ರೈತರ ಸಾಲಮನ್ನಾ ಪ್ರಶ್ನೆಗೆ ಪ್ರಧಾನಿ ಮೌನ: ಡಾ.ಪುಷ್ಪಾ ಟೀಕೆ

7

ರೈತರ ಸಾಲಮನ್ನಾ ಪ್ರಶ್ನೆಗೆ ಪ್ರಧಾನಿ ಮೌನ: ಡಾ.ಪುಷ್ಪಾ ಟೀಕೆ

Published:
Updated:
Prajavani

ಕೊಪ್ಪಳ: ದೇಶದ ಸಂಪತ್ತನ್ನು ಕೊಳ್ಳೆ ಹೊಡೆದ ನೀರವ್ ಮೋದಿ, ಲಲಿತ ಮೋದಿಯವರಿಗೆ ಪ್ರಧಾನಿಗಳ ಕುಮ್ಮಕ್ಕಿದೆ. ಉದ್ಯಮಿಗಳ ಸಾಲ ಮನ್ನಾ ಮಾಡುವ ಮೋದಿಯವರು ರೈತರ ಸಾಲಮನ್ನಾ ಮಾಡಿ ಎಂದರೆ ಮೌನವಾಗುತ್ತಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ ಹೇಳಿದರು.  

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಮಹಿಳಾ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಬುಧವಾರ ಮಾತನಾಡಿದರು.

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದ ಪ್ರಗತಿ ಕುಂಠಿತವಾಗಿದ್ದು, ಸಾಮಾನ್ಯ ಜನರಿಗೆ ಮಾರಕವಾಗುವ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ, ನೋಟು ಅಮಾನ್ಯೀಕರಣದಂತಹ ಯೋಜನೆ ಜಾರಿಗೊಳಿಸಿದ್ದಾರೆ. ಇಂತಹ ಕೆಟ್ಟ ನಿರ್ಧಾರದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಮಾಡಬಾರದ ಕೆಲಸ ಮಾಡಿ, ಸುಪ್ರಿಂ ಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಇವರಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಬಿಜೆಪಿ ದುರಾಡಳಿತವನ್ನು ಜನರಿಗೆ ತಲುಪಿಸಲು ಮುಂದಿನ ತಿಂಗಳಿನಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಹಿಂದಿನಿಂದಲೂ ಎಲ್ಲ ರಂಗಗಳಲ್ಲಿ ಮಹಿಳಾ ಮೀಸಲಾತಿಗೆ ಹೋರಾಟ ನಡೆಯುತ್ತಿವೆ. ಇದಕ್ಕೆ ಪಕ್ಷಾತೀತ ಹೋರಾಟ ಅಗತ್ಯ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹಿಳೆರಿಗೆ ಶೇ. 33ರಷ್ಟು ಮೀಸಲಾತಿ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದ್ದ ಪ್ರಧಾನಿ ಮೋದಿ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಮೋದಿಗೆ ತಕ್ಕ ಪಾಠ ಕಲಿಸುವ ಮೂಲಕ ಮಹಿಳೆಯರ ಶಕ್ತಿ ತೋರಿಸಬೇಕಿದೆ. ಆದರೆ ಕಾಂಗ್ರೆಸ್‌ ಮಹಿಳಾ ಸಮಾನತೆಗೆ ಹೋರಾಟ ನಡೆಸಿದ್ದು, ವಿಧಾನಸಭೆ ಚುನಾವಣೆಯಲ್ಲಿ 12 ಮಹಿಳೆಯರಿಗೆ ಟಿಕೆಟ್ ನೀಡಿದೆ ಎಂದರು.

ರಾಜ್ಯ ಕಾರ್ಯದರ್ಶಿ ಸ್ವಪ್ನಾ ಹರೀಶ್, ಉಪಾಧ್ಯಕ್ಷೆ ದೇವಕಿ ಯೋಗಾನಂದ, ಜಿಲ್ಲಾಧ್ಯಕ್ಷೆ ಇಂದಿರಾ ಬಾವಿಕಟ್ಟಿ, ಜಿಪಂ ಮಾಜಿ ಅಧ್ಯಕ್ಷೆ ಮಾಲತಿ ನಾಯಕ, ಮುಖಂಡರಾದ ಕಿಶೋರಿ ಬೂದನೂರು, ಭಾರತಿ ನಿರಗೇರಿ, ರಜಿಯಾ ಬೇಗಂ, ನಗರಸಭೆ ಸದಸ್ಯ ಅಕ್ಬರ್ ಪಾಷಾ ಪಲ್ಟನ್, ಕಾನೂನು ಘಟಕದ ಗುರುಬಸವರಾಜ ಹಳ್ಳಿಕೇರಿ ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !