ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಅಸ್ತಮಾ ನಿವಾರಣೆ ಮಾತ್ರೆ ಪಡೆಯಲು ಜನಸಾಗರ

Last Updated 8 ಜೂನ್ 2022, 15:50 IST
ಅಕ್ಷರ ಗಾತ್ರ

ಕುಟಕನಹಳ್ಳಿ (ಕೊಪ್ಪಳ): ತಾಲ್ಲೂಕಿನ ಹಾಲವರ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಟಕನಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಮೃಗಶಿರ ಮಳೆ ಕೂಡುವ ಸಮಯದಲ್ಲಿ ಉಚಿತವಾಗಿ ನೀಡಲಾದ ಅಸ್ತಮಾ ನಿವಾರಣೆ ಮಾತ್ರೆ ಪಡೆಯಲು ಜನಸಾಗರವೇ ಹರಿದು ಬಂತು.

ಅಶೋಕರಾವ್ ವ್ಯಾಸರಾವ ಕುಲಕರ್ಣಿ ಎಂಬುವರು ತಮ್ಮ ತಂದೆ ಕಾಲದಿಂದಲೂ ಮಾತ್ರೆ ನೀಡುತ್ತಿದ್ದಾರೆ. ಕೋವಿಡ್‌ ಕಾರಣದಿಂದಾಗಿ ಹಿಂದಿನ ಎರಡು ವರ್ಷ ಮಾತ್ರೆ ನೀಡಿರಲಿಲ್ಲ. ಹೀಗಾಗಿ ಈ ವರ್ಷ 15 ಸಾವಿರಕ್ಕಿಂತಲೂ ಹೆಚ್ಚು ಜನ ಬಂದು ಮಾತ್ರೆ ಸೇವಿಸಿದರು.

ಬೆಳಿಗ್ಗೆ 11 ಗಂಟೆಯಿಂದಲೇ ಮಾತ್ರೆ ನೀಡಲಾಯಿತು. ಸಂಜೆ 6.18ಕ್ಕೆ ಮೃಗಶಿರ ಮಳೆ ಕೂಡುವ ಸಮಯದಲ್ಲಿ ಮಾತ್ರೆ ಸೇವಿಸುವಂತೆ ಗಂಟೆ ಬಾರಿಸುವ ಮೂಲಕ ಹೇಳಲಾಯಿತು. ಪ್ರತಿವರ್ಷವೂ ಇಲ್ಲಿ ಮಾತ್ರೆ ಪಡೆಯಲು ಸಾವಿರಾರು ಜನ ಬರುತ್ತಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ಗೋವಾ, ದೆಹಲಿ ಮತ್ತು ಕೇರಳ ರಾಜ್ಯಗಳಿಂದಲೂ ಜನ ಬೆಳಿಗ್ಗೆಯಿಂದಲೇ ಬಂದು ಕಾದು ಕುಳಿತಿದ್ದರು. ಇವರಿಗೆಲ್ಲಾ ರಾಯಚೂರು ಶಿವಯ್ಯ ಶೆಟ್ಟಿ ಕುಟುಂಬದವರು ಉಚಿತ ಊಟದ ವ್ಯವಸ್ಥೆ ಮಾಡಿದ್ದರು.

ಅಶೋಕರಾವ್ ಕುಲಕರ್ಣಿ ‘ಪ್ರಜಾವಾಣಿ‘ ಜೊತೆ ಮಾತನಾಡಿ ’ನನ್ನ ತಂದೆ ಕಾಲದಿಂದಲೂ ಮಾತ್ರೆ ನೀಡಲಾಗುತ್ತಿದೆ. ಮೃಗಶಿರ ಮಳೆ ಕೂಡುವ ಸಮಯದಲ್ಲಿಯೇ ಮಾತ್ರೆ ಸೇವಿಸಬೇಕು. ಆರು ತಿಂಗಳ ತನಕ ಒಂದಷ್ಟು ಪಥ್ಯ ಮಾಡಬೇಕು. ಆಗ ಅಸ್ತಮಾ ಪೂರ್ಣವಾಗಿ ಗುಣಮುಖವಾಗುತ್ತದೆ. ಕೋವಿಡ್‌ ಪೂರ್ವದ ವರ್ಷಗಳಿಗೆ ನೋಡಿದರೆ ಈ ಬಾರಿ ಜನ ಕಡಿಮೆಯೇ. ಮೊದಲು ಕನಿಷ್ಠ 30ರಿಂದ 35 ಸಾವಿರ ಜನ ಸೇರುತ್ತಿದ್ದರು. ಈ ವರ್ಷವೂ ಅಷ್ಟೇ ಸಂಖ್ಯೆಯ ಜನ ಬರಬಹುದು ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದೆ‘ ಎಂದರು.

ಕೊಪ್ಪಳದಲ್ಲಿ ವಿತರಣೆ: ಮೃಗಶಿರಾ ಮಳೆ ಪ್ರಾರಂಭದಿಂದ ವಾತಾವರಣದಲ್ಲಾಗುವ ಬದಲಾವಣೆ ಸಂದರ್ಭದಲ್ಲಿ ಆರೋಗ್ಯದಲ್ಲಿ ಉಂಟಾಗುವ ಏರು-ಪೇರು ಸಮತೋಲನ ಕಾಪಾಸಿಕೊಳ್ಳಲು ಇಂಗು ಮತ್ತು ಹಳೆ ಬೆಲ್ಲ ಸೇರಿಸಿ ತಯಾರಿಸಿದ ಗುಳಿಗೆಯನ್ನು ಆಯುರ್ವೇದ ಅಂಗಡಿ ಮಾಲೀಕ ಸೋಮಶೇಖರ ಯಮನಪ್ಪ ಹೂದ್ಲೂರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT