ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಬುರ್ಗಾ: ಮೆಕ್ಕೆಜೋಳ ಬೆಳೆಗೆ ಲದ್ದಿಹುಳ ಕಾಟ; ಪರಿಹಾರಕ್ಕೆ ಆಗ್ರಹ

Last Updated 23 ಜುಲೈ 2021, 12:24 IST
ಅಕ್ಷರ ಗಾತ್ರ

ಯಲಬುರ್ಗಾ: ಅಗತ್ಯಕ್ಕಿಂತಲೂ ಹೆಚ್ಚಿಗೆ ಸುರಿಯುತ್ತಿರುವ ಮಳೆಯಿಂದಾಗಿ ವಿವಿಧ ಬೆಳೆಗಳು ಕೊಳೆಯುತ್ತಿದ್ದು, ಜೊತೆಗೆ ರೋಗಗಳು ಕೂಡ ಕಾಣಿಸಿಕೊಂಡಿರುವುದು ತಾಲ್ಲೂಕಿನ ವಿವಿಧ ಪ್ರದೇಶದಲ್ಲಿ ಕಂಡು ಬರುತ್ತಿದೆ.

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಬೆಳೆಯು ಉತ್ತಮವಾಗಿಯೇ ಇದೆ. ಆದರೆ ಸತತ ಮಳೆ ಬೀಳುತ್ತಿರುವುದರಿಂದ ಬೇರುಗಳು ಕೊಳೆಯುತ್ತಿವೆ. ಮತ್ತೆ ಎಲೆಗಳು ಹಳದಿ ಬಣ್ಣಕ್ಕೆ ತೀರುತ್ತಿವೆ. ಮತ್ತೆ ಕೆಲವೊಂದು ಪ್ರದೇಶದಲ್ಲಿ ಲದ್ದಿ ಹುಳಗಳ ಕಾಟ ಹೆಚ್ಚಾಗಿದೆ. ಇದರಿಂದ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಕೋವಿಡ್‍ದಿಂದ ಹೊರಬಂದು ಬಿತ್ತನೆ ನಡೆಸಿ ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ಬಹುತೇಕ ರೈತರಿಗೆ ಸಾಲದ ಮೇಲೆ ಸಾಲ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು ಮತ್ತೆ ಸಾಲ ಮಾಡಿ ಕೀಟಬಾಧೆಗೆ ಔಷಧಿ ಸಿಂಪಡಣೆಗೆ ಮುಂದಾಗಬೇಕಾಗಿದೆ. ಅಲ್ಲದೆ ಎಡೆಬಿಡದೇ ಸುರಿದ ಮಳೆಯು ಯಾವುದೇ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗದಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕೃಷಿ ಇಲಾಖೆಯ ಅಧಿಕಾರಿಗಳು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮೆಕ್ಕೆಜೋಳಕ್ಕೆ ಕಾಣಿಸಿಕೊಂಡು ರೋಗದ ಬಗ್ಗೆ ಪರಿಶೀಲನೆ ನಡೆಸಿ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಬೇಕಾಗಿದೆ. ಅಲ್ಲದೇ ಸೂಕ್ತ ಪರಿಹಾರಕ್ಕೆ ಸರ್ಕಾರ ಮಂದಾಗಬೇಕು ಎಂದು ಗೆದಗೇರಿಯ ಶಂಕರಗೌಡ ಗೌಡ್ರ ಒತ್ತಾಯಿಸಿದ್ದಾರೆ.

ತಾಲ್ಲೂಕಿನಲ್ಲಿ ಮೆಕ್ಕೆಜೋಳವನ್ನೇ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಬೆಳೆಯು ವಿವಿಧ ರೀತಿಯಲ್ಲಿ ನಾಶಕ್ಕೆ ಕಾರಣವಾಗಿದೆ. ಪ್ರಕೃತಿ ವಿಕೋಪದಿಂದಾದ ಈ ನಾಶಕ್ಕೆ ಸರ್ಕಾರ ಸೂಕ್ತ ಪರಿಹಾರ ಘೋಷಣೆ ಮಾಡಬೇಕಾಗಿದೆ. ಅನೇಕ ಕಡೆ ಯಾವುದೇ ರೋಗ ಬಾಧೆ ಕಾಣಸಿಕೊಳ್ಳದಿದ್ದರೂ ಹೆಚ್ಚಿನ ತೇವಾಂಶದಿಂದ ಬೆಳೆ ಕೊಳೆತು ಹೋಗಿ ಸಂಪೂರ್ಣ ನಾಶವಾಗುತ್ತಿದೆ. ಈ ಕಾರಣದಿಂದ ಪರಿಹಾರ ಒದಗಿಸಿ ಸಂಕಷ್ಟದಲ್ಲಿರುವ ರೈತರ ರಕ್ಷಣೆಗೆ ಮುಂದಾಗಬೇಕು ಎಂದು ರಕ್ಷಣಾ ವೇದಿಕೆಯ ಶಿವಕುಮಾರ ನಾಗನಗೌಡ್ರ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT