ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಯಾರಿಗೂ ಇಲ್ಲ ಹ್ಯಾಟ್ರಿಕ್‌ ಗರಿ!

ವಿಭಿನ್ನ ಇತಿಹಾಸ ಹೊಂದಿರುವ ಕೊಪ್ಪಳ ಲೋಕಸಭಾ ಕ್ಷೇತ್ರ, ಸತತ ಎರಡು ಗೆಲುವೇ ಗರಿಷ್ಠ ಸಾಧನೆ
Published 3 ಏಪ್ರಿಲ್ 2024, 5:10 IST
Last Updated 3 ಏಪ್ರಿಲ್ 2024, 5:10 IST
ಅಕ್ಷರ ಗಾತ್ರ

ಕೊಪ್ಪಳ: ಒಂದೆಡೆ ಲೋಕಸಭಾ ಚುನಾವಣೆಯ ಪ್ರಚಾರ ಹಾಗೂ ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಚಟುವಟಿಕೆಗಳು ಆರಂಭವಾಗಿದ್ದರೆ ಇನ್ನೊಂದೆಡೆ ವಿಭಿನ್ನ ಇತಿಹಾಸ ಹೊಂದಿರುವ ಕೊಪ್ಪಳ ಲೋಕಸಭಾ ಕ್ಷೇತ್ರದ ಚರ್ಚೆಯೂ ನಡೆಯುತ್ತಿದೆ.

1952ರಲ್ಲಿ ನಡೆದ ಮೊದಲ ಚುನಾವಣೆಯಿಂದ ಹಿಡಿದು ಹಿಂದಿನ 2018ರ ಚುನಾವಣೆ ತನಕ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಸಂಗಣ್ಣ ಕರಡಿ ಸೇರಿ ನಾಲ್ಕು ಜನ ಸತತ ಎರಡು ಬಾರಿ ಗೆಲುವು ಪಡೆದಿದ್ದಾರೆ. ಆದರೆ, ಯಾರಿಗೂ ಹ್ಯಾಟ್ರಿಕ್ ಗೆಲುವು ಲಭಿಸಿಲ್ಲ.

ದೇಶ ಸ್ವಾತಂತ್ರ್ಯಗೊಂಡ ಆರಂಭದಲ್ಲಿ ಎಲ್ಲೆಡೆಯೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಪ್ರಭಾವ ವ್ಯಾಪಕವಾಗಿತ್ತು. ಅಂಥ ಸಂದರ್ಭದಲ್ಲಿಯೂ ಶಿವಮೂರ್ತಿ ಸ್ವಾಮಿ ಅಳವಂಡಿ ಅವರು ಪಕ್ಷೇತರರಾಗಿ ಕೊಪ್ಪಳ ಕ್ಷೇತ್ರದ ಮೊದಲ ಸಂಸದರಾದರು. 1957ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದರೂ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಂಗಣ್ಣ ಅಗಡಿ ಎದುರು ಪರಾಭವಗೊಂಡಿದ್ದರು.

ಈ ಕ್ಷೇತ್ರದಲ್ಲಿ ಸಿದ್ರಾಮೇಶ್ವರ ಸ್ವಾಮಿ ಅವರು 1971 ಮತ್ತು 1977ರ ಚುನಾವಣೆಗಳಲ್ಲಿ ಸತತ ಎರಡು ಬಾರಿ ಗೆಲುವು ಪಡೆದರಾದರೂ, ಮುಂದಿನ ಚುನಾವಣೆಯಲ್ಲಿ ಎಚ್‌.ಜಿ. ರಾಮುಲು ಸಂಸದರಾದರು. ರಾಮುಲು ಅವರು 1984ರಲ್ಲಿಯೂ ಸಂಸದರಾಗಿ ಆಯ್ಕೆಯಾಗಿದ್ದರಿಂದ ಹ್ಯಾಟ್ರಿಕ್‌ ಸಾಧನೆ ಮಾಡುವ ಅವಕಾಶ ಲಭಿಸಿತ್ತು. ಆದರೆ 1989ರಲ್ಲಿ ರಾಮುಲು ಸ್ಪರ್ಧಿಸಿ ಸೋತರು. ಆಗ ಜನತಾದಳದಿಂದ ಕಣಕ್ಕಿಳಿದಿದ್ದ ಬಸವರಾಜ ಪಾಟೀಲ ಅನ್ವರಿ ಸಂಸತ್‌ ಪ್ರವೇಶಿಸಿದ್ದರಿಂದ ರಾಮುಲು ಹ್ಯಾಟ್ರಿಕ್‌ ಆಸೆ ಈಡೇರಲಿಲ್ಲ.

ಅನ್ವರಿ 1989ರಲ್ಲಿ ಗೆದ್ದು ಸಂಸದರಾದ ಬಳಿಕ ಮುಂದಿನ 1991ರ ಚುನಾವಣೆಯಲ್ಲಿಯೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸಂಸದರಾದರು. ಇವರಿಗೆ ಸತತ ಮೂರನೇ ಬಾರಿ ಗೆಲ್ಲಲು ಅವಕಾಶವಿದ್ದರೂ ಸಾಧ್ಯವಾಗಲಿಲ್ಲ. ಮುಂದಿನ 1996ರ ಚುನಾವಣೆಯಲ್ಲಿ ಅನ್ವರಿ ಸೋಲು ಕಂಡರು. ಜನತಾದಳದಿಂದ ಸ್ಪರ್ಧೆ ಮಾಡಿದ್ದ ಬಸವರಾಜ ರಾಯರಡ್ಡಿ ಅದೇ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿದ್ದರು.

1998ರಲ್ಲಿ ಕಾಂಗ್ರೆಸ್‌ನಿಂದ ಎಚ್‌.ಜಿ. ರಾಮುಲು ಮತ್ತೆ ಸಂಸದರಾದರು. ರಾಜಕೀಯ ಅನಿಶ್ಚಿತೆತೆ ಕಾರಣದಿಂದಾಗಿ 1999ರಲ್ಲಿ ಮತ್ತೆ ನಡೆದ ಚುನಾವಣೆಯಲ್ಲಿ ರಾಮುಲು ಅವರೇ ಗೆದ್ದರು. ಆಗಲೂ ಅವರಿಗೆ ಹ್ಯಾಟ್ರಿಕ್‌ ಅವಕಾಶವಿತ್ತು. ಆದರೆ ಆಗ ಪಕ್ಷ ಕೆ. ವಿರೂಪಾಕ್ಷಪ್ಪ ಅವರಿಗೆ ಟಿಕೆಟ್‌ ನೀಡಿತ್ತು. 2004ರಿಂದ ನಡೆದ ಸತತ ಎರಡು ಚುನಾವಣೆಗಳಲ್ಲಿ ಕ್ರಮವಾಗಿ ಕೆ. ವಿರೂಪಾಕ್ಷಪ್ಪ ಮತ್ತು ಶಿವರಾಮಗೌಡ ಸಂಸದರಾದರು.

ಹಾಲಿ ಸಂಸದರಾಗಿರುವ ಸಂಗಣ್ಣ ಕರಡಿ ಅವರು 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಸತತವಾಗಿ ಗೆಲುವು ಸಾಧಿಸಿದ್ದು, ಈ ಬಾರಿ ಹ್ಯಾಟ್ರಿಕ್‌ ಗೆಲುವಿಗೆ ಅವಕಾಶವಿತ್ತು. ಆದರೆ, ಪಕ್ಷ ಸಂಗಣ್ಣ ಅವರ ಬದಲು ಡಾ. ಬಸವರಾಜ ಕ್ಯಾವಟರ್‌ ಅವರಿಗೆ ಟಿಕೆಟ್ ನೀಡಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ‘ಹ್ಯಾಟ್ರಿಕ್‌ ಸಂಸದ’ ಎನ್ನುವ ಸಾಧನೆಯ ಗರಿ ಎಲ್ಲರಿಗೂ ಮರೀಚಿಕೆಯಾಗಿದೆ.

ಸಂಗಣ್ಣ ಕರಡಿ
ಸಂಗಣ್ಣ ಕರಡಿ
ಸಿದ್ರಾಮೇಶ್ವರ ಸ್ವಾಮಿ
ಸಿದ್ರಾಮೇಶ್ವರ ಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT