ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕ ಸಮೀಕ್ಷೆ: ಸೌಲಭ್ಯ ವಂಚಿತ ಸಮುದಾಯ

Last Updated 21 ಮಾರ್ಚ್ 2022, 5:01 IST
ಅಕ್ಷರ ಗಾತ್ರ

ಕೊಪ್ಪಳ: ದೇವದಾಸಿ ಪದ್ಧತಿ ಅನಿಷ್ಠ. ಆದರೆ, ಇಂದಿಗೂ ವಿವಿಧ ಮುಖವಾಡ ಹೊತ್ತು ಜೀವಂತವಾಗಿಯೇ ಇದೆ. ಸಮಸ್ಯೆ ಬಗೆಹರಿಸಬೇಕಾದ ಸಮುದಾಯ ಮತ್ತು ಸರ್ಕಾರ ಗಂಭೀರ ಪ್ರಯತ್ನ ಮಾಡದ ಪರಿಣಾಮ ಹೋರಾಟ ನಡೆಯುತ್ತಲೇ ಇದೆ.

ದೇವದಾಸಿ ಪದ್ಧತಿ ನಿರ್ಮೂಲನೆ ಕಾಯ್ದೆ 1982ರಲ್ಲಿಜಾರಿಗೆ ಬಂದಿತು. 2009ರಲ್ಲಿ ತಿದ್ದುಪಡಿ ಕಾಯ್ದೆ ಜೊತೆಗೆ ಅಸ್ತಿತ್ವಕ್ಕೆ ಬಂದು ಮೂರು ದಶಕಗಳೇ ಕಳೆದಿವೆ. ಈ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದ್ದರೆ ಇಂದು ದೇವದಾಸಿಯರ ಪಟ್ಟಿ ಏರುತ್ತಲೇ ಇರಲಿಲ್ಲ.

ದೇವದಾಸಿಯರು ಎಂದರೆ ಯಾರು?: ದೇವರ ಸೇವೆಯ ಹೆಸರಿನಲ್ಲಿ ಮುತ್ತು ಕಟ್ಟಿಸಿ ಹನುಮಂತ, ಯಲ್ಲಮ್ಮ, ಹುಲಿಗೆಮ್ಮ ಸೇರಿದಂತೆ ಗ್ರಾಮದೇವರ ಹೆಸರಿನಲ್ಲಿ ಮಹಿಳೆಯರನ್ನು ವೇಶ್ಯಾವಾಟಿಕೆಗೆ ತಳ್ಳುವುದೇ ದೇವದಾಸಿ ಪದ್ಧತಿ. ಹಿಂದೆ ಸಂಪ್ರದಾಯದ ಹೆಸರಿನಲ್ಲಿ ಇದಕ್ಕೆ ವಿಶಾಲ ಅರ್ಥವಿದ್ದರೂ ಇಂದು ದೇವದಾಸಿಯರೆಂದರೆ ವೇಶ್ಯೆಯರು ಎಂಬ ಭಾವನೆ ಮೂಡಿದೆ.

ದೇವರಿಗೆ ತಮ್ಮನ್ನು ಅರ್ಪಿಸಿಕೊಂಡು ಸೇವೆ ಮಾಡಬೇಕಾದ ಇವರು ಇಂದು ತನುವನ್ನು ಅಪ್ಪಿಕೊಂಡು ಸೇವೆ ಮಾಡುವ ಪರಿಸ್ಥಿತಿಗೆ ಇದೆ. ದೇವದಾಸಿ ಪದ್ಧತಿಗೆ ಒಳಗಾದ ಮಹಿಳೆಯರು ಅನೇಕ ರೋಗರುಜಿನ, ದೌರ್ಜನ್ಯಕ್ಕೆ ಒಳಗಾಗಿ ಸಣ್ಣ ವಯಸ್ಸಿನಲ್ಲಿಯೇ ದುರ್ಮರಣಕ್ಕೆ ಗುರಿಯಾಗುತ್ತಿದ್ದಾರೆ. ಈ ಎಲ್ಲ ಅನಿಷ್ಠಗಳನ್ನು ಅಭ್ಯಾಸ ಮಾಡಿ ಈ ಪದ್ಧತಿ ನಿರ್ಮೂಲನೆ ಮಾಡಿ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಡಿ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಕಾಯ್ದೆ ವ್ಯಾಪ್ತಿ, ಪರಿಣಾಮ: ದೇವದಾಸಿ ಪುನರ್ವಸತಿ ಯೋಜನೆಜಾರಿಗೆ ಬಂದ ನಂತರ ದೇವದಾಸಿ ಸಮರ್ಪಣ ನಿಷೇಧ ಕಾಯ್ದೆ 1982 ಹಾಗೂ ತಿದ್ದುಪಡಿ ಅಧಿನಿಯಮ 2009ರ ಪ್ರಕಾರ ಯಾವುದೇ ಅಪ್ರಾಪ್ತ ಹೆಣ್ಣು ಮಗುವಿಗೆ ಮುತ್ತು ಕಟ್ಟಿ ದೇವದಾಸಿಯರನ್ನಾಗಿ ಮಾಡುವುದು ಅಪರಾಧ. ಇಂತಹ ಕೃತ್ಯಕ್ಕೆ ಭಾಗವಹಿಸಿದವರಿಗೆ, ಬೆಂಬಲಿಸಿದವರಿಗೆ ಪ್ರೋತ್ಸಾಹಿಸಿದವರಿಗೆ 5 ವರ್ಷ ಕಠಿಣ ಶಿಕ್ಷೆ ಹಾಗೂ ₹ 10,000 ದಂಡ ಇದೆ.

ಆದರೆ ಈ ಅಪರಾಧದ ಅಡಿ ಶಿಕ್ಷೆಯಾಗಿದ್ದು ಮಾತ್ರ ಅತ್ಯಂತ ಕಡಿಮೆ. ಬಡತನ, ಅನಕ್ಷರತೆ, ಸಂಪ್ರದಾಯದ ಹೆಸರಿನಲ್ಲಿ ಈ ಅನಿಷ್ಠ ಪದ್ಧತಿಗೆ ಒಳಗಾದ ಮಹಿಳೆಯರು ಸಮಾಜದ ಮುಖ್ಯವಾಹಿನಿಯಿಂದ ಸದಾ ದೂರವೇ ಇರುತ್ತಾರೆ. ಜಿಲ್ಲೆಯಲ್ಲಿ ಈ ಸಮಸ್ಯೆ ಹೆಚ್ಚು. ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಈಗ ದೇವದಾಸಿ ಆಗುವುದು, ಮಾಡುವುದು ಶೇ 90ರಷ್ಟು ಕಡಿಮೆಯಾಗಿದ್ದರೂ ಅಲ್ಲೊಂದು, ಇಲ್ಲೊಂದು ಪ್ರಕರಣಗಳು ವರದಿಯಾಗುತ್ತಲೇ ಇದೆ.

ಅವೈಜ್ಞಾನಿಕ ಸಮೀಕ್ಷೆ: ದೇವದಾಸಿ ಪದ್ಧತಿ ನಿರ್ಮೂಲನೆ ಕಾಯ್ದೆ ಜಾರಿಗೆ ಬಂದ ನಂತರ1993-94ಮತ್ತು 2007-08ರಲ್ಲಿ ಎರಡು ಬಾರಿ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಯಂತೆ ಜಿಲ್ಲೆಯಲ್ಲಿ 6,035 ದೇವದಾಸಿಯರು ಇದ್ದರು. ಅವರಲ್ಲಿ 2,540 ಜನರು ಮೃತರಾಗಿದ್ದಾರೆ.

3495 ವಿಮುಕ್ತ ದೇವದಾಸಿಯರು ಜೀವಂತ ಇದ್ದು, 2,839 ಜನರು ಮಾಸಾಶನ ಪಡೆಯುತ್ತಿದ್ದಾರೆ. 1,875 ಜನರಿಗೆ ವಸತಿ, 2,973 ಜನರಿಗೆ ಸಾಲ ಸೌಲಭ್ಯ ನೀಡಲಾಗಿದೆ. ಕೊಪ್ಪಳ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 1,968 ಹಾಗೂ ಅತಿ ಕಡಿಮೆ 276 ದೇವದಾಸಿ ಮಹಿಳೆಯರು ಕನಕಗಿರಿ ತಾಲ್ಲೂಕಿನಲ್ಲಿ ಇದ್ದಾರೆ. ಆದರೆ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂಬುವುದು ಅನೇಕ ದೇವದಾಸಿ ಮಹಿಳೆಯರ ವಾದ. ವಿಮುಕ್ತ ದೇವದಾಸಿ ಮಹಿಳೆಯರು ಈ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸತತ ಹೋರಾಟ ಮಾಡುತ್ತಲೇ ಇರುತ್ತಾರೆ.

ಸಮೀಕ್ಷೆಯ ಲೋಪ: ದೇವದಾಸಿ ಮಹಿಳೆಯರ ಎರಡು ಬಾರಿ ಸಮೀಕ್ಷೆ ನಡೆಸಿದಾಗ ದೇವದಾಸಿ ತಾಯಿ ಹೆಸರು ಸೇರ್ಪಡೆಯಾದರೆ ಮಗಳ ಹೆಸರಿಲ್ಲ. ಮಗಳ ಹೆಸರಿದ್ದರೂ ತಾಯಿ ಹೆಸರಿಲ್ಲ. ಅಲ್ಲದೆ ಅರ್ಹ ಮಹಿಳೆಯರ ಹೆಸರು ಬಾರದೇ ಇರುವುದು ಅವರು ದುಡಿಯಲು ಗೋವಾ, ಮುಂಬಯಿ ಅಂತಹ ಮಹಾನಗರಗಳಿಗೆ ವಲಸೆ ಹೋಗಿರುವುದು ಮತ್ತು ಕೆಲವು ದೇವದಾಸಿಯರ ಪೋಷಕರು ಪಟ್ಟಿಯಲ್ಲಿ ಹೆಸರು ಸೇರಿರೆ ಅವಮಾನ ಎಂದು ಭಾವಿಸಿರುವುದು, ಆ ಮಹಿಳೆಯ ಜೊತೆ ಸಹಜೀವನ ನಡೆಸುವ ಪುರುಷ ತಾನೇ ಪೋಷಕನಾಗಿರುವುದರಿಂದ ಸೌಲಭ್ಯ ದೊರೆಯುವಲ್ಲಿ ನಿರಾಕರಣೆ ಮಾಡಿರುವು ದರಿಂದ ಈ ಸಮಸ್ಯೆ ಇಂದಿಗೂ ಹಾಗೆಯೇ ಉಳಿದಿದೆ. ಅಲ್ಲದೆ ಸಾಲ, ಮಾಸಾಶನ, ಗಂಗಾ ಕಲ್ಯಾಣ, ಜಮೀನು, ವಸತಿ ಸೌಲಭ್ಯಗಳಿಲ್ಲದೆ ದೇವರ ಹೆಸರಿನಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿ ಮುಂದುವರಿದಿದೆ. ಇದಕ್ಕೆ ತಾರ್ಕಿಕ ಅಂತ್ಯವನ್ನು ಸಂಬಂಧಿಸಿದ ಇಲಾಖೆ ಮಾಡಬೇಕಿದೆ.

ಮದುವೆ, ಮಕ್ಕಳ ಶಿಕ್ಷಣಕ್ಕೆ ಹೊಸ ಸಮಸ್ಯೆ

ದೇವದಾಸಿ ಮಹಿಳೆಯರು ಇಂದು ವಿಮುಕ್ತ, ಮಾಜಿ ದೇವದಾಸಿಯರು ಎಂದು ಕರೆಸಿಕೊಳ್ಳುತ್ತಾರೆ. ಆದರೂ ಕೆಲವು ಪ್ರತಿಭಟನೆ, ಸಭೆಗಳಲ್ಲಿ ಹರೆಯದ ಹೆಣ್ಣುಮಕ್ಕಳು ದೇವದಾಸಿಯರಾಗಿ ಕಂಡು ಬರುತ್ತಿದ್ದಾರೆ. ಅಲ್ಲದೆ ದೇವದಾಸಿ ಮಹಿಳೆಯರಿಗೆ ಅಲ್ಪ ಸೌಲಭ್ಯವಿದ್ದರೂ ಅವರ ಮಕ್ಕಳಿಗೆ ಯಾವುದೇ ಮೀಸಲಾತಿ ಕೂಡಾ ಇಲ್ಲ ಎನ್ನುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ದೇವದಾಸಿ ಮಹಿಳೆಯ ಮಗಳು, ಮತ್ತು ಮಗ ದೇವದಾಸಿಯರ ಮಕ್ಕಳನ್ನೇ ಮದುವೆಯಾದರೆ ₹ 5 ಲಕ್ಷ, ಅನ್ಯಜಾತಿಯವರನ್ನು ಮದುವೆಯಾದರೆ ₹ 3 ಲಕ್ಷ ಸೌಲಭ್ಯವಿದೆ. ಆದರೆ, ದೇವದಾಸಿಯರ ಮಕ್ಕಳೇ ದೇವದಾಸಿ ಮಕ್ಕಳನ್ನು ಮದುವೆಯಾಗಲು ಬರುವುದಿಲ್ಲ ಎಂಬ ಸಂಪ್ರದಾಯವಿದೆಯಂತೆ. ಅವರು ಸಹೋದರ ಸಮಾನವಂತೆ. ಹೀಗಾಗಿ ಮದುವೆ ಕೂಡಾ ಸಮಸ್ಯೆಯಾಗುತ್ತದೆ.

ದೇವದಾಸಿ ಮಕ್ಕಳನ್ನು ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ. ದೇವದಾಸಿಯರ ಮಕ್ಕಳು ಶಾಲಾ, ಕಾಲೇಜುಗಳಲ್ಲಿ ಕೀಳರಿಮೆ ಅನುಭವಿಸುವಂತೆ ಆಗಿದೆ. ವಸತಿ ನಿಲಯಕ್ಕೆ ಪ್ರವೇಶ ಪಡೆಯಲು ತಂದೆ, ತಾಯಿ ಕಾಲಂ ತುಂಬಬೇಕು. ತಂದೆ ಇಲ್ಲದೇ ಇರುವುದರಿಂದ ಹಾಗೆ ಬಿಟ್ಟರೆ ಅವರ ಅರ್ಜಿ ಅನೂರ್ಜಿತಗೊಳ್ಳುತ್ತದೆ ಎಂಬ ಕೊರಗು ಮಕ್ಕಳದ್ದಾಗಿದೆ.

*ದೇವದಾಸಿ ಪಟ್ಟ ಕಟ್ಟಿಕೊಂಡ ಮೇಲೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ತುತ್ತಿನ ಚೀಲ ತುಂಬಿಸಿಕೊಳ್ಳಲು ಗೋವಾ ಸೇರಿದಂತೆ ಅನೇಕ ಊರುಗಳಿಗೆ ದುಡಿಯಲು ಹೋದೆ. ಸಣ್ಣ ವಯಸ್ಸಿನಲ್ಲಿಯೇ ಗಂಡನಿಲ್ಲದೆ ಮಕ್ಕಳನ್ನು ಪಡೆದೆ. ಘನತೆಯ ಬದುಕಿಗೆ ಕಷ್ಟಪಟ್ಟಿದ್ದೇನೆ. ಈ ಅನಿಷ್ಠ ಪದ್ಧತಿಗೆ ಒಳಗಾಗದಂತೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ
ಪಡಿಯಮ್ಮ ಕ್ಯಾದಗುಂಪಾ, ವಿಮುಕ್ತ ದೇವದಾಸಿ ಮಹಿಳೆ

*ದೇವದಾಸಿ ಪದ್ಧತಿ ಆಚರಣೆ ಕಾನೂನು ಬಾಹಿರ. ಪದ್ಧತಿಗೆ ತಳ್ಳುವ ಮತ್ತು ಒಳಗೊಳ್ಳುವ ಮಹಿಳೆಯರಿಗೆ ಶಿಕ್ಷೆ ಕಾದಿದೆ. ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಎಲ್ಲ ರೀತಿಯ ಪ್ರಯತ್ನ ನಡೆದಿದೆ. ಅವರ ಸಮಸ್ಯೆಗಳ ಬಗ್ಗೆ ಅರಿವು ಇದೆ. ಸರ್ಕಾರ ಮತ್ತು ಎಲ್ಲ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಸಮಾಜದ ಮುಖ್ಯವಾಹಿನಿಗೆ ಸೇರಿಸುವ ಬದ್ಧತೆಯನ್ನು ತೋರುತ್ತಾ ಬಂದಿದ್ದೇವೆ
-ಆರ್.ಪ್ರಮೀಳಾ ನಾಯ್ಡು, ಅಧ್ಯಕ್ಷೆ, ರಾಜ್ಯ ಮಹಿಳಾ ಆಯೋಗ

*ವಿಮುಕ್ತಿ ದೇವದಾಸಿ ಮಹಿಳೆಯರಿಗೆ ನಿಯಮಿತವಾಗಿ ಮಾಸಾಶನ. ಸಾಲ, ವಸತಿ ಸೌಲಭ್ಯ, ದೇವದಾಸಿಯರ ಮಕ್ಕಳ ಮುಖ್ಯವಾಹಿನಿಗೆ ತರುವ ಪ್ರಯತ್ನ ವಿಮುಕ್ತ ದೇವದಾಸಿ ಸಂಘಟನೆಯಿಂದ ಮಾಡುತ್ತಲೇ ಬಂದಿದ್ದೇವೆ. ಇನ್ನೂ ಅನೇಕ ಬೇಡಿಕೆ ಈಡೇರಿಲ್ಲ. ಪ್ರಮುಖವಾಗಿ ದೇವದಾಸಿ ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಬನೆ, ಈ ಪದ್ಧತಿ ದುಷ್ಟಪರಿಣಾಮ ಕುರಿತು ಸತತ ಜಾಗೃತಿ ನಡೆಸುತ್ತಿದ್ದೇವೆ

-ಚಂದಾಲಿಂಗ ಕಲಾಲಬಂಡಿ, ಸಂಚಾಲಕ, ವಿಮುಕ್ತದೇವದಾಸಿ ಮಹಿಳೆಯರ ಹೋರಾಟ ಸಂಘ

*ಎರಡು ತಿಂಗಳಿಂದ ಮಾಸಾಶನ ಆಗಿಲ್ಲ. ಜನವರಿ, ಫೆಬ್ರುವರಿ ತಿಂಗಳ ಮಾಸಾಶನ ಮಾರ್ಚ್ ಅಂತ್ಯಕ್ಕೆ ಬರಲಿದೆ. ಸಮೀಕ್ಷೆಯಲ್ಲಿ ಕೈ ಬಿಟ್ಟು ಹೋದ ಮಾಜಿ ದೇವದಾಸಿ ಮಹಿಳೆಯರ ಸೇರ್ಪಡೆ ಮತ್ತು ಸಮೀಕ್ಷೆ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕಿದೆ. ಅನೇಕ ತಾಂತ್ರಿಕ ಮತ್ತು ಭಾವನಾತ್ಮಕ ಸಮಸ್ಯೆಗಳಿಂದ ಈ ಸಮಸ್ಯೆ ಇದೆ. ಯೋಜನೆ ಅಡಿಯಲ್ಲಿ ಅವರಿಗೆ ದೊರೆಯಬೇಕಿರುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ

-ದಾದುಸಾಬ್, ಅನುಷ್ಠಾನಾಧಿಕಾರಿ, ದೇವದಾಸಿ ಪುನರ್ವಸತಿ ಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT