ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಘಟನಾತ್ಮಕವಾಗಿ ಪಕ್ಷ ಬಲಪಡಿಸಿ: ನಿಖಿಲ್ ಕುಮಾರಸ್ವಾಮಿ

ಜೆಡಿಎಸ್‌ ಜಿಲ್ಲಾ ಘಟಕದ ಸದಸ್ಯತ್ವ ನೋಂದಣಿ, ಬೂತ್‌ ಸಮಿತಿ ಅಭಿಯಾನ; ನಿಖಿಲ್‌ ಹೇಳಿಕೆ
Published 5 ಸೆಪ್ಟೆಂಬರ್ 2024, 4:59 IST
Last Updated 5 ಸೆಪ್ಟೆಂಬರ್ 2024, 4:59 IST
ಅಕ್ಷರ ಗಾತ್ರ

ಕೊಪ್ಪಳ: ‘ಚುನಾವಣೆ ಸಮಯದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಆ ಸವಾಲು ಎದುರಿಸುತ್ತೇವೆ. ಪಕ್ಷದ ಸಂಘಟನೆ ಹಾಗೂ ಶಕ್ತಿ ಹೆಚ್ಚಿಸಿಕೊಳ್ಳಲು ಆಂತರಿಕವಾಗಿ ಸದಸ್ಯತ್ವ ಅಭಿಯಾನ ಚುರುಕುಗೊಳಿಸಬೇಕು. ಪಕ್ಷನನ್ನು ಸಂಘಟನಾತ್ಮಕವಾಗಿ ಬಲಪಡಿಸಬೇಕು’ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಜೆಡಿಎಸ್‌ ಪಕ್ಷದ ಜಿಲ್ಲಾ ಘಟಕದ ಸದಸ್ಯತ್ವ ನೋಂದಣಿ ಹಾಗೂ ಬೂತ್‌ ಸಮಿತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಪಕ್ಷ ಬೇರುಮಟ್ಟದಿಂದ ಗಟ್ಟಿಯಾದರೆ ಮಾತ್ರ ಪ್ರಮುಖ ಎರಡು ರಾಜಕೀಯ ಪಕ್ಷಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಜೆಡಿಎಸ್‌ ಹೆಮ್ಮರವಾಗಿ ಬೆಳೆಯುತ್ತದೆ. ಎಲ್ಲ ಸಮುದಾಯಗಳ ಜನರನ್ನು ಒಳಗೊಂಡು ನೋಂದಣಿ ಮಾಡುವ ಪ‍್ರಕ್ರಿಯೆ ನಡೆಸಬೇಕು’ ಎಂದರು.      

‘ಪದವಿ ಪಡೆದ ಅನೇಕ ಯುವಕರಿದ್ದರೂ ಸರಿಯಾಗಿ ಉದ್ಯೋಗ ಸಿಗುತ್ತಿಲ್ಲ. ಉದ್ಯೋಗ ಲಭಿಸಿದರೂ ಭ್ರಷ್ಟಾಚಾರ, ವರ್ಗಾವಣೆ ದಂಧೆಯ ಹಾವಳಿ ವ್ಯಾಪಕವಾಗಿದೆ. ಪಿಎಸ್‌ಐ ಪರಶುರಾಮ್‌ ಸಾವು ಇದಕ್ಕೊಂದು ನಿದರ್ಶನ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ, ನೀರಿನ ಬೆಲೆ ಏರಿಕೆ ಹೀಗೆ ಪ್ರಮುಖ ವಿಷಯಗಳನ್ನು ಇಟ್ಟುಕೊಂಡು ಮೈಸೂರಿಗೆ ಪಾದಯಾತ್ರೆ ಮಾಡಿದ್ದೇವೆ. ಇದರ ಫಲಿತಾಂಶ ಇನ್ನು ಕೆಲ ದಿನಗಳಲ್ಲಿಯೇ ಬರಲಿದೆ‘ ಎಂದು ಹೇಳಿದರು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್ ಮಾತನಾಡಿ ‘ಭ್ರಷ್ಟ ಮಾರ್ಗದಿಂದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಮದ್ಯ ಬೆಲೆ ಏರಿಕೆ, ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ಐದು ಗ್ಯಾರಂಟಿಗಳನ್ನು ಕೊಟ್ಟ ಕಾಂಗ್ರೆಸ್ ಸರ್ಕಾರ ರೈತರ ಬದುಕಿಗೆ ಏನು ಗ್ಯಾರಂಟಿ ನೀಡಿದೆ’ ಎಂದು ಪ್ರಶ್ನಿಸಿದರು.

ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ವೆಂಕಟರಾವ್‌ ನಾಡಗೌಡ್ರ, ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು, ಪಕ್ಷದ ಯುವ ಘಟಕದ ಕಾರ್ಯಾಧ್ಯಕ್ಷ ರಾಜು ನಾಯಕ್, ಪಕ್ಷದ ರಾಜ್ಯ ಕಾರ್ಯದರ್ಶಿ ವೀರೇಶ ಮಹಾಂತಯ್ಯಮಠ, ಬಳ್ಳಾರಿ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ, ವಿಜಯನಗರ ಜಿಲ್ಲಾಧ್ಯಕ್ಷ ಬಿ. ಕೊಟ್ರೇಶ್, ಕೊಪ್ಪಳ ತಾಲ್ಲೂಕು ಅಧ್ಯಕ್ಷ ಯಮನೂರಪ್ಪ ಕಟಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಬಲವರ್ಧನೆ ಮಾಡಬೇಕು. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 25 ಸಾವಿರ ಜನರನ್ನು ಸದಸ್ಯರನ್ನಾಗಿ ಮಾಡಬೇಕು.
ನೇಮಿರಾಜ್ ನಾಯ್ಕ್ ಶಾಸಕ
ಸದಸ್ಯತ್ವ ಅಭಿಯಾನ ಆರಂಭಿಸಲಾಗುತ್ತಿದ್ದು ಮೊಬೈಲ್‌ ಮೂಲಕವೇ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸದಸ್ಯರಾಗುವಂತೆ ನೋಡಿಕೊಳ್ಳಬೇಕು.
ಸುರೇಶ ಭೂಮರೆಡ್ಡಿ ಜೆಡಿಎಸ್‌ ಜಿಲ್ಲಾಧ್ಯಕ್ಷ

ಬದಲಾವಣೆಗೆ ರಾಜಕೀಯಕ್ಕೆ ಬಂದಿರುವೆ:

ಸಿವಿಸಿ ಕೇವಲ ಶಾಸಕನಾಗಬೇಕು ಎನ್ನುವ ಆಸೆಯಿಂದಾಗಿ ರಾಜಕಾರಣಕ್ಕೆ ಬಂದಿಲ್ಲ. ಕೊಪ್ಪಳದಲ್ಲಿ ಬದಲಾವಣೆ ತರಲು ರಾಜಕೀಯದಲ್ಲಿದ್ದೇನೆ ಎಂದು ಜೆಡಿಎಸ್‌ ರಾಜ್ಯ ಕೋರ್‌ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್‌ ಹೇಳಿದರು. ‘ಇಷ್ಟು ವರ್ಷಗಳ ರಾಜಕೀಯದಲ್ಲಿ ಕೊಪ್ಪಳ ಕೆಲವೇ ಕೆಲವರ ಸ್ವತ್ತಾಗಿದೆ. ಅವರಿಂದ ಕ್ಷೇತ್ರ ಬಿಡುಗಡೆಯಾಗುವ ತನಕ ವಿರಮಿಸುವುದಿಲ್ಲ. ರಾಜಕೀಯವಾಗಿ ಸಾಕಷ್ಟು ನೊಂದಿದ್ದೇನೆ. ಬೆಂದಿದ್ದೇನೆ. ಆದರೂ ವಿರಮಿಸಿದೇ ನಿರಂತರವಾಗಿ ಹೋರಾಟ ಮಾಡುತ್ತೇನೆ. ಕಾಂಗ್ರೆಸ್‌ ತೊಲಗಿಸಲು ಮೈತ್ರಿ ಅಗತ್ಯವಾಗಿದ್ದು ಕುಮಾರಸ್ವಾಮಿ ಮತ್ತೊಂದು ಬಾರಿ ಮುಖ್ಯಮಂತ್ರಿಯಾಗಬೇಕು’ ಎನ್ನುವ ಆಶಯ ವ್ಯಕ್ತಪಡಿಸಿದರು.

ಮುಂದಿನ ಸಿ.ಎಂ. ಎನ್ನಬೇಡಿ ಎಂದು ಸಂಜ್ಞೆ ಮಾಡಿದ ನಿಖಿಲ್‌

ಜೆಡಿಎಸ್ ಕಾರ್ಯಾಧ್ಯಕ್ಷ ಆಲ್ಕೋಡು ಹನುಮಂತಪ್ಪ ಮಾತನಾಡಿ ‘ರಾಜ್ಯದಲ್ಲಿ ಬದಲಾವಣೆಗೆ ಮುನ್ನುಡಿ ಬರೆದಿದ್ದೇ ಜೆಡಿಎಸ್‌. ನಿಖಿಲ್‌ ಮುಖ್ಯಮಂತ್ರಿಯಾಗುತ್ತಾರೆ ಕುಮಾರಸ್ವಾಮಿ ಪ್ರಧಾನಿಯಾಗುತ್ತಾರೆ’ ಎಂದರು. ಅದಕ್ಕೆ ಸಂಜ್ಞೆ ಮೂಲಕ ನಿಖಿಲ್‌ ಆ ರೀತಿ ಹೇಳಬೇಡಿ ಎಂದು ಕೈ ತೋರಿಸಿದರು. ಆಗಲೂ ಮಾತು ಮುಂದುವರಿಸಿದ ಹನುಮಂತಪ್ಪ ಮುಂದೆ ಯಾವಾಗಲಾದರೂ ಈ ಬದಲಾವಣೆ ಆಗಲಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT