ.

ಅಮ್ಜದ್ ಪಟೇಲ್ ಮೂರು ಸಲ ಉಪಾಧ್ಯಕ್ಷರಾಗಿದ್ದರು. 2000-01ರಲ್ಲಿ ಮೊದಲ ಬಾರಿಗೆ ಸದಸ್ಯರಾಗಿದ್ದರು. ಅದಕ್ಕೂ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದ ಯೂತ್ ಘಟಕದ ಅಧ್ಯಕ್ಷ ಸೇರಿದಂತೆ ಹಲವು ಮಹತ್ವದ ಜವಾಬ್ದಾರಿ ‌ನಿರ್ವಹಿಸಿದ್ದಾರೆ.

10ನೇ ವಾರ್ಡ್‌ನ ಮಹೇಂದ್ರ ಚೋಪ್ರಾ, 7ನೇ ವಾರ್ಡ್‌ನ ಅಜಮುದ್ದೀನ್‌ ಅತ್ತಾರ್‌ ಮತ್ತು 25ನೇ ವಾರ್ಡ್‌ನ ಅರುಣಕುಮಾರ್‌ ಅಪ್ಪುಶೆಟ್ಟರ್‌ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬಂದಿದ್ದರು ಶಾಸಕರ ಸೂಚನೆ ಮೇರೆಗೆ ಕಾಂಗ್ರೆಸ್ ಸದಸ್ಯರು ಅಮ್ಜದ್ ಅವರಿಗೆ ಸಮ್ಮತಿ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT