ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಿ

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್‌ ಸುರಳ್ಕರ್‌ ಸೂಚನೆ
Last Updated 18 ಜನವರಿ 2021, 2:14 IST
ಅಕ್ಷರ ಗಾತ್ರ

ಕೊಪ್ಪಳ: ‘ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವ್ಯವಸ್ಥಿತ ತಯಾರಿ ಮಾಡಿಕೊಂಡು, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಬೇಕು’ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.

‘ಗಣರಾಜ್ಯೋತ್ಸವದ ದಿನ ಬೆಳಿಗ್ಗೆ 8 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಹಾಗೂ ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಯಲಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣದ ನಂತರ ನಡೆಯುವ ಪಥಸಂಚಲನ ಹಾಗೂ ಗೌರವ ವಂದನೆ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ಪಥಸಂಚಲನ ತಂಡಗಳು ಅಗತ್ಯ ತಾಲೀಮು ನಡೆಸಬೇಕು’ ಎಂದು ಸಲಹೆ ನೀಡಿದರು.

‘ಪಥಸಂಚಲನದಲ್ಲಿ ಭಾಗವಹಿಸುವ ತಂಡಗಳಿಗೆ ಪೊಲೀಸ್ ಇಲಾಖೆಯವರು ತರಬೇತಿ ನೀಡಬೇಕು. ಶಾಲಾ-ಕಾಲೇಜು ಮಕ್ಕಳಿಗೆ ವಿಶೇಷ ಆಸಕ್ತಿ ವಹಿಸಿ ತರಬೇತಿ ನೀಡಬೇಕು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಅವರು ಸೂಚಿಸಿದರು. ‘ಕೋವಿಡ್ ಮಾರ್ಗಸೂಚಿ ಪಾಲಿಸಬೇಕು. ಅನಾನುಕೂಲವಾಗದಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಕಾರ್ಯಕ್ರಮದ ದಿನ ಸಾರ್ವಜನಿಕರು, ಅತಿಥಿಗಳು ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆಯವರು ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಒದಗಿಸಬೇಕು ಹಾಗೂ ಆಂಬುಲೆನ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ನಿಯೋಜಿಸಬೇಕು’ ಎಂದರು.

ನಗರಸಭೆಯಿಂದ ನಗರದ ಪ್ರಮುಖ ರಸ್ತೆ ಹಾಗೂ ಜಿಲ್ಲಾ ಕ್ರೀಡಾಂಗಣದ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ನಿರ್ಮಿತಿ ಕೇಂದ್ರದಿಂದ ಕ್ರೀಡಾಂಗಣದಲ್ಲಿ ಮೊಬೈಲ್ ಶೌಚಾಲಯಗಳನ್ನು ಒದಗಿಸಬೇಕು. ಕಾರ್ಯಕ್ರಮದ ವೇದಿಕೆಯಲ್ಲಿ ಹೂವಿನ ಅಲಂಕಾರವನ್ನು ತೋಟಗಾರಿಕೆ ಇಲಾಖೆಯಿಂದ ನಿರ್ವಹಿಸಬೇಕು ಎಂದು ಅವರು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್-19 ಕಾರಣದಿಂದ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಜಿಲ್ಲಾ ಕ್ರೀಡಾಂಗಣದಲ್ಲಿ ಸಾಮಾಜಿಕ ಸಂದೇಶವುಳ್ಳ ಕಿರು ನಾಟಕಗಳನ್ನು ವಿದ್ಯಾರ್ಥಿಗಳಿಂದ ಮಾಡಿಸಬಹುದು. ಸಂವಿಧಾನ, ಕೋವಿಡ್-19 ಲಸಿಕೆ ಅಭಿಯಾನ, ಕೃಷಿ ಸಂಜೀವಿನಿ ವಾಹನಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೌಷ್ಟಿಕ ಆಹಾರದ (ಮೊರಿಂಗಾ ಪೌಡರ್) ಕುರಿತು ಸ್ತಬ್ಧಚಿತ್ರಗಳನ್ನು ನಿರ್ಮಿಸಿ ಪ್ರದರ್ಶಿಸಬೇಕು ಎಂದರು.

ಎಲ್ಲ ಇಲಾಖೆಗಳನ್ನು ಒಳಗೊಂಡು ಸಮಿತಿಗಳನ್ನು ರಚಿಸಲಾಗಿದೆ. ಅದರಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತಮಗೆ ನಿಯೋಜಿಸಿದ ಕರ್ತವ್ಯವನ್ನು ಲೋಪವಿಲ್ಲದಂತೆ ನಿರ್ವಹಿಸಬೇಕು ಎಂದು ಅವರು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಶರಣಬಸವರಾಜ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ ಹಾಗೂ ತಹಶೀಲ್ದಾರ್ ಜೆ.ಬಿ.ಮಜ್ಜಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT