ಗಂಗಾವತಿ: ಸರ್ಕಾರಿ ಇಲಾಖೆಗಳ ಸಿಬ್ಬಂದಿಗಳು ಇಲಾಖೆಗಳಿಗೆ ಸಂಬಂಧಿಸಿದ ಸಾರ್ವಜನಿಕರ ಸಣ್ಣ-ಪುಟ್ಟ ಸಮಸ್ಯೆಗಳನ್ನು ತಮ್ಮ ಹಂತದಲ್ಲೇ ಪರಿಹರಿಸಿ, ಲೋಕಾಯುಕ್ತದವರೆಗೆ ದೂರುಗಳು ಬರದಂತೆ ಕೆಲಸ ನಿರ್ವಹಿಸಬೇಕು ಎಂದು ಕೊಪ್ಪಳ ಲೋಕಾಯುಕ್ತ ಡಿವೈಎಸ್ಸಿ ಸಲೀಂ ಪಾಷ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಮಂಥನ ಸಭಾಂಗಣದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಸಾರ್ವಜನಿಕರ ಕುಂದು-ಕೊರತೆಗಳ ಮತ್ತು ಅಹವಾಲುಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಗಂಗಾವತಿ ತಾಲ್ಲೂಕಿನ ಕೆಲಸ ಸರ್ಕಾರಿ ಇಲಾಖೆಗಳಲ್ಲಿನ ಸಿಬ್ಬಂದಿ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಅಧಿಕಾರಿಗಳು ಅವರ ಕೆಲಸವನ್ನು ಸಾಧ್ಯವಾದರೆ ಸ್ಥಳದಲ್ಲೇ ಪರಿಹರಿಸಿಕೊಡಬೇಕು. ಯಾವುದೇ ಕಾರಣಕ್ಕೂ ಕಾಲಹರಣ ಮಾಡುವಂತಿಲ್ಲ.
‘ಈಚೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಲೋಕಾಯುಕ್ತರ ಹೆಸರಿನಲ್ಲಿ ಕೆಲವರು ಭ್ರಷ್ಟಾಚಾರಕ್ಕಾಗಿ ಫೋನ್ ಕರೆ ಮಾಡುತ್ತಿರುವ ಎಂಬ ಮಾಹಿತಿ ತಿಳಿದು ಬಂದಿದೆ. ಅಂತಹವರ ಮಾಹಿತಿ ತಿಳಿದು ಬಂದರೆ ಅಧಿಕಾರಿಗಳು ಅವರ ವಿರುದ್ದ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ’ ಎಂದು ಸೂಚಿಸಿದರು.
ನಂತರ ನಿವೃತ್ತ ಶಿಕ್ಷಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯ, ಅಂಗನವಾಡಿ ಕೇಂದ್ರದಲ್ಲಿ ಅಕ್ರಮ, ನಗರಸಭೆ ನಿವೇಶನ ಹಂಚಿಕೆ, ವಡ್ಡರಹಟ್ಟಿ ಗ್ರಾಮದಲ್ಲಿ ಜಮೀನು ಅಕ್ರಮ ಎನ್. ಎ ರದ್ದತಿ, ನಗರದ 30ನೇ ವಾರ್ಡಿನ ಮಹಿಳೆಯ 10 ಅಡಿ ಜಾಗ ಒತ್ತುವರಿ, ಸಿಎಲ್ 2, ಸಿಎಲ್ 7 ಮದ್ಯದಂಗಡಿ ಅಬಕಾರಿ ನಿಯಮ ಉಲ್ಲಂಘನೆ ಸೇರಿ 16 ದೂರುಗಳು ಸಲ್ಲಿಕೆ ಆದವು.
ಇವುಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ಪರಿಹಾರ ಒದಗಿಸಲಾಗುತ್ತದೆ ಎಂದು ಸಾರ್ವಜನಿಕರಿಗೆ ಸಲೀಂ ಭರವಸೆ ನೀಡಿದರು.
ತಹಶೀಲ್ದಾರ್ ಮಂಜುನಾಥ, ತಾ.ಪಂ ಇಒ ಲಕ್ಷ್ಮೀದೇವಿ, ನಗರಸಭೆ ಪೌರಾಯುಕ್ತ ಆರ್. ವಿರೂಪಾಕ್ಷ ಮೂರ್ತಿ, ಗ್ರಾಮೀಣ ಠಾಣೆ ಪಿಐ ಮಂಜುನಾಥ, ಶಿವರಾಜ ಮೇಟಿ, ವಿಜಯಕುಮಾರ, ಶರಣಮ್ಮ, ಮಹೇಶ ಹಿರೇಮಠ, ಮಲ್ಲಿಕಾರ್ಜುನ, ರಾಜಶೇಖರ, ಲಕ್ಷ್ಮಿಬಾಯಿ, ಶ್ರೀನಿವಾಸ ನಾಯಕ, ಗೋಪಾಲ್ ಧೂಪದ್, ಬಸವರಾಜಗೌಡ ಸೇರಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.