ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಆಯ್ಕೆಯಾಗದಿದ್ದರೂ ಖಾತೆಗೆ ಹಣ ಜಮೆ!

ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ಅಧಿಕಾರಿಗಳ ಎಡವಟ್ಟು, ನೈಜ ಫಲಾನುಭವಿಗಳಿಗೆ ಸಂಕಷ್ಟ
Published 2 ಏಪ್ರಿಲ್ 2024, 4:46 IST
Last Updated 2 ಏಪ್ರಿಲ್ 2024, 4:46 IST
ಅಕ್ಷರ ಗಾತ್ರ

ಕೊಪ್ಪಳ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಮೂಲಕ ನೀಡಲಾಗುವ ನೇರ ಸಾಲ ಮತ್ತು ಉದ್ಯಮಶೀಲತೆ ಯೋಜನೆಯಲ್ಲಿ 2021–22ನೇ ಸಾಲಿನಲ್ಲಿ ಅವ್ಯವಹಾರವಾಗಿರುವ ಆರೋಪ ಕೇಳಿಬಂದಿದೆ.

ಆ ಸಾಲಿನಲ್ಲಿ ನೇರ ಸಾಲ ಯೋಜನೆಯಡಿ ಒಟ್ಟು 313 ಜನ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ 256 ಜನರಿಗೆ ಆರ್‌ಟಿಜಿಎಸ್‌ ಮೂಲಕ ಹಣ ಪಾವತಿಸಲಾಗಿದೆ. ಆಯ್ಕೆಯಾಗದಿರುವ 57 ಜನ ‘ಅನರ್ಹರಿ’ಗೂ ಹಣ ಪಾವತಿಯಾಗಿರುವುದು ಗೊತ್ತಾಗಿದ್ದು, ಈ ಕುರಿತು ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ವಿವಿಧ ಯೋಜನೆಗಳಡಿ ಆಯ್ಕೆಯಾದ ಕೆಲ ಅರ್ಹ ಫಲಾನುಭವಿಗಳ ಖಾತೆಗೆ ಇದುವರೆಗೂ ಹಣ ಜಮೆಯಾಗಿಲ್ಲ. ಇಂಥ ಅನೇಕ ಪ್ರಕರಣಗಳಲ್ಲಿ ಅದೇ ವರ್ಷ ಅಲೆಮಾರಿ ಸಮಿತಿಯಲ್ಲಿ ಉದ್ಯಮಶೀಲತೆ ಯೋಜನೆಯಡಿ ಆಯ್ಕೆಯಾದ ದುರುಗವ್ವ ದುರುಗಪ್ಪ ಸಿಂಧೋಳಿ ಎಂಬ ಮಹಿಳೆಯ ಪ್ರಕರಣವೂ ಒಂದು. ದುರುಗವ್ವ ಅವರಿಗೆ ಚೆಕ್‌ ಬರೆದಿದ್ದರೂ ನಿಗಮದಿಂದ ಹಣ ಬಿಡುಗಡೆಯಾಗಿಲ್ಲ! ನೇರ ಸಾಲ ಯೋಜನೆಯಡಿ 57 ಮತ್ತು ಉದ್ಯಮಶೀಲತೆ ಯೋಜನೆಯಡಿ ಯೋಜನೆಯಡಿ 20 ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಿಲ್ಲ.

ಈ ಕುರಿತು ಅಂಬೇಡ್ಕರ್‌ ನಿಗಮದ ಜಿಲ್ಲಾ ವ್ಯವಸ್ಥಾಪಕರು ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದು ‘ಆಯ್ಕೆಪಟ್ಟಿಯಲ್ಲಿರುವ ಇನ್ನೂ ಕೆಲ ಫಲಾನುಭವಿಗಳಿಗೆ ಹಣ ಸಂದಾಯವಾಗದಿದ್ದರೂ ಅಲೆಮಾರಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಲ್ಲಿ ಹಣವಿಲ್ಲ, ಆಯ್ಕೆಪಟ್ಟಿಯಲ್ಲಿ ಇರದ ಕೆಲ ಫಲಾನುಭವಿಗಳಿಗೆ ಬ್ಯಾಂಕ್‌ ಮೂಲಕ ಆರ್‌ಟಿಜಿಎಸ್‌ ಮಾಡಲು ಆದೇಶ ಮಾಡಲಾಗಿದೆ’ ಎನ್ನುವ ಅಂಶಗಳನ್ನು ಉಲ್ಲೇಖಿಸಿದ್ದಾರೆ. 

‘ಅಲೆಮಾರಿಗಳು ಊರೂರು ಅಲೆದಾಡುವುದನ್ನು ತಪ್ಪಿಸಲು ಹಲವು ಯೋಜನೆಗಳನ್ನು ರೂಪಿಸಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆಯ್ಕೆಯಾದ ಫಲಾನುಭವಿಗೆ ಮಾತ್ರ ಹಣ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2021–22ನೇ ಸಾಲಿನಲ್ಲಿ ದುರುಗವ್ವ ಉದ್ಯಮಶೀಲತೆ ಯೋಜನೆಯಲ್ಲಿ ಆಯ್ಕೆಯಾಗಿದ್ದರೂ ಅಧಿಕಾರಿಗಳು ಹಣ ಬಿಡುಗಡೆ ಮಾಡದೇ ತಮಗೆ ಬೇಕಾದವರಿಗೆ ನೀಡಿದ್ದಾರೆ’ ಎಂದು ಜಿಲ್ಲಾ ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ವಿಭೂತಿ ಅವರರು ನಿಗಮದ ಮುಖ್ಯಸ್ಥರು, ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಫೆಬ್ರುವರಿಯಲ್ಲಿ ನಡೆಸಿದ್ದ ವಿಶೇಷ ಜನಸ್ಪಂದನ ಸಭೆಯಲ್ಲಿಯೂ ಮನವಿ ಸಲ್ಲಿಸಿದ್ದಾರೆ. ಸರ್ಕಾರದ ಯೋಜನೆ ಪಡೆದುಕೊಳ್ಳಲು ದುರುಗವ್ವ ಹಾಗೂ ಅವರ ಕುಟುಂಬದವರು ನಿರಂತರ ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

‘ಹಿಂದೆ ಇಲಾಖೆಯಲ್ಲಿದ್ದ ಅಧಿಕಾರಿ ನೈಜ ಫಲಾನುಭವಿಗೆ ಹಣ ನೀಡಿಲ್ಲ. ಇದರಿಂದ ನಿತ್ಯ ಕಚೇರಿಗೆ ಅಲೆದಾಡುವ ಸ್ಥಿತಿ ಎದುರಾಗಿದೆ. ಇದು ಹೀಗೆಯೇ ಮುಂದುವರಿದರೆ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಬಸವರಾಜ ವಿಭೂತಿ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT