ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಅರಿವು ಎಲ್ಲರಿಗೂ ಅಗತ್ಯ: ವಿ.ನಾಗರಾಜ ಅಭಿಮತ

Last Updated 19 ಸೆಪ್ಟೆಂಬರ್ 2021, 4:48 IST
ಅಕ್ಷರ ಗಾತ್ರ

ಗಂಗಾವತಿ: ಮನುಷ್ಯನ ಜೀವನಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಕಾನೂನು ಅಗತ್ಯವಾಗಿದೆ. ಒಂದು ವೇಳೆ ಮನುಷ್ಯ ಕಾನೂನು ಕೈಬಿಟ್ಟರು, ಕಾನೂನು ಮನುಷ್ಯನನ್ನು ಕೈಬಿಡುವುದಿಲ್ಲ ಎಂದು ಗಂಗಾವತಿ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ನಾಗರಾಜ ಅಭಿಪ್ರಾಯ ಪಟ್ಟರು.

ತಾಲ್ಲೂಕು ಸೇವಾ ಕಾನೂನು ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ನಗರದ ಸಂಕಲ್ಪ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾವೆಲ್ಲರೂ ಸಮಾಜದಲ್ಲಿ ಜೀವನ ನಡೆಸುತ್ತಿವೆ. ಕೆಲ ನಿಯಮ, ರೀತಿ, ನೀತಿಗಳು ಸುಗಮ ಜೀವನಕ್ಕೆ ಬೇಕು. ಇತ್ತೀಚಿನ ದಿನಗಳಲ್ಲಿ ಹದಿ ಹರೆಯದ ಯುವಕರು ಸಂಚಾರ ನಿಯಮ ಉಲ್ಲಂಘಿಸಿ ವಾಹನ ಓಡಿಸುತ್ತಿದ್ದಾರೆ. ಇದರಿಂದ ಅಪಘಾತಗಳು ಸಂಭವಿಸಿ, ಬಾಲಾಪರಾಧಿಗಳ ಪಟ್ಟಿಗೆ ಸೇರುತ್ತಿದ್ದಾರೆ. ನಿಯಮ ಪಾಲನೆಗೆ ಒತ್ತು ನೀಡಬೇಕು ಎಂದರು.

ವಕೀಲ ಮುರ್ತುಜಾ ಭಾವಿಕಟ್ಟಿ ಮಾತನಾಡಿ, ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅಳವಡಿಸಲಾಗಿದೆ. ಅವುಗಳನ್ನು ಮೊದಲು ಅರಿಯಬೇಕು.

ಮಹಿಳೆಯರಿಗಾಗಿ ವಿಶೇಷ ಕಾನೂನುಗಳು ರಚನೆಯಾಗಿದ್ದು, ಅವುಗಳ ಮಾಹಿತಿ ಪಡೆದಾಗ ಹಲ್ಲೆ, ಲೈಂಗಿಕ ಕಿರುಕುಳ ಸಮಸ್ಯೆಗಳನ್ನು ತಡೆಯಲು ಮತ್ತು ಅವುಗಳಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ ಎಂದರು.

ವಕೀಲ ನಾಗರಾಜ ಎಸ್ ಗುತ್ತೇದಾರ ಮಾತನಾಡಿ, ಎಲ್ಲರೂ ಎಲ್ಲ ಕಾನೂನುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗದೆ ಇದ್ದರೂ ನಮ್ಮ ದೈನಂದಿನ ಜೀವನ ಯಾವುದೇ ಅಡೆ ತಡೆಯಿಲ್ಲದೇ ನೆಮ್ಮದಿಯಿಂದ ಸಾಗಲು ಬೇಕಾಗುವ ಕಾನೂನುಗಳ ಅರಿವು ಪಡೆದುಕೊಳ್ಳಬೇಕು ಎಂದರು.

ಕಾನೂನಿನ ಮುಂದೆ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನತೆಯಿಂದ ಬಾಳಬಹುದು. ಆದ್ದರಿಂದ ಪ್ರತಿಯೊಬ್ಬರು ಕಾನೂನು ಅರಿವು ಪಡೆಯಬೇಕು. ಆಗ ಮಾತ್ರ ಅಪರಾಧಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತವೆ. ಈ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಿ, ದೇಶದ ಅಭಿವೃದ್ಧಿಗೆ ನಾಂದಿಯಾಗುತ್ತದೆ ಎಂದು ತಿಳಿಸಿದರು.

ವಕೀಲರ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ಬಿ.ಪ್ರಭು, ಪದವಿ ಕಾಲೇಜಿನ ಪ್ರಾಚಾರ್ಯ ಬಸಪ್ಪ ಶಿರಗೇರಿ, ಕಾರ್ಯದರ್ಶಿ ವಿರುಪಾಕ್ಷಪ್ಪ ಬಾವಿಕಟ್ಟಿ, ಪಿಯುಸಿ ಕಾಲೇಜಿನ ಪ್ರಾಚಾರ್ಯ ಎಂ.ಆರ್ ಮಂಜುನಾಥ, ವಕೀಲರಾದ ಎಚ್.ಎಂ.ಮಂಜುನಾಥ, ಪಿ.ವಿ ಪಾಟೀಲ, ಬಸವರಾಜ ಡಂಕನಕಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT