ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ವರ್ಷವಾದರೂ ಪ್ರವಾಸಿ ಮಂದಿರದ ಮೇಟಿಗಳಿಗಿಲ್ಲ ವೇತನ

Published 27 ಜೂನ್ 2023, 13:14 IST
Last Updated 27 ಜೂನ್ 2023, 13:14 IST
ಅಕ್ಷರ ಗಾತ್ರ

ಕಾರಟಗಿ: ಲೋಕೋಪಯೋಗಿ ಇಲಾಖೆ ಗಂಗಾವತಿ ಉಪ ವಿಭಾಗ ವ್ಯಾಪ್ತಿಯ ಪ್ರವಾಸಿ ಮಂದಿರದ ಹೊರಗುತ್ತಿಗೆ ನೌಕರರಿಗೆ ವರ್ಷವಾದರೂ ವೇತನ ಬಿಡುಗಡೆಯಾಗಿಲ್ಲ.

ಪ್ರವಾಸಿ ಮಂದಿರ ಮೇಟಿಗಳು, ಈಗಾಗಲೇ ಏಜೆನ್ಸಿ ಗುತ್ತಿಗೆದಾರರು, ಲೋಕೋಪಯೋಗಿ ಕೊಪ್ಪಳ ವಿಭಾಗ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ, ಆತ್ಮಹತ್ಯೆಗೂ ಯತ್ನಿಸಿದ್ದಾರೆ. ಬಳಿಕ ಪೊಲೀಸರಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಅಸಹಾಯಕರಾಗಿ ಕೈಚೆಲ್ಲಿದ್ದಾರೆ.

ಗುತ್ತಿಗೆ ಏಜೆನ್ಸಿ ಪಡೆದವರು, ನಮ್ಮ ತೊಂದರೆಗೆ ಸ್ಪಂದಿಸುತ್ತಿಲ್ಲ. ಇಲಾಖೆ ಅಧಿಕಾರಿಗಳೂ ಬೆಂಬಲಕ್ಕೆ ಬರುತ್ತಿಲ್ಲ. ತೀರಾ ಕನಿಷ್ಠ ವೇತನದಲ್ಲಿ ಉದ್ಯೋಗ ಮಾಡುತ್ತ ದಿನಗಳೆಯಬೇಕೆಂದರೆ ವರ್ಷವಾದರೂ ವೇತನ ಬರುತ್ತಿಲ್ಲ. ಸಾಲ ತೀರಿಸಲಾಗದೆ, ಸಾಲಗಾರರ ಒತ್ತಡ ತಾಳದೇ ಕದ್ದು ಜೀವನ ಮಾಡಬೇಕಾಗಿದೆ ಎಂದು ಪ್ರವಾಸಿ ಮಂದಿರದ ಮೇಟಿಯೊಬ್ಬರು ಅಳಲು ತೋಡಿಕೊಂಡರು.

ಸಣ್ಣ ನೌಕರರ ವೇತನ ಬಿಡುಗಡೆಯಾಗದಿರುವುದು ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿರುವುದನ್ನು ಸಹಿಸುವುದಿಲ್ಲ. ನೌಕರರ ಸಂಕಷ್ಟದ ಜೀವನಕ್ಕೆ ನನ್ನದೂ ಸ್ಪಂದನೆಯಿದೆ. ತಕ್ಷಣ ವೇತನ ಬಿಡುಗಡೆಗೆ ಕಠಿಣ ಕ್ರಮಕೈಗೊಳ್ಳವಂತೆ ಅಧಿಕಾರಿಗಳಿಗೆ ಸೂಚಿಸುವೆ.
ಶಿವರಾಜ್‌ ತಂಗಡಗಿ, ಸಚಿವ

ಗಂಗಾವತಿ ಹಳೆಯ ಪ್ರವಾಸಿ ಮಂದಿರ, ಸರ್ಕ್ಯೂಟ್‌ ಹೌಸ್‌, ಕನಕಗಿರಿ ಮತ್ತು ಕಾರಟಗಿಯ ಪ್ರವಾಸಿ ಮಂದಿರದಲ್ಲಿ ಮೇಟಿ, ಕುಕ್ಕರ್‌, ಕಸ ಗೂಡಿಸುವವರು ಸೇರಿ ಒಟ್ಟು 15ಕ್ಕೂ ಹೆಚ್ಚು ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಹೆಸರಲ್ಲಿ ₹ 14 ಸಾವಿರ ವೇತನ ಇಲಾಖೆಯಿಂದ ಆಗುತ್ತಿದ್ದು, ₹ 5,039 ಮಾತ್ರ ನಮ್ಮ ಕೈಸೇರುತ್ತಿದೆ ಎಂದು ಪ್ರವಾಸಿ ಮಂದಿರದ ಕೆಲಸಗಾರರೊಬ್ಬರು ತಿಳಿಸಿದರು.

ವೇತನ ಬಾರದೇ ತುಂಬಿದ ನಮ್ಮ ಸಂಸಾರ ನಿರ್ವಹಿಸುವುದು ಕಷ್ಟವಾಗಿದೆ. ಬೇರೆ ಆದಾಯವಿಲ್ಲ. ಸಾಲ ಮಾಡಿ ಜೀವನ ನಡೆಸುತ್ತಿದ್ದೇವೆ. ಕನಿಷ್ಠ ವೇತನದಲ್ಲಿ ಕೆಲಸ ಮಾಡುವವರ ತೊಂದರೆಗೆ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಸ್ಪಂದಿಸಬೇಕು ಎಂದು ಕಾರಟಗಿ ಪ್ರವಾಸಿ ಮಂದಿರದ ಮೇಟಿ ರಸೂಲ್‌ಸಾಬ ಪ್ರತಿಕ್ರಿಯಿಸಿದರು.

ಸಚಿವ ತಂಗಡಗಿ ಭರವಸೆ

ಮೇಟಿಗಳೆಲ್ಲರೂ ಭಾನುವಾರ ಸಚಿವ ಶಿವರಾಜ್‌ ತಂಗಡಗಿಯವರ ನಿವಾಸಕ್ಕೆ ತೆರಳಿ, ತಮ್ಮ ಸಮಸ್ಯೆ ಇತ್ಯರ್ಥಗೊಳಿಸಬೇಕು. ಬಡವರ ಜೀವನ ಸರಾಗವಾಗಿ ನಡೆಯುವಂತೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಒಟ್ಟು 8 ತಿಂಗಳ ವೇತನ ಬರಬೇಕಿದ್ದು 2 ತಿಂಗಳ ವೇತನ ಬಿಡುಗಡೆಯಾಗಿದೆ. ಉಳಿದ ವೇತನ ಬಿಡುಗಡೆಗೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳುವರು. ಅದರ ಸಂಪೂರ್ಣ ನಿಯಂತ್ರಣ ವಿಭಾಗದ ಕಚೇರಿಯಿಂದ ಆಗುವುದು.
ಸುದೇಶಕುಮಾರ, ಗಂಗಾವತಿ ಲೋಕೋಪಯೋಗಿ ಎಂಜಿನಿಯರ್‌

ಸಚಿವರು ಸಂಬಂಧಿಸಿದ ಅಧಿಕಾರಿಗೆ ತಕ್ಷಣ ಕ್ರಮಕ್ಕೆ ಮುಂದಾಗಿ ವೇತನ ಬಿಡುಗಡೆಗೊಳಿಸಲು ಸೂಚಿಸುವುದಾಗಿ ತಿಳಿಸಿದರು ಎಂದು ಮೇಟಿಗಳಾದ ಯಮನಪ್ಪ, ರಸೂಲ್‌ಸಾಬ ತಿಳಿಸಿದರು. ಒಟ್ಟಾರೆ ಪ್ರವಾಸಿ ಮಂದಿರದಲ್ಲಿ ಕೆಲಸ ಮಾಡುವ ಮೇಟಿಗಳು ಸಹಿತ ಇತರರ ವೇತನ ಬಾಕಿ ಉಳಿದಿದೆ. ಅವರೀಗ ತೀವ್ರ ಸಂಕಷ್ಟದಲ್ಲಿದ್ದು, ಶೀಘ್ರವೇ ವೇತನ ಬಿಡುಗಡೆಗೆ ಇಲಾಖೆ ಮುಂದಾಗಬೇಕಿದೆ ಎಂಬುದು ನೌಕರರ ಆಗ್ರಹವಾಗಿದೆ.

ಚುನಾವಣೆ ಕಾರಣಕ್ಕೆ ವೇತನ ಬಿಡುಗಡೆಯಾಗಿಲ್ಲ

ಕೊಪ್ಪಳ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಶಂಕರ್‌ ಪ್ರತಿಕ್ರಿಯಿಸಿ ನಾನೂ ಹೊಸದಾಗಿ ಬಂದಿರುವೆ. ಚುನಾವಣೆ ಫಲಿತಾಂಶದ ಕಾರಣದಿಂದ ಖಜಾನೆ ಕಚೇರಿ ಬಂದ್‌ ಆಗಿದ್ದರಿಂದ ವೇತನ ಬಿಡುಗಡೆಯಾಗಿಲ್ಲ ಎಂಬ ಅಂಶ ಗಮನಕ್ಕೆ ಬಂದಿದೆ.

ಗುತ್ತಿಗೆದಾರ ಏಜೆನ್ಸಿಯವರಿಗೆ ತಕ್ಷಣ ವೇತನ ಬಿಡುಗಡೆ ಮಾಡಲು ಸೂಚಿಸಿದ್ದರಿಂದ ಈಚೆಗೆ 2 ತಿಂಗಳ ವೇತನ ಬಿಡುಗಡೆಯಾಗಿದೆ. ಇನ್ನೆರಡು ತಿಂಗಳ ವೇತನ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಟೆಂಡರ್‌ನಲ್ಲಿ ಉಲ್ಲೇಖಿಸಿದಂತೆ ವೇತನ ಬಿಡುಗಡೆ ಮಾಡಬೇಕು. ಕನಿಷ್ಠ ವೇತನ ಬಿಡುಗಡೆಯ ವಿಷಯ ಗಮನಕ್ಕಿಲ್ಲ. ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT