ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಮುಗಿದ ಮತದಾನ; ಈಗ ಫಲಿತಾಂಶದ್ದೇ ಧ್ಯಾನ

ಕ್ಷೇತ್ರದಾದ್ಯಂತ ಸೋಲು, ಗೆಲುವಿನ ಲೆಕ್ಕಾಚಾರ, ಜ್ಯೋತಿಷಿಗಳ ಮೊರೆ ಹೋದ ರಾಜಕಾರಣಿಗಳು
Published 9 ಮೇ 2024, 5:33 IST
Last Updated 9 ಮೇ 2024, 5:33 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭಾ ಚುನಾವಣೆಯ ಕೊಪ್ಪಳ ಕ್ಷೇತ್ರದ ಮತದಾನ ಪೂರ್ಣಗೊಂಡಿದ್ದು ಈಗ ರಾಜಕೀಯ ಪಕ್ಷಗಳ ನಾಯಕರು, ಅಭ್ಯರ್ಥಿಗಳು, ಮುಖಂಡರು ಮತ್ತು ಕಾರ್ಯಕರ್ತರ ನಡುವೆ ಕ್ಷೇತ್ರದಾದ್ಯಂತ ಫಲಿತಾಂಶದ ಚರ್ಚೆ ಶುರುವಾಗಿದೆ.

ಮತದಾನದ ಪ್ರಕ್ರಿಯೆ ಮಂಗಳವಾರ ಸಂಜೆ ಮುಗಿದು ಬೆಳಗಿನ ಜಾವದ ವೇಳೆ ಇಲ್ಲಿನ ಗವಿಸಿದ್ಧೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಪದವಿ ಕಾಲೇಜಿನ ಕಟ್ಟದಲ್ಲಿ ಮತಯಂತ್ರಗಳು ಭದ್ರವಾಗಿವೆ. ಪೊಲೀಸ್‌ ಸರ್ಪಗಾವಲೂ ಹಾಕಲಾಗಿದೆ. ಪ್ರಚಾರ, ಸಭೆ ಹಾಗೂ ಸಮಾರಂಭಗಳಿಗೆ ಹಿಂದಿನ ಒಂದೂವರೆ ತಿಂಗಳು ಹಗಲಿರುಳು ತಮ್ಮ ಪಕ್ಷಕ್ಕಾಗಿ ಕೆಲಸ ಮಾಡಿದ್ದ ನಾಯಕರು ಈಗ ವಿಶ್ರಾಂತಿಗೆ ಜಾರಿದ್ದಾರೆ.

ಬಿರುಬಿಸಿಲಿನ ಹೊಡೆತ, ನಿರಂತರ ಜನರನ್ನು ಭೇಟಿಯಾಗುವ ಕೆಲಸದಿಂದ ಕೆಲವರು ವಿಶ್ರಾಂತಿ ಮೊರೆ ಹೋದರೂ ಕಾರ್ಯಕರ್ತರು ಮನೆಗೆ ಭೇಟಿ ನೀಡಿ ಪಕ್ಷಕ್ಕೆ ಯಾವ ಬೂತ್‌ನಲ್ಲಿ ಹಿನ್ನಡೆಯಾಗಬಹುದು, ಎಲ್ಲಿ ಮುನ್ನಡೆ ಲಭಿಸಬಹುದು ಎನ್ನುವ ವರದಿ ಒಪ್ಪಿಸುತ್ತಿದ್ದಾರೆ. ತಮಗಾಗಿ ದುಡಿದ ಪಕ್ಷದವರನ್ನು ಅಭ್ಯರ್ಥಿಗಳು ಪ್ರೀತಿಯಿಂದ ಮಾತನಾಡಿಸಿ ಧನ್ಯವಾದ ಸಲ್ಲಿಸುತ್ತಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಆಗಿದ್ದ ಶೇ 68.41ಕ್ಕಿಂತಲೂ ಈ ಸಲ ಹೆಚ್ಚಿನ ಪ್ರಮಾಣದಲ್ಲಿ (ಶೇ. 70.99) ಮತದಾನವಾಗಿದ್ದು ಕೂಡ ಸ್ಪರ್ಧೆಯಿರುವ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಆಶಾಭಾವನೆ ಮೂಡಿದೆ. ಗ್ಯಾರಂಟಿ ಯೋಜನೆಗಳ ಲಾಭ ಪಡೆದ ಮಹಿಳೆಯರು ನಮ್ಮ ಪಕ್ಷಕ್ಕೆ ಹೆಚ್ಚಿನ ಮತ ಹಾಕಿದ್ದಾರೆ, ಹಲವು ಸಮುದಾಯಗಳ ಮತಗಳೂ ನಮಗೇ ಲಭಿಸಿವೆ ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ತೊಡಗಿದ್ದರೆ, ಬಿಜೆಪಿಯವರು ನರೇಂದ್ರ ಮೋದಿ ನಾಯಕತ್ವ ಯುವಕರನ್ನು ಹೆಚ್ಚು ಆಕರ್ಷಿಸಿದೆ. ಹೀಗಾಗಿ ಯುವ ಸಮುದಾಯ ಮತ್ತು ಒಂದಷ್ಟು ಸಮುದಾಯಗಳ ಮತದ ಬಲ ನಮಗೇ ಸಿಕ್ಕಿದೆ, ಹೀಗಾಗಿ ಗೆಲುವು ನಮಗೇ ಶತಸಿದ್ಧ ಎನ್ನುವ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಇದು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಲೆಕ್ಕಾಚಾರವಾದರೆ ಕಣದಲ್ಲಿರುವ ವಿವಿಧ ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳು ತಾವೆಷ್ಟು ಮತಗಳು ಲಭಿಸಬಹುದು ಎನ್ನುವ ಯೋಚನೆಯಲ್ಲಿದ್ದಾರೆ.

ಚರ್ಚೆ ಜೋರು: ಮತದಾನಕ್ಕೂ ಪೂರ್ವದಲ್ಲಿ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಬಹುದು ಎನ್ನುವ ಚರ್ಚೆಗೆ ವೇದಿಕೆಯಾಗಿದ್ದ ಚಹಾ ಅಂಗಡಿ, ಹರಟೆಕಟ್ಟೆ, ಹೋಟೆಲ್‌ಗಳಲ್ಲಿಯೂ ಈಗ ಫಲಿತಾಂಶದ ಚರ್ಚೆ ಶುರುವಾಗಿದೆ. ವಿಶೇಷವಾಗಿ ಆಟೊ ಚಾಲಕರು, ನಡುವೆ ಈ ಚರ್ಚೆ ಬಿರುಸು ಪಡೆದುಕೊಂಡಿದೆ.

ಬಿಜೆಪಿ ಅಭ್ಯರ್ಥಿ ಬಸವರಾಜ ಅವರ ತವರು ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 5.65ರಷ್ಟು ಮತದಾನ ಹೆಚ್ಚಳವಾಗಿದ್ದು ಕೂಡ ವಿಶೇಷವಾಗಿದೆ. 2019ರ ಚುನಾವಣೆಯಲ್ಲಿ ಅಲ್ಲಿ ಶೇ. 69.24ರಷ್ಟು ಮತದಾನವಾಗಿತ್ತು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾ‍ಪುರ ಕೂಡ ಇರುವುದು ಕುಷ್ಟಗಿಯಲ್ಲಿಯೇ. ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ ಅವರ ತವರು ಕುಷ್ಟಗಿಯೇ ಆಗಿರುವ ಕಾರಣ ಅಲ್ಲಿ ಮುನ್ನಡೆ ಗಳಿಸಿವುದು ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ.

ಕೊಪ್ಪಳ ಲೋಕಸಭಾ ಕ್ಷೇತ್ರದ ಒಟ್ಟು ಎಂಟು ಕ್ಷೇತ್ರಗಳಲ್ಲಿ ಆರರಲ್ಲಿ ಕಾಂಗ್ರೆಸ್‌ ಮತ್ತು ಎರಡರಲ್ಲಿ ಬಿಜೆಪಿ ಶಾಸಕರು ಇದ್ದು, ಶಾಸಕರು ಇರುವ ಕ್ಷೇತ್ರಗಳಲ್ಲಿ ಅವರಿಗೆ ತಮ್ಮ ಪಕ್ಷಕ್ಕೆ ಮುನ್ನಡೆ ತಂದುಕೊಡಬೇಕಾದ ಸವಾಲು ಇದೆ.

ಜ್ಯೋತಿಷಿಗಳ ಮೊರೆ: ಮತದಾನ ಮುಗಿಯುತ್ತಿದ್ದಂತೆ ಕೆಲ ರಾಜಕಾರಣಿಗಳು ಫಲಿತಾಂಶ ಏನಾಗಲಿದೆ ಎನ್ನುವ ಕುತೂಹಲ ತಡೆಯಲಾಗದೆ ಜ್ಯೋತಿಷಿಗಳ ಮೊರೆ ಹೋದರೆ, ಇನ್ನೂ ಕೆಲವರು ತಮ್ಮ ಮನೆದೇವರ ಬಳಿ ನಮ್ಮ ಪಕ್ಷದ ಅಭ್ಯರ್ಥಿಗೆ ಗೆಲುವಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

‘ಮತದಾನ ಮುಗಿಯುತ್ತಿದ್ದಂತೆಯೇ ನಾವು ಕಾಯಂ ಆಗಿ ಹೋಗುವ ಜ್ಯೋತಿಷಿಯೊಬ್ಬರ ಬಳಿ ಫಲಿತಾಂಶ ಏನಾಗಬಹುದು ಎಂದು ಕೇಳಿದ್ದೇನೆ. ಅವರು ನಮ್ಮ ಪಕ್ಷಕ್ಕೆ ಗೆಲುವು ಸಿಗಲಿದೆ ಎಂದಿದ್ದಾರೆ’ ಎಂದು ಹೆಸರು ಹೇಳಲು ಬಯಸದ ಮುಖಂಡರೊಬ್ಬರು ತಿಳಿಸಿದರು.

ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ಮತಯಂತ್ರ ಭದ್ರ ಜೂನ್‌ 4ರಂದು ನಡೆಯಲಿರುವ ಮತ ಎಣಿಕೆ ಮತದಾನದ ವರದಿ ಒಪ್ಪಿಸಲು ಅಭ್ಯರ್ಥಿಗಳ ಮನೆಗೆ ಕಾರ್ಯಕರ್ತರ ದಂಡು
ನಮ್ಮ ನಿರೀಕ್ಷೆಗಿಂತಲೂ ಉತ್ತಮ ಮತದಾನವಾಗಿರುವುದರಿಂದ ಫಲಿತಾಂಶ ನಮ್ಮ ಪಕ್ಷದ ಪರವಾಗಿ ಬರುತ್ತದೆ ಎನ್ನುವ ವಿಶ್ವಾಸವಿದೆ. ಕಾರ್ಯಕರ್ತರು ಕೂಡ ಇದೇ ಮಾತು ಹೇಳುತ್ತಿದ್ದಾರೆ.
ಕೆ. ರಾಜಶೇಖರ ಹಿಟ್ನಾಳ ಕಾಂಗ್ರೆಸ್‌ ಅಭ್ಯರ್ಥಿ
ಪಕ್ಷವನ್ನು ತಾಯಿ ಎನ್ನುವಂತೆ ನಮ್ಮ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಅವರ ಅತೀವ ಉತ್ಸಾಹ ಮತ್ತು ನರೇಂದ್ರ ಮೋದಿ ಅವರ ಅಲೆ ನನ್ನ ಗೆಲುವಿಗೆ ನೆರವಾಗುತ್ತದೆ.
ಡಾ. ಬಸವರಾಜ ಕ್ಯಾವಟರ್‌ ಬಿಜೆಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT