ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆ ಈಡೇರಿಸಿದ ಮೋದಿ ಸರ್ಕಾರ: ಸಂಸದ ಸಂಗಣ್ಣ ಕರಡಿ

ಪಾಸ್ ಪೋರ್ಟ್ ಸೇವಾ ಕೇಂದ್ರ ಚಾಲನೆ
Last Updated 25 ಜನವರಿ 2019, 15:12 IST
ಅಕ್ಷರ ಗಾತ್ರ

ಕೊಪ್ಪಳ: 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಾರಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಗುರುವಾರ ಬಜಾರ್ ಅಂಚೆ ಇಲಾಖೆ ಕಚೇರಿಯಲ್ಲಿ ಆರಂಭಿಸಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಈ ಭಾಗದ ರೈಲ್ವೆ, ಹೆದ್ದಾರಿ ಕಾಮಗಾರಿ ಸೇರಿದಂತೆ ಅನೇಕ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಕಾರ್ಯಾರಂಭ ಮಾಡುತ್ತಿವೆ. ಇದು ನಮ್ಮ ಸರ್ಕಾರದ ಆಡಳಿತ ಮತ್ತು ಜನಪರ ಯೋಜನೆ ಅನುಷ್ಠಾನಗೊಳಿಸುವಲ್ಲಿ ತೋರಿಸಿದ ಬದ್ಧತೆಯಾಗಿದೆ. ಸಾಮಾನ್ಯ ಮನುಷ್ಯನು ಕೂಡಾ ವಿದೇಶ ಪ್ರವಾಸಕ್ಕೆ ತೆರಳಬೇಕು ಎಂಬ ಆಶಯದೊಂದಿಗೆ ಸೇವಾ ಕೇಂದ್ರವನ್ನು ಹಿಂದುಳಿದ ಭಾಗದಲ್ಲಿ ಸ್ಥಾಪನೆ ಮಾಡಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.

'ಅಧಿಕಾರ ಶಾಶ್ವತವಲ್ಲ. ಎಲ್ಲರೂ ಒಂದು ದಿನ ಮಾಜಿ ಆಗುವವರೆ. ಮಾಜಿ ಆಗುವ ಮುಂಚೆ ನಾವು ಜನಕ್ಕೆ ಒಳ್ಳೆಯ ಕೆಲಸ ಮಾಡಿದ ತೃಪ್ತಿ ಇರಬೇಕು. ಈ ಹಿಂದಿನ ಕೆಲ ಸಂಸದರು ತಮ್ಮ ಇಲಾಖೆ ವ್ಯಾಪ್ತಿಗೆ ಅಂಚೆ ಕಚೇರಿ ಕೂಡಾ ಬರುತ್ತದೆ ಎಂಬ ಪರಿಜ್ಞಾನವಿಲ್ಲದೆ. ಇಂತಹ ಸಣ್ಣ, ಸಣ್ಣ ಕೆಲಸಕ್ಕೆ ಫೋನ್ ಮಾಡಬೇಡಿ ಎಂದು ಹೇಳಿದ್ದು, ಈಗಲೂ ನೆನಪಿದೆ' ಎಂದರು.

ಪ್ರಧಾನಿ ಅವರು ಅಂಚೆ ಕಚೇರಿಗೆ ಆಧುನಿಕ ಸ್ಪರ್ಶ ನೀಡಿದ್ದಾರೆ. ರಾಜ್ಯ ಸರ್ಕಾರ ಸಂಪೂರ್ಣ ಸಹಯೋಗ ನೀಡುವ ಮೂಲಕ ಇಲಾಖೆ ಕೆಲಸಕ್ಕೆ ಸಹಕರಿಸಬೇಕು. ಜೀವವಿಮೆ, ಪತ್ರ, ತಂತಿ ಸೇವೆ, ಬ್ಯಾಂಕಿಂಗ್, ಸರ್ಕಾರದ ಮಾಸಾಶನಗಳನ್ನು ವಿತರಿಸುವುದು ಸೇರಿದಂತೆ ಈಗ ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭಿಸಿದ್ದು, ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕನಸಿನ ಉಡಾನ್ ಯೋಜನೆ:

ಕೊಪ್ಪಳ ಭಾಗದಲ್ಲಿ ಉಡಾನ್ ಯೋಜನೆ ಕಾಲಮಿತಿಯೊಳಗೆ ಜಾರಿಗೆ ತರಬೇಕು ಎಂಬ ನಮ್ಮ ಬಹುದಿನದ ಆಶೆ ಇದೆ. ಈ ಕುರಿತು ಸಂಬಂಧಿಸಿದ ಇಲಾಖೆ ಜೊತೆ ಹಲವಾರು ಸಲ ಮಾತನಾಡಿದ್ದೇನೆ. ಈಗಾಗಲೇ ಇರುವ ಖಾಸಗಿ ಎಂಎಸ್‌ಪಿಎಲ್‌ ಕಂಪೆನಿಯ ನಿಲ್ದಾಣ ಬಳಸಿಕೊಂಡು ಸೇವೆ ನೀಡಬೇಕು ಎಂಬ ಸಂಕಲ್ಪ ಇದೆ. ಮುಖ್ಯವಾಗಿ ಶಾಸಕ ಹಿಟ್ನಾಳ, ಬಯ್ಯಾಪುರ, ಮುನವಳ್ಳಿ, ಆಚಾರ್, ದಡೇಸ್ಗೂರ ಅವರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಬೆಂಗಳೂರಿನಪ್ರಾದೇಶಿಕ ಪಾಸ್‌ಪೋರ್ಟ್ ಕೇಂದ್ರದ ಅಧಿಕಾರಿ ರಾಜೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಭಾಗದ ಸಂಸದರ ಒತ್ತಾಯದಿಂದ ಇಲ್ಲಿ ಕೇಂದ್ರ ತೆರೆಯಲಾಗಿದೆ ಎಂದರು.

ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮಾತನಾಡಿ, ಜಿಲ್ಲಾಡಳಿತದ ವತಿಯಿಂದ ನನೆಗುದಿಗೆ ಬಿದ್ದಿರುವ ಎಲ್ಲ ಕೆಲಸಗಳನ್ನು ಶೀಘ್ರದಲ್ಲಿ ಮಾಡುವ ಮೂಲಕ ರೈಲ್ವೆ, ಹೆದ್ದಾರಿ, ವಾಯುಸೇವೆಗೆ ಸಹಕಾರ ನೀಡುವುದಾಗಿ ತಿಳಿಸಿದರು.

ಉತ್ತರ ಕರ್ನಾಟಕ ಅಂಚೆ ಇಲಾಖೆ ನಿರ್ದೇಶಕ ಸಣ್ಣಾ ನಾಯ್ಕ, ಶಾಸಕರಾದ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಸವರಾಜ ಬಳ್ಳೊಳ್ಳಿ, ಸಿ.ವಿ.ಚಂದ್ರಶೇಖರ, ರಾಘವೇಂದ್ರ ಪಾನಘಂಟಿ, ಶಂಕರಗೌಡ ಹಿರೇಗೌಡ್ರ, ಅಪ್ಪಣ್ಣ ಪದಕಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ರಾಮಣ್ಣ ಚೌಡ್ಕಿ, ಗವಿಸಿದ್ಧಪ್ಪ ಕರಡಿ, ಡಿವೈಎಸ್‌ಪಿ ಸಂದಿಗವಾಡ, ಅಂದಪ್ಪ ಜವಳಿ, ನಗರಸಭೆ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT