ಕೊಪ್ಪಳ: ‘ಅಧಿಕಾರಿಗಳ ಕೋರಿಕೆ ಮೇರೆಗೆ ನನ್ನ ಕ್ಷೇತ್ರ ಮಾತ್ರವಲ್ಲದೇ ಬೇರೆ ಕ್ಷೇತ್ರಗಳ ಅಧಿಕಾರಿಗಳ ವರ್ಗಾವಣೆಗೂ ಶಿಫಾರಸು ಪತ್ರ ಕೊಟ್ಟಿದ್ದೇನೆ. ಇದರಲ್ಲಿ ತಪ್ಪೇನಿದೆ’ ಎಂದು ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಶಾಸಕರೂ ಆದ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಪ್ರಶ್ನಿಸಿದರು.
ಇಲ್ಲಿಗೆ ಸಮೀಪದ ಗಿಣಿಗೇರ ಏರ್‌ಸ್ಕ್ರಿಪ್‌ನಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ ’ಯಾರಿಗೇ ಶಿಫಾರಸು ಪತ್ರ ಕೊಟ್ಟರೂ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಸೂಚಿಸುತ್ತೇನೆ. ವರ್ಗಾವಣೆಗೆ ಶಿಫಾರಸು ಪತ್ರ ಕೊಡುವ ವಿಚಾರದಲ್ಲಿ ನನ್ನ ತಪ್ಪು ಮಾತ್ರವಲ್ಲದೇ ಸಾರ್ವಜನಿಕರದ್ದು ಹಾಗೂ ನೌಕರರ ತಪ್ಪಿನ ಪಾಲೂ ಇದೆ. ಇದೆಲ್ಲವೂ ಬದಲಾಗಲು ಮೊದಲು ಶಿಫಾರಸು ಪತ್ರ ಕೊಡುವವರು ಹಾಗೂ ತೆಗೆದುಕೊಳ್ಳುವವರು ಇಬ್ಬರೂ ಸರಿ ಹೋಗಬೇಕು. ಅನೇಕ ಮಾಧ್ಯಮದವರಿಗೂ ಶಿಫಾರಸು ಪತ್ರ ಕೊಟ್ಟಿದ್ದೇನೆ’ ಎಂದರು.
‘ಮೂಡಾ ಪ್ರಕರಣದಲ್ಲಿ ಎಲ್ಲವೂ ಕಾನೂನು ಪ್ರಕಾರವೇ ನಡೆದಿದ್ದು ಮುಖ್ಯಮಂತ್ರಿ ಹಾಗೂ ಅವರ ಕುಟುಂಬದವರು ತಪ್ಪಿತಸ್ಥರಾಗಲು ಸಾಧ್ಯವೇ ಇಲ್ಲ. ಈ ವಿಷಯ ಚರ್ಚೆಯೇ ಅನವಶ್ಯಕ’ ಎಂದು ಹೇಳಿದರು.