ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟಾಪುರದ ಲಕ್ಷ್ಮಿ ಎಸ್‌ಎಸ್‌ಬಿ ಸೇರ್ಪಡೆ

Last Updated 17 ಏಪ್ರಿಲ್ 2021, 9:06 IST
ಅಕ್ಷರ ಗಾತ್ರ

ಕನಕಗಿರಿ: ಸಮೀಪದ ಕೆ.ಕಾಟಾಪುರ ಗ್ರಾಮದ ಲಕ್ಷ್ಮಿ ಪಚ್ಚೇರ್ ಅವರು ಸಶಸ್ತ್ರ ಸೀಮಾ ಬಲಕ್ಕೆ (ಎಸ್‍ಎಸ್‍ಬಿ) ನೇಮಕವಾಗಿದ್ದಾರೆ. ಕುಮಾರೆಪ್ಪ ಹಾಗೂ ಶಂಕ್ರಮ್ಮ ದಂಪತಿಯ ನಾಲ್ವರು ಮಕ್ಕಳಲ್ಲಿ ಲಕ್ಷ್ಮಿ ಕೂಡ ಒಬ್ಬರು.

ಕುಮಾರೆಪ್ಪ ಕುಟುಂಬಕ್ಕೆ ಒಂದು ಎಕರೆ ಭೂಮಿ ಇದೆ. ಜೀವನ ಸಾಗಿಸಲು ಜೀರಾಳದ ಸಾಹುಕಾರರೊಬ್ಬರ ಹೊಲದಲ್ಲಿ ಕೂಲಿ ಕೆಲಸ ಮಾಡಿ, ಎರಡು ವರ್ಷದ ಹಿಂದೆ ಸ್ವಗ್ರಾಮ ಕಾಟಾಪುರಕ್ಕೆ ಬಂದಿದ್ದಾರೆ. ಲಕ್ಷ್ಮಿ ಅವರು ಕಾಟಾಪುರದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ.

ಆರ್ಥಿಕ ಸಮಸ್ಯೆ ಕಾರಣ ನಂತರ ತಮ್ಮ ಸೋದರ ಮಾವನ ಮನೆಯಲ್ಲಿ ಉಳಿದು, ಹುನಗುಂದ ತಾಲ್ಲೂಕಿನ ಬೇವಿನಮಟ್ಟಿಯಲ್ಲಿ ಪ್ರೌಢಶಾಲೆ ಶಿಕ್ಷಣ, ಇಳಕಲ್ ಮತ್ತು ಹುನಗುಂದ್‌ನಲ್ಲಿ ಪಿಯುಸಿ ಮತ್ತು ಪದವಿ ಶಿಕ್ಷಣ ಪಡೆದಿದ್ದಾರೆ.

2019ರಲ್ಲಿ ಎಸ್‌ಎಸ್‌ಬಿ ಪರೀಕ್ಷೆ ಬರೆದಿದ್ದು, 2021ರ ಫೆ.22ರಂದು ನೇಮಕಾತಿ ಆದೇಶ ಬಂದಿದೆ. ಕಡು ಬಡತನದಲ್ಲೇ ಅಧ್ಯಯನ ಮಾಡಿ ಈ ಹುದ್ದೆಗೆ ಆಯ್ಕೆಯಾಗಿರುವ ಲಕ್ಷ್ಮಿ ಕಬಡ್ಡಿ ಆಟಗಾರ್ತಿ. ಪ್ರೌಢಶಾಲೆ ಹಂತದಲ್ಲೇ ಮೂರು ಸಲ ರಾಜ್ಯಮಟ್ಟದಲ್ಲಿ ಕಬಡ್ಡಿ ಆಡಿದ್ದಾರೆ.

‘ನಿವೃತ್ತ ಸೈನಿಕ ಮತ್ತು ಮಾವನವರಾದ ಹನುಮಂತಪ್ಪ, ಬೇವಿನಮಟ್ಟಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎ.ಎಚ್.ನದಾಫ್ ಅವರ ಪ್ರೇರಣೆ ಮತ್ತು ತಂದೆ-ತಾಯಿಯವರ ಆಶೀರ್ವಾದದಿಂದ ಎಸ್‌ಎಸ್‌ಬಿ ಸೇರಲು ಸಾಧ್ಯವಾಗಿದೆ. ಶನಿವಾರ ಹೈದರಾಬಾದ್‌ ಮೂಲಕ ಅಸ್ಸಾಂ ರಾಜ್ಯಕ್ಕೆ ತೆರಳಿ, ಅಲ್ಲಿ ಸೇವೆಗೆ ಹಾಜರಾಗುವೆ’ ಎಂದು ಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಹಶೀಲ್ದಾರ್ ರವಿ ಅಂಗಡಿ ಅವರು ಶುಕ್ರವಾರ ಲಕ್ಷ್ಮಿಯ ಮನೆಗೆ ತೆರಳಿ ಸಿಹಿ ತಿನ್ನಿಸಿ, ಆರ್ಥಿಕ ನೆರವು ನೀಡಿದರು. ಅವರನ್ನು ಗ್ರಾಮಸ್ಥರು ಮತ್ತು ಶಿಕ್ಷಕರು ಸನ್ಮಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT