ಸೋಮವಾರ, ಸೆಪ್ಟೆಂಬರ್ 27, 2021
25 °C
ಭೋವಿ ಸಮುದಾಯದವರಿಂದ ತಹಶೀಲ್ದಾರ್‌ಗೆ ಮನವಿ

ಕಲ್ಲು ಒಡೆಯಲು ಅವಕಾಶ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ‘ತಾಲ್ಲೂಕಿ‌ನ ಆನೆಗೊಂದಿ, ಮಲ್ಲಾಪುರ ಭಾಗದಲ್ಲಿ ಭೋವಿ ಸಮಾಜದವರು ಕಲ್ಲು ಒಡೆಯುವ ಮೂಲಕ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾರೆ. ಕಲ್ಲು ಒಡೆಯಲು ಅವಕಾಶ ಕಲ್ಪಿಸಬೇಕು’ ಎಂದು ಭೋವಿ ಸಮುದಾಯದವರು ತಹಶೀಲ್ದಾರ್ ನಾಗರಾಜ ಅವರಿಗೆ ಮನವಿ ಸಲ್ಲಿಸಿದ್ದಾರೆ.

ತಾಲ್ಲೂಕಿನ ಸುತ್ತಮುತ್ತ ಭೋವಿ ಸಮಾಜ ನಲವತ್ತು ವರ್ಷಗಳಿಂದ‌ ಕಲ್ಲು ಒಡೆಯುವ ಕಾಯಕ ಮಾಡುತ್ತ ಬಂದಿದೆ. ಮನೆ ನಿರ್ಮಾಣಕ್ಕೆ ಸೈಜ್, ರಬ್ಬರ್, ಜೆಲ್ಲಿ ಕಲ್ಲಿನ ಅವಶ್ಯಕ. ಆದ್ದರಿಂದ ಹೊಟ್ಟೆ ಪಾಡಿಗಾಗಿ ಭೋವಿ ಸಮಾಜ ಕಲ್ಲು ಒಡೆಯುವುದರಲ್ಲಿ ನಿರತವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಆನೆಗೊಂದಿ, ಸಂಗಾಪುರ, ಬಂಡಿಬಸಪ್ಪ ಕ್ಯಾಂಪ್, ಮಲ್ಲಾಪುರ ಸೇರಿ ವಿವಿಧ ಗ್ರಾಮಗಳಲ್ಲಿ ಭೋವಿ ಸಮಾಜ ಕಲ್ಲು ಒಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.

ಕಲ್ಲು ಗಣಿಗಾರಿಕೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ಕಲ್ಲು ಒಡೆಯುವುದನ್ನು ನಿರ್ಬಂಧಿಸಿದ್ದಾರೆ. ಇದೆ ವೃತ್ತಿಯನ್ನು ನಂಬಿದ ಬಡ ಕುಟುಂಬಗಳು ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ ಎಂದಿದ್ದಾರೆ.

ಭೋವಿ ಸಮಾಜ ಕಲ್ಲು ಗಣಿಗಾರಿಕೆಯ ಜತೆಗೆ ಬೃಹತ್ ಬಂಡೆಗಳನ್ನು ಬ್ಲಾಸ್ಟ್ ಮಾಡುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಆದರೆ ಇವೆಲ್ಲ‌ ಸುಳ್ಳು. ಉಳ್ಳವರ ಕೈ ಚಳಕವೇ ಹೊರತು, ಒಂದು ಹೊತ್ತಿನ ಊಟಕ್ಕಾಗಿ ದುಡಿಯುವ ಬಡ‌ ಜನರ ಕಾರ್ಯವಲ್ಲ ಇದು ಎಂದು ಹೇಳಿದ್ದಾರೆ.

ಈ ವಿಷಯವನ್ನು ಶಾಸಕರರು ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಮರಳಿ ಕಲ್ಲು ಒಡೆಯಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ‌ ಅದು ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಭೋವಿ ಸಮಾಜದವರು ತಹಶೀಲ್ದಾರರಿಗೆ ನೀಡಿದ ಮನವಿ ತಿಳಿಸಿದ್ದಾರೆ.

ಭೋವಿ ಸಮಾಜದ ಮುಖಂಡರಾದ ರಾಮಕೃಷ್ಣ, ಲೋಕೇಶ, ವೈರಿಮಣಿ, ಹೇಮಣ್ಣ, ಸತ್ಯವೇಲು, ಚಂದ್ರು, ಗುನ್ನೆಪ್ಪ, ದೇವರಾಜ, ಗೋಪಿ, ವಿಶ್ವ, ತ್ಯಾಗರಾಜ, ಹುಲ್ಲೇಶ, ಪರಸಪ್ಪ, ಶ್ರೀನಿವಾಸ, ಅಂಜಿನಪ್ಪ, ರಾಜು, ರಾಮು ಹಾಗೂ ಯುವ ಮುಖಂಡ ನಾಗರಾಜ ಚಳಗೇರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು