ಮಂಗಳವಾರ, ಜನವರಿ 18, 2022
16 °C

ಕಾಂಗ್ರೆಸ್‌ನವರ ಸರ್ಟಿಫಿಕೇಟ್ ನನಗೆ ಬೇಕಾಗಿಲ್ಲ: ಸಚಿವ ಹಾಲಪ್ಪ ಆಚಾರ್ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಕನೂರು: ಕೊಪ್ಪಳ ಏತ ನೀರಾವರಿ ಯೋಜನೆಗೆ ಬಿಜೆಪಿ ಸರ್ಕಾರ ಅನುದಾನ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆಯ ಶ್ರೇಯಸ್ಸು ನಮ್ಮ ಬಿಜೆಪಿಗೆ ಸಲ್ಲುತ್ತದೆ. ಕಾಂಗ್ರೆಸ್‌ ನೇತೃತ್ವದ ಸರ್ಕಾರ ನಯಾಪೈಸೆ ಅನುದಾನ ನೀಡಿಲ್ಲ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿಕೆಗೆ ಹೆಚ್ಚು ಮಹತ್ವ ಕೊಡಲ್ಲ. ಜನತೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ಸುಳ್ಳು ಹೇಳಲು ಹೊರಟಿದ್ದಾರೆ. ಈ ಹಿಂದೆ ಆಡಳಿತ ನಡೆಸುವಾಗ ಈ ಯೋಜನೆ ಬಗ್ಗೆ ಯಾಕೆ ಮಾತನಾಡಲಿಲ್ಲ. ಇದೀಗ ಯೋಜನೆ ಅಂತಿಮ ಹಂತಕ್ಕೆ ಬರುತ್ತಿದ್ದಂತೆ ಉಲ್ಟಾ ಹೊಡೆಯುವುದು ಶೋಭೆ ತರುವಂತದಲ್ಲ’ ಎಂದು ಹರಿಹಾಯ್ದರು.

‘ಕ್ಷೇತ್ರದ ಜನತೆಯ ಆಶೀರ್ವಾದದಿಂದ ಶಾಸಕನಾಗಿ, ಸಚಿವನಾಗಿ ನನಗೆ ವಹಿಸಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ. ಶೀಘ್ರದಲ್ಲಿ ಕೆರೆಗಳನ್ನು ತುಂಬಿಸಿ ಕೆಲಸ ಮಾಡಿ ತೋರಿಸುತ್ತೇನೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಒಂದು ರೂಪಾಯಿಯನ್ನೂ ನೀಡಿಲ್ಲ. ಬರೀ ಪ್ಲೆಕ್ಸ್‌ ಹಾಕಿಕೊಂಡು ಪುಕ್ಕಟೆ ಪ್ರಚಾರ ಪಡೆದುಕೊಂಡಿದ್ದನ್ನು ಜನತೆ ಮರೆತಿಲ್ಲ. ಹಿಂದಿನ ಆಡಳಿತದಲ್ಲಿ ಪ್ರವಾಸಿ ಮಂದಿರಗಳು ನಿರ್ಮಾಣಗೊಂಡಿವೆ. ಆ ಕೆಲಸವನ್ನು ಮಾಡಿಲ್ಲ ಎಂದು ಹೇಳಲು ಆಗುವುದಿಲ್ಲ. ಅವರು ಮಾಡಿರುವ ಮಹಾದೊಡ್ಡ ಕಾರ್ಯ ಅದಾಗಿದೆ’ ಎಂದರು.

‘ಆಡಳಿತದಲ್ಲಿ ಅನುಭವವಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ. ಜನರೇ ನನ್ನ ಆಡಳಿತಕ್ಕೆ ಸರ್ಟಿಫಿಕೇಟ್ ಕೊಡುತ್ತಾರೆ. ನಿಮ್ಮಂತಹವರಿಂದ ಸರ್ಟಿಫಿಕೇಟ್ ಪಡೆಯುವ ಉದ್ದೇಶ ನನಗಿಲ್ಲ. ಎಲ್ಲದಕ್ಕೂ ಜನತೆ ಉತ್ತರ ಕೊಡುತ್ತಾರೆ. ನನ್ನ ಅಭಿವೃದ್ದಿ ಕಾರ್ಯಗಳೇ ನನಗೆ ಶ್ರೀರಕ್ಷೆಯಾಗಲಿವೆ. ಶೀಘ್ರದಲ್ಲಿಯೇ ವಜ್ರಬಂಡಿಯಲ್ಲಿ ಬಹುಗ್ರಾಮ ಕುಡಿವ ನೀರಿನ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಚುನಾವಣೆ ನೀತಿ ಸಂಹಿತೆಯಿಂದ ಕೆಲ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲು ಸಾಧ್ಯವಾಗಿರಲಿಲ್ಲ, ಇದೀಗ ವೇಗ ಪಡೆಯಲಿವೆ’ ಎಂದರು.

ಶಿವಕುಮಾರ ನಾಗಲಾಪುರಮಠ, ರತನ ದೇಸಾಯಿ, ಶರಣಪ್ಪ ಈಳಿಗೇರ, ಪ್ರಕಾಶ ತಹಶೀಲ್ದಾರ್, ಶ್ರೀನಿವಾಸ ತಿಮ್ಮಾಪೂರ, ಕೊಟ್ರಪ್ಪ ತೋಟದ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.