ಮುನಿರಾಬಾದ್: ಸಮೀಪದ ಕಂಪಸಾಗರ ಗ್ರಾಮದಲ್ಲಿರುವ ಭ್ರಮರಾಂಬಾದೇವಿ, ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ 8ನೇ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳು ನಡೆದವು.
ಬೆಳಿಗ್ಗೆ ದೇವಸ್ಥಾನದಲ್ಲಿ ರುದ್ರಾಭಿಷೇಕ, ಅಲಂಕಾರ, ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯಿತು. ಮಧ್ಯಾಹ್ನ ಸೋಮಯ್ಯ ಸ್ವಾಮಿ ಹಿರೇಮಠ ಮತ್ತು ಶಿವಯ್ಯ ಸ್ವಾಮಿ ಹಿರೇಮಠ ಅವರ ನೇತೃತ್ವದಲ್ಲಿ 4 ಜೋಡಿ ವಧು–ವರರು ಸತಿಪತಿಗಳಾದರು.
ಸಾನ್ನಿಧ್ಯ ವಹಿಸಿದ್ದ ಡಿ.ಅಂತಪುರ ಶ್ರೀಶೈಲ ಶಾಖಾಮಠದ ಕುಮಾರ ಪಂಡಿತಾರಾಧ್ಯ ಸ್ವಾಮೀಜಿ ಆಶೀರ್ವಚನ ನೀಡಿ, ‘ಶ್ರೀಮಠದ ನಾಗಯ್ಯ ಸ್ವಾಮೀಜಿ ಅವರು ದಾನಿಗಳ ಸಹಕಾರದಿಂದ ನಾಲ್ಕು ಜೋಡಿ ಬಡವರ ಮದುವೆ ಮಾಡಿದ್ದು ಶ್ಲಾಘನೀಯ’ ಎಂದರು.
ಅಧ್ಯಕ್ಷತೆ ವಹಿಸಿದ್ದ ನಾಗಯ್ಯ ಸ್ವಾಮೀಜಿ ಮಾತನಾಡಿ, ‘ಭಕ್ತರು ನೂತನ ದೇವಸ್ಥಾನ ನಿರ್ಮಿಸುವ ಸಂಕಲ್ಪ ಮಾಡಿದ್ದು, ದಾನಿಗಳ ಸಹಕಾರದೊಂದಿಗೆ ಹೊಸ ರೂಪದಲ್ಲಿ ಕಲ್ಲಿನ ಕಟ್ಟಡ ಮತ್ತು ಕಲ್ಯಾಣ ಮಂಟಪ ನಿರ್ಮಾಣವಾಗಲಿದೆ’ ಎಂದರು.
ಮೈನಳ್ಳಿ ಮಠದ ಸಿದ್ದೇಶ್ವರ ಶಿವಾಚಾರ್ಯರು, ನಗರಗಡ್ಡಿ ಮಠದ ಶಾಂತಲಿಂಗೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು.