ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾವರಗೇರಾ: ಆಸ್ಪತ್ರೆ ಅವ್ಯವಸ್ಥೆ ಕಂಡು ಕೆಂಡಾಮಂಡಲರಾದ ಶಾಸಕ ಅಮರೇಗೌಡ

ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಮರೇಗೌಡ ಪಾಟೀಲ್ ಭೇಟಿ
Last Updated 21 ಮೇ 2022, 4:12 IST
ಅಕ್ಷರ ಗಾತ್ರ

ತಾವರಗೇರಾ: ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ಅವ್ಯವಸ್ಥೆಯನ್ನು ಕಂಡು ಕೆಂಡಾಮಂಡಲವಾದ ಘಟನೆ ಗುರುವಾರ ನಡೆಯಿತು.

ಶಾಸಕರು ಸಮುದಾಯ ಆರೋಗ್ಯ ಕೇಂದ್ರದ ವಾರ್ಡ್‌ಗಳಿಗೆ ದಿಢೀರ್ ಭೇಟಿ ನೀಡಿದಾಗ ರೋಗಿಗಳು ಬೆಡ್ ಶೀಟ್ ಇಲ್ಲದೆ ಚಿಕಿತ್ಸೆ ಪಡೆಯುತ್ತಿರುವುದು ಮತ್ತು ಶೌಚಾಲಯಕ್ಕೆ ಬೀಗ ಹಾಕಿದ್ದನ್ನು ಕಂಡು ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿ ಮತ್ತು ಆಡಳಿತಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ವೈದ್ಯಾಧಿಕಾರಿಗಳನ್ನು ವಿಚಾರಿಸಿದಾಗ ಸ್ವಚ್ಛತೆ ಮಾಡಲು ಕೊಟ್ಟಿದ್ದೇವೆ ಕೂಡಲೇ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.

ನಂತರ ಆಸ್ಪತ್ರೆ ಒಳಗೆ ಸುತ್ತಾಡಿದ ಶಾಸಕರು ಮಹಿಳಾ ಮತ್ತು ಪುರುಷರ ಚಿಕಿತ್ಸಾ ವಾರ್ಡ್‌ಗಳ ಶೌಚಾಲಯಗಳಿಗೆ ಬೀಗ ಹಾಕಿರುವುದು, ಚಿಕಿತ್ಸೆಗೆ ಬಂದ ರೋಗಿಗಳು ಬೆಡ್ ಶೀಟ್ ಇಲ್ಲದೆ ಮಲಗಿರುವುದು, ಎಲ್ಲೆಂದರಲ್ಲಿ ಕಸ, ಗುಟಕಾ ತಿಂದು ಉಗುಳಿರುವುದು, ವಿಶೇಷ ತಪಾಸಣೆ ಕೊಠಡಿಯ ಸುಸಜ್ಜಿತ ಯಂತ್ರಗಳು ದೂಳು ತುಂಬಿರುವುದನ್ನು ಕಂಡು ಶಾಸಕರು ಕೋಪಗೊಂಡರು.

ಚಿಕಿತ್ಸೆಗೆ ಬರುವ ರೋಗಿಗಳಿಗೆ ಸ್ವಚ್ಛ ವಾತಾವರಣ ಮತ್ತು ಸುವ್ಯವಸ್ಥಿತ ಚಿಕಿತ್ಸೆ ಇರಬೇಕು ಸ್ಥಳದಲ್ಲಿದ್ದ ಪ.ಪಂ. ಮುಖ್ಯಾಧಿಕಾರಿ ಮತ್ತು ಆಸ್ಪತ್ರೆ ಆಡಳಿತಾಧಿಕಾರಿಗಳಿಗೆ ಸೂಚಿಸಿದರು.

‘ಸ್ಥಳೀಯ ಆಡಳಿತಾಧಿಕಾರಿಗಳ ನಿರ್ಲಕ್ಷ್ಯದಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸುಸಜ್ಜಿತ ಶೌಚಾಲಯ ಕೊರತೆ ಇದೆ. ವಿದ್ಯುತ್ ಕೊರತೆ ಇದ್ದಾಗ ಜನರೇಟರ್ ಬಳಕೆ ಇಲ್ಲ, ಸಿಬ್ಬಂದಿ ರೋಗಿಗಳಿಗೆ ಸ್ಪಂದನೆ ಮಾಡುತ್ತಿಲ್ಲ. ಕೆಲವು ಸಿಬ್ಬಂದಿ ನಿರ್ಲಕ್ಷ್ಯದಿಂದ ಚಿಕಿತ್ಸೆ ನೀಡುತ್ತಿದ್ದಾರೆ. ಗರ್ಭಿಣಿಯರು, ಬಾಣಂತಿಯರು ಮೂತ್ರ ವಿಸರ್ಜನೆ ಮತ್ತು ಶೌಚಾಲಯಕ್ಕೆ ವಾರ್ಡ್ ಬಿಟ್ಟು ಹೊರಗೆ ಹೋಗಬೇಕಿದೆ’ ಎಂದು ರೋಗಿಯೊಬ್ಬರು ಆರೋಪಿಸಿದರು.

‘ಕಳೆದ 3 -4 ವರ್ಷದಿಂದ ದೂರುಗಳು ಬಂದರು ಸಹ ವೈದ್ಯರು ವರ್ಗಾವಣೆ ಆಗುತ್ತಿಲ್ಲ. ಶಾಸಕ ಅಮರೇಗೌಡ ಪಾಟೀಲ್ ಅವರು ಸ್ಥಳೀಯ ನಿವಾಸಿಯಾದ ವೈದ್ಯಾಧಿಕಾರಿಗಳ ಮೇಲೆ ಅನುಕಂಪವಿದ್ದು, ಶಾಸಕರು ಯಾವ ತುರ್ತು ಕ್ರಮಕ್ಕೂ ಮುಂದಾಗುವುದಿಲ್ಲ, ಆಸ್ಪತ್ರೆಗೆ ಸುಮ್ಮನೆ ನೆಪ ಮಾತ್ರಕ್ಕೆ ಭೇಟಿ ನೀಡಿದ್ದಾರೆ’ ಎಂದು ಸ್ಥಳೀಯರೊಬ್ಬರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT