ಮಂಗಳವಾರ, ಫೆಬ್ರವರಿ 18, 2020
20 °C
ಅಬ್ಬೂರು ಎಂ.ಶ್ರೀನಿವಾಸು ‘ಹಾಲ್ಗಂಬ’ ಕವನ ಸಂಕಲನ ಬಿಡುಗಡೆ, ಸಣ್ಣ ಕಥೆಗಳ ಗೋಷ್ಠಿ

ದೇಶ ಕಟ್ಟುವಲ್ಲಿ ಸಾಹಿತ್ಯದ ಪಾತ್ರ ಪ್ರಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಶಕ್ತ ದೇಶ ಕಟ್ಟುವಲ್ಲಿ ಸಾಹಿತ್ಯದ ಪಾತ್ರ ಪ್ರಮುಖವಾದುದು ಎಂದು ಕುಂಬಾರ ಮಹಾ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಕೆ. ತಿಮ್ಮಪ್ಪರಾಜು ಹೇಳಿದರು.

ಪಟ್ಟಣದ ಶ್ರೀ ಲಕ್ಷ್ಮಿ ಆಸ್ಪತ್ರೆ ಆವರಣದಲ್ಲಿ ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಅಬ್ಬೂರು ಎಂ.ಶ್ರೀನಿವಾಸು ಅವರ ಹಾಲ್ಗಂಬ ಕವನ ಸಂಕಲನ ಬಿಡುಗಡೆ ಹಾಗೂ ಸಣ್ಣ ಕಥೆಗಳ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೇಲುಕೀಳೆಂಬ ತಾರತಮ್ಯಗಳನ್ನು ಹೋಗಲಾಡಿಸಲು ಸಾಹಿತ್ಯ ದಾರಿದೀಪ. ಸಾಹಿತ್ಯದ ಮೂಲಕ ಮಾನವ ಸಂಬಂಧಗಳನ್ನು ಬೆಸೆಯಲು ಬರಹಗಾರರು ಮುಂದಾಗಬೇಕು. ಸಮಾಜದ ಸಮಸ್ಯೆಗಳಿಗೆ ಉತ್ತರ ಹುಡುಕುವ ಪ್ರಯತ್ನವಿರಲಿ. ಸಾಹಿತ್ಯ ಎಂದಿಗೂ ಜೀವ ವಿರೋಧಿಯಾಗಬಾರದು. ಪ್ರಸ್ತುತ ಪುಸ್ತಕ ಓದುವ ಸಂಸ್ಕೃತಿ ಮರೆಯಾಗುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದರು.

ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ. ಶಿವಮಾದು ಮಾತನಾಡಿ, ಸಾಹಿತ್ಯ ಸಮಾಜದ ಪ್ರತಿಬಿಂಬ. ಯಾವುದೇ ಕಾಲದ ಕವಿ ತನ್ನ ಕಾಲದ ವಿದ್ಯಮಾನಗಳನ್ನು ಸಾಹಿತ್ಯದ ಮೂಲಕ ಕಟ್ಟಿಕೊಡುತ್ತಾನೆ. ಸಕಾರಾತ್ಮಕ ಆಲೋಚನೆಗಳನ್ನು ಬಿತ್ತುವ ಮೂಲಕ ಒಡೆದ ಮನಸ್ಸುಗಳನ್ನು ಕಟ್ಟುವ ಕೆಲಸವನ್ನು ಸಾಹಿತಿ ನಿರ್ವಹಿಸುತ್ತಾನೆ. ಪ್ರಾಸಕ್ಕೆ ಕಟ್ಟುಬೀಳದೆ, ತಮ್ಮ ಅನುಭವಗಳನ್ನು ಬರಹವಾಗಿಸಬೇಕು ಎಂದರು.

ಹಿರಿಯ ಸಾಹಿತಿ ಎಲೆಕೇರಿ ಶಿವರಾಂ ಮಾತನಾಡಿ, ಜನಮಾನಸದಲ್ಲಿ ಗಟ್ಟಿಯಾಗಿ ನಿಲ್ಲುವ, ಸಮಾಜಕ್ಕೆ ಅತ್ಯಗತ್ಯವಾಗಿ ಬೇಕಾದ ಸಾಹಿತ್ಯ ರಚನೆಯಾಗಬೇಕು. ಕವಿಯಾಗುವವನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.

ಸಾಹಿತಿ ಡಾ.ಅಂಕನಹಳ್ಳಿ ಪಾರ್ಥ ಅಧ್ಯಕ್ಷತೆ ವಹಿಸಿದ್ದರು. ಯುವ ಕವಿ ಅಬ್ಬೂರು ಶ್ರೀನಿವಾಸ್, ಶ್ರೀ ಲಕ್ಷ್ಮಿ ಆಸ್ಪತ್ರೆಯ ವ್ಯವಸ್ಥಾಪಕ ಆರ್.ಎಸ್.ಸಿದ್ದಯ್ಯ ಮಾತನಾಡಿದರು. ಟ್ರಸ್ಟ್ ನ ಸಂಸ್ಥಾಪಕ ಕಾರ್ಯದರ್ಶಿ ವಿಜಯ್ ರಾಂಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಣ್ಣ ಕಥೆಗಳ ಗೋಷ್ಠಿಯಲ್ಲಿ ಎಲೆಕೇರಿ ರಾಜಶೇಖರ್, ಚಕ್ಕೆರೆ ಯೋಗೇಶ್, ಶ್ರೀನಿವಾಸ್ ರಾಂಪುರ, ಯೋಗೇಶ್ ದ್ಯಾವಪಟ್ಟಣ, ಮಂಜೇಶ್ ಬಾಬು, ಸಚಿನ್ ಕೆಲಗೆರೆ, ಲಕ್ಷ್ಮಿ ಕಿಶೋರ್ ಅರಸು, ಮೇದರಹಟ್ಟಿ ಹನುಮಂತು, ತುಂಬೇನಹಳ್ಳಿ ಕಿರಣ್ ರಾಜ್, ಕುಮಾರಿ ಸಂಧ್ಯಾ, ದರ್ಶನ್ ಗೌಡ ಶೆಟ್ಟಿಹಳ್ಳಿ, ಗುನ್ನೂರು ಚೇತನ್, ತುಳಸೀಧರ ಭಾಗವಹಿಸಿದ್ದರು.

ಜನಪದ ಗಾಯಕ ಬೇವೂರು ರಾಮಯ್ಯ ಗೀತಗಾಯನ ನಡೆಸಿಕೊಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)