ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಪರಿಣಾಮ: ಮಹಾರಾಷ್ಟ್ರದ ಕಾಡಿನಲ್ಲೇ ಉಳಿದ ಕರ್ನಾಟಕದ ಕಾರ್ಮಿಕರು

Last Updated 28 ಮಾರ್ಚ್ 2020, 14:33 IST
ಅಕ್ಷರ ಗಾತ್ರ

ಹನುಮಸಾಗರ (ಕೊಪ್ಪಳ ಜಿಲ್ಲೆ): ಬಾವಿ ತೋಡುವ ಕೆಲಸಕ್ಕೆ ಕೂಲಿ ಅರಸಿ ಮಹಾರಾಷ್ಟ್ರಕ್ಕೆ ಹೋಗಿದ್ದ ಸಮೀಪದ ಕುಂಬಳಾವತಿ ಗ್ರಾಮದ ಸುಮಾರು 60 ಕಾರ್ಮಿಕರು ಕೊರೊನಾ ಭೀತಿಯಿಂದ ಕೆಲಸವೂ ಇಲ್ಲದೆ, ಊರಿಗೆ ಮರಳಲು ಆಗದೆ, ಆಹಾರವಿಲ್ಲದೆ ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆಯ ಅರಣ್ಯದಲ್ಲಿಯೇ ನೋವು ಅನುಭವಿಸುತ್ತಿದ್ದಾರೆ.

‘ನಮ್ಮನ್ನು ಗ್ರಾಮಕ್ಕೆ ಕರೆಯಿಸಿಕೊಳ್ಳಲು ಜಿಲ್ಲಾಡಳಿತ ಕ್ರಮಕೈಕೊಳ್ಳಬೇಕು' ಎಂದು ವ್ಯಾಟ್ಸ್‌ ಆ್ಯಪ್‌ ಮೂಲಕ ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದಾರೆ.

ಮಹಾರಾಷ್ಟ್ರಕ್ಕೆ 15 ದಿನಗಳ ಹಿಂದೆ ತೋಟದ ಮನೆಗಳಲ್ಲಿ ಬಾವಿ ತೋಡುವ ಕೂಲಿ ಕೆಲಸಕ್ಕಾಗಿ ಮಹಿಳೆಯರು ಮಕ್ಕಳೊಂದಿಗೆ ಗುಳೆ ಹೋಗಿದ್ದರು. ಅಲ್ಲಿನ ಸಿಂಧೂದುರ್ಗ ಜಿಲ್ಲೆಯ ವಿಂಗುರ್ಲಾ ತಾಲ್ಲೂಕಿನ ಉಭೆಯದಂಡ (ಶಾಂತವಾಡ ಸಮೀಪ) ಗ್ರಾಮದ ಬಳಿಯ ಅರಣ್ಯದಲ್ಲಿ ಜೋಪಡಿ ಹಾಕಿಕೊಂಡು ಉಪಜೀವನ ನಡೆಸುತ್ತಿದ್ದರು.

ಆದರೆ, ಕೊರೊನಾ ವೈರಸ್ ಭೀತಿಯಿಂದ ಅಲ್ಲಿ ಕೆಲಸವೂ ಈಗ ದೊರೆಯುತ್ತಿಲ್ಲ. 'ತಮ್ಮಲ್ಲಿದ್ದ ಹಣ ಹಾಗೂ ದವಸ ಧಾನ್ಯವೂ ಖಾಲಿಯಾಗಿರುವುದರಿಂದ ಎರಡು ದಿನಗಳಿಂದ ಮಕ್ಕಳೊಂದಿಗೆ ಉಪವಾಸ ಇದ್ದೇವೆ. ಆರೋಗ್ಯವೂ ಹದಗೆಡುತ್ತಿದೆ' ಎಂದು ಅಳಲು ತೋಡಿಕೊಂಡಿದ್ದಾರೆ.

'ತಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇವೆ. ನಮಗೆ ಸಹಾಯಮಾಡಿರಿ, ಬಸ್ ಇಲ್ಲದೆ ನಾವು ಅರಣ್ಯದಲ್ಲಿಯೇ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಗಮನಹರಿಸಿಬೇಕು' ಎಂದು ಗುಪಿನಲ್ಲಿದ್ದ ದ್ಯಾಮಣ್ಣ ಕಳಕಪ್ಪ ಗಾಣದಾಳ ಎಂಬ ಕಾರ್ಮಿಕನೊಬ್ಬ ಕಳಿಸಿದ ವಿಡಿಯೊ ತುಣುಕೊಂದರಲ್ಲಿ ಅವರು ಮನವಿ ಮಾಡುತ್ತಿದ್ದಾರೆ.

'ಜಿಲ್ಲಾಡಳಿತ ನಮ್ಮ ಗ್ರಾಮದ ಜನರನ್ನು ಸಂರಕ್ಷಣೆ ಮಾಡಬೇಕು. ನಮಗೆ ಸಂಚಾರಿ ಪಾಸ್ ನೀಡಿದರೆ ನಾವಾದರೂ ಹೋಗಿ ನಮ್ಮವರನ್ನು ಕರೆದುಕೊಂಡು ಬರುತ್ತೇವೆ' ಎಂದು ಗ್ರಾಮದ ಹನುಮಂತ ರಾವಣಕಿ, ದ್ಯಾಮಣ್ಣ, ನೀಲಪ್ಪ ಹನುಮನಾಳ ಒತ್ತಾಯಿಸಿದ್ದಾರೆ.

100ಕ್ಕೂ ಹೆಚ್ಚು ಲಾರಿ ಚಾಲಕರು ಅತಂತ್ರ

ಕೊಪ್ಪಳ: ಜಿಲ್ಲೆಯಲ್ಲಿ ಹಾದು ಹೋಗಿರುವ ಎರಡು ರಾಜ್ಯ ಹೆದ್ದಾರಿಗಳಲ್ಲಿ 100ಕ್ಕೂ ಹೆಚ್ಚು ಟ್ರಕ್‌ ಚಾಲಕರು ಮತ್ತು ಕ್ಲೀನರ್ ಅತಂತ್ರರಾಗಿದ್ದು, ತಮ್ಮ ರಾಜ್ಯಗಳಿಗೆ ಕಳುಹಿಸಿಕೊಡುವಂತೆ ಮನವಿ ಮಾಡಿದ ವಿಡಿಯೋಗಳು ವಾಟ್ಸ್‌ ಮೂಲಕ ಬಂದಿದ್ದು, ಜಿಲ್ಲಾಡಳಿತ ಅಂತವರ ಸುರಕ್ಷತೆ ದೃಷ್ಟಿಯಿಂದ ನಿಗಾ ವಹಿಸಿದೆ.

ಪಂಜಾಬ್‌ನ 20ಕ್ಕೂ ಹೆಚ್ಚು ಟ್ರಕ್‌ ಚಾಲಕರು ಕುಷ್ಟಗಿ ಮತ್ತು ಇಲಕಲ್ಲ ಮಧ್ಯೆದ ಹೆದ್ದಾರಿಯಲ್ಲಿ ಸಿಲುಕಿಕೊಂಡು ನೀರು, ಊಟ ಇಲ್ಲದೆ ಬಳಲುತ್ತಿದ್ದಾರೆ. ದಾರಿಯಲ್ಲಿ ಸಿಕ್ಕ ವಾಹನ ಹತ್ತಿಕೊಂಡು ಹೋಗಬೇಕು ಎಂದರೆ ಯಾವ ಟ್ರಕ್‌ಗಳು ಬರುತ್ತಿಲ್ಲ. ಸರ್ಕಾರದ ಹೊಸ ಆದೇಶ ಪ್ರಕಾರ ಯಾರೂ ಎಲ್ಲಿಯೂ ಸಂಚರಿಸುವಂತೆ ಇಲ್ಲ ಎಂದು ಹೇಳಿದ್ದರಿಂದ ಮುಂದೆಯೂ ಹೋಗದೆ, ಹಿಂದೆಯೂ ಬರದೇ ಪರದಾಡುತ್ತಿದ್ದಾರೆ.

ಹೆದ್ದಾರಿ ಬದಿಯ ಗ್ರಾಮಸ್ಥರು ನೀರು ನೀಡುತ್ತಿದ್ದು, ಪರಿಸ್ಥಿತಿ ಹದಗೆಡುತ್ತಿದೆ. ಇವರ ಸಂಕಷ್ಟವನ್ನು ಕಂಡ ಸಂಸದ ಸಂಗಣ್ಣ ಕರಡಿ ಹೆದ್ದಾರಿ ಬದಿಯಲ್ಲಿರುವ ಆಯಾ ರಾಜ್ಯದವರ ಢಾಬಾಗಳಲ್ಲಿ ವಸತಿ, ಊಟದ ವ್ಯವಸ್ಥೆ ಮಾಡುವಂತೆ ಮುಖ್ಯಕಾರ್ಯದರ್ಶಿಗೆ ದೂರವಾಣಿ ಮೂಲಕ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT