ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವಣಗಿತ್ತಿಯಾದ ನಗರ, ಎಲ್ಲೆಲ್ಲೂ ಹಬ್ಬದ ಸಡಗರ

Last Updated 2 ಫೆಬ್ರುವರಿ 2018, 9:32 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನೂತನ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದು 10 ವರ್ಷಗಳನ್ನು ಪೂರೈಸಿರುವ ಪ್ರಯುಕ್ತ ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಶುಕ್ರವಾರದಿಂದ (ಫೆ.2) ಮೂರು ದಿನಗಳ ಕಾಲ ಅದ್ಧೂರಿಯಾಗಿ ‘ಜಿಲ್ಲಾ ದಶಮಾನೋತ್ಸವ’
ಹಮ್ಮಿಕೊಂಡಿದೆ.

ದಶಮಾನೋತ್ಸವ ಅಂಗವಾಗಿ ನಗರವನ್ನು ಉತ್ಸವ ಲಾಂಛನ ಪತಾಕೆಗಳ ತೋರಣದಿಂದ ಅಲಂಕರಿಸಲಾಗಿದ್ದು, ನಗರದ ಪ್ರಮುಖ ರಸ್ತೆಯಾದ ಬಿ.ಬಿ.ರಸ್ತೆ ಮತ್ತು ಉತ್ಸವದ ಮುಖ್ಯ ವೇದಿಕೆ ಇರುವ ಸರ್‌.ಎಂ.ವಿ ಜಿಲ್ಲಾ ಕ್ರೀಡಾಂಗಣದ ರಸ್ತೆಯನ್ನು ಅಚ್ಚುಕಟ್ಟಾಗಿ ಸ್ವಚ್ಛಗೊಳಿಸಿ, ಬಗೆ ಬಗೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಜಿಲ್ಲಾ ಕ್ರೀಡಾಂಗಣದಲ್ಲಿ ಹೊಯ್ಸಳ, ವಿಜಯನಗರ ವಾಸ್ತುಶೈಲಿಯ ವಿನ್ಯಾಸದೊಂದಿಗೆ 60*40 ಚದರಡಿಯ ಮುಖ್ಯ ವೇದಿಕೆಯನ್ನು ಸಿದ್ಧಪಡಿಸಲಾಗಿದ್ದು,
ಮೈದಾನದಲ್ಲಿ 250 ಅತಿಗಣ್ಯರ ಆಸನಗಳು, 1000 ಗಣ್ಯರ ಆಸನಗಳು ಮತ್ತು ಸಾರ್ವಜನಿಕರಿಗಾಗಿ 5,000 ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಪಾರಂಪರಿಕ ನಡಿಗೆಯೊಂದಿಗೆ ಆರಂಭ

ಶುಕ್ರವಾರ ಬೆಳಿಗ್ಗೆ 6.30ಕ್ಕೆ ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಸಾಂಕೇತಿಕವಾಗಿ ದಶಮಾನೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಅಲ್ಲಿಂದ ಸುಲ್ತಾನ್‌ಪೇಟೆ ಬಳಿ ಇರುವ ನಂದಿ ಬೆಟ್ಟದ ನಡಿಗೆ ಮಾರ್ಗದ ಮೂಲಕ ‘ನಂದಿಗಿರಿ ಪಾರಂಪರಿಕ ನಡಿಗೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇದಕ್ಕೆ ಶಾಸಕ ಡಾ.ಕೆ.ಸುಧಾಕರ್ ಚಾಲನೆ ನೀಡಲಿದ್ದಾರೆ. ಇದರಲ್ಲಿ ಜಿಲ್ಲಾ ಮಟ್ಟ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ಸಂಘ, ಸಂಸ್ಥೆಗಳ ಕಾರ್ಯಕರ್ತರು, ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ನಂದಿಬೆಟ್ಟ ಏರಲಿದ್ದಾರೆ.

ಮಧ್ಯಾಹ್ನ 3ಗೆ ಮಿನಿ ವಿಧಾನಸೌಧದಿಂದ (ತಾಲ್ಲೂಕು ಕಚೇರಿ) ಸರ್.ಎಂ.ವಿ ಕ್ರೀಡಾಂಗಣದ ವರೆಗೆ ವಿವಿಧ ಕಲಾತಂಡಗಳು, ಪೊಲೀಸ್ ಬ್ಯಾಂಡ್, ನಾಲ್ಕು ಶಾಲೆಗಳ ವಿದ್ಯಾರ್ಥಿಗಳ ಬ್ಯಾಂಡ್ ತಂಡಗಳು, ಕಳಸ ಹೊತ್ತ ಮಹಿಳೆಯರು, 15 ಇಲಾಖೆಗಳ ಸ್ತಬ್ಧ ಚಿತ್ರಗಳ ಮೆರವಣಿಗೆ ಜಾಥಾಗೆ ಸಂಸದ ವೀರಪ್ಪ ಮೊಯಿಲಿ ಅವರು ಚಾಲನೆ ನೀಡಲಿದ್ದಾರೆ.

ಕ್ರೀಡಾಂಗಣದಲ್ಲಿ ಸಿದ್ಧಪಡಿಸಿರುವ ಮುಖ್ಯ ವೇದಿಕೆಯಲ್ಲಿ ಸಂಜೆ 4ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ‘ಜಿಲ್ಲಾ ದಶಮಾನೋತ್ಸವ’ಕ್ಕೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಸಂಸದ ಎಂ.ವೀರಪ್ಪ ಮೊಯಿಲಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಶಾಸಕ ಎಂ.ರಾಜಣ್ಣ ಅವರು ಪ್ರವಾಸೋದ್ಯಮ ಕೈಪಿಡಿ ಬಿಡುಗಡೆ ಮಾಡಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಸದ ಕೆ.ಎಚ್ ಮುನಿಯಪ್ಪ ಅವರು ಚಾಲನೆ ನೀಡಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಎಂ. ಖರ್ಗೆ, ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ಡಾ.ಕೆ ಸುಧಾಕರ್, ವಿಧಾನ ಪರಿಷತ್ ಸದಸ್ಯರಾದ ಸಿ.ಆರ್ ಮನೋಹರ್, ರಮೇಶ್ ಬಾಬು, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆವಾಣಿ ಕೃಷ್ಣಾರೆಡ್ಡಿ,ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಎಂ. ಮುನಿಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಅವರು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸ್ಥಳೀಯ ಕಲಾವಿದರಿಗೂ ಆದ್ಯತೆ

ಮೂರು ದಿನಗಳ ಕಾಲ ನಿತ್ಯ ಸಂಜೆ 6 ಗಂಟೆಯಿಂದ ರಾತ್ರಿ 12ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮುಖ್ಯ ವೇದಿಕೆಯಲ್ಲಿ ಪ್ರತಿ ದಿನ ಸಂಜೆ 4 ರಿಂದ ರಾತ್ರಿ 7ರ ವರೆಗೆ ಸ್ಥಳೀಯ ಕಲಾವಿದರಿಗೆ ಜಿಲ್ಲೆಯ ಮುಖ್ಯ ಕಲಾ ಪ್ರಕಾರಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ಬಳಿಕ ರಾಜ್ಯ ಮತ್ತು ವಿವಿಧ ರಾಜ್ಯಗಳ ಕಲಾವಿದರ ಕಾರ್ಯಕ್ರಮಗಳು ನಡೆಯಲಿವೆ.

ತಿಂಡಿ ಪ್ರಿಯರಿಗೆ ‘ಹಬ್ಬ’

ದಶಮಾನೋತ್ಸವದ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದ ಬಳಿ ಸುಮಾರು 100 ಮಳಿಗೆಗಳನ್ನು ತೆರೆಯಲಾಗಿದೆ. ಅವುಗಳಲ್ಲಿ ಸುಮಾರು 20 ಮಳಿಗೆಗಳು ಆಹಾರ ಪದಾರ್ಥಗಳು, ತಿಂಡಿ, ತಿನಿಸುಗಳಿಗೆ ಮೀಸಲಾಗಿ ಇಡಲಾಗಿದೆ. ಹೀಗಾಗಿ ಉತ್ಸವದ ಮೂರು ದಿನಗಳು ಜಿಲ್ಲಾ ಕ್ರೀಡಾಂಗಣದ ಬಳಿ ಆಹಾರ ಪ್ರಿಯರ ಜಿಹ್ವಾ ಚಾಪಲ್ಯ ತಣಿಸುವ ಬಗೆ ಬಗೆ ಖಾದ್ಯಗಳ ಮಾರಾಟ ಭರಪೂರ ನಡೆಯಲಿದೆ. ಉಳಿದಂತೆ 80 ಮಳಿಗೆಗಳಲ್ಲಿ ಬಟ್ಟೆ, ಕರಕುಶಲವಸ್ತುಗಳು, ಗುಡಿಕೈಗಾರಿಕೆ ಉತ್ಪನ್ನಗಳು, ಕೃಷಿ ಉಪಕರಣಗಳು, ಗೃಹೋಪಯೋಗಿ ವಸ್ತುಗಳು, ಪುಸ್ತಕ ಮಳಿಗೆಗಳು, ವಿವಿಧ ಇಲಾಖೆಗಳ ಮಳಿಗೆಗಳು ಇರಲಿವೆ.

ಮನಸೆಳೆಯುವ ಫಲಪುಷ್ಪ ಪ್ರದರ್ಶನ

ದಶಮಾನೋತ್ಸವ ಮೂರು ದಿನಗಳ ಕಾಲವೂ ಜಿಲ್ಲಾಡಳಿತ ಫಲಪುಷ್ಪ ಪ್ರದರ್ಶನ ನಡೆಸಲು ನಿರ್ಧರಿಸಿದ್ದು, ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ವಸತಿ ಶಾಲೆಯ ಸಮೀಪ ಅದಕ್ಕಾಗಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಘು ಅವರ ನೇತೃತ್ವದಲ್ಲಿ ಭರದ ಸಿದ್ಧತೆ ನಡೆದಿದೆ. ಆಗ್ರಾದ ತಾಜ್‌ಮಹಲ್‌, ಇಟಲಿಯ ಪೀಸಾ ಗೋಪುರ, ರೋಮನ್‌ ಕಲೋಸಿಯಂ, ಈಜಿಪ್ಟ್‌ನ ಪಿರಮಿಡ್‌, ಫ್ರಾನ್ಸ್‌ನ ಐಫಲ್‌ ಗೋಪುರ, ಬ್ರೆಸಿಲ್‌ನ ಕ್ರೈಸ್ಟ್ ದಿ ರಿಡೀಮರ್ ಹಾಗೂ ಚೀನಾದ ಮಹಾಗೋಡೆ ಪ್ರತಿಕೃತಿಗಳು ಮೈದಾನದಲ್ಲಿ ಹೂವಿನಲ್ಲಿ ಮೈದಳೆದಿವೆ.

ಮೂರು ದಿನ ಪ್ಯಾರಾಸೇಲಿಂಗ್, ಜಲಸಾಹಸ ಕ್ರೀಡೆಗಳು

ದಶಮಾನೋತ್ಸವ ಆಚರಣೆ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ ಸಹಯೋಗದಲ್ಲಿ ಜಿಲ್ಲಾಡಳಿತ ಮೂರು ದಿನ ಕಂದವಾರ ಕೆರೆಯಲ್ಲಿ ಪ್ಯಾರಾಸೇಲಿಂಗ್ ಮತ್ತು ಶ್ರೀನಿವಾಸ ಸಾಗರ ಕೆರೆಯಲ್ಲಿ ಜಲಸಾಹಸ ಕ್ರೀಡೆಗಳನ್ನು ಆಯೋಜಿಸುತ್ತಿದೆ. ಈ ಸಾಹಸ ಕ್ರೀಡೆಗಳಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಶುಕ್ರವಾರ ಚಾಲನೆ ನೀಡಲಿದ್ದಾರೆ. ಈ ಎರಡೂ ಕ್ರೀಡೆಗಳು ಬೆಳಿಗ್ಗೆ 9 ರಿಂದ ಸಂಜೆ 6ರ ವರೆಗೆ ಸಾರ್ವಜನಿಕರಿಗೆ ಲಭ್ಯವಿರುತ್ತವೆ.

ಅಂಬೇಡ್ಕರ್ ಭವನದಲ್ಲಿ ವಿಚಾರ ಗೋಷ್ಠಿ

ದಶಮಾನೋತ್ಸವ ನಡೆಯುವ ಮೂರು ದಿನಗಳ ಕಾಲ ಅಂಬೇಡ್ಕರ್ ಭವನದಲ್ಲಿ ವಿವಿಧ ವಿಷಯಗಳ ಕುರಿತು ವಿಚಾರಗೋಷ್ಠಿ ಆಯೋಜಿಸಲಾಗಿದೆ. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ‘ಶಿಕ್ಷಣ ಮತ್ತು ಸಾಹಿತ್ಯ’ ಎಂಬ ಮೊದಲ ವಿಚಾರ ಗೋಷ್ಠಿಗೆ ವಿಧಾನ ಪರಿಷತ್ ಸದಸ್ಯ ಆರ್.ಚೌಡರೆಡ್ಡಿ ತೂಪಲ್ಲಿ ಅವರು ಚಾಲನೆ ನೀಡಲಿದ್ದಾರೆ.

ಗೋಷ್ಠಿಯಲ್ಲಿ ಮೈಸೂರಿನ ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಎಸ್.ತುಕಾರಾಂ, ಚಿಂತಕ ಸ.ರಘುನಾಥ್, ಚಿಂತಾಮಣಿ ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಎನ್‌.ರಘು, ಕೋಲಾರದ ಶಾಸನ ತಜ್ಞ ವಿ.ಎಸ್‌.ಎಸ್‌.ಶಾಸ್ತ್ರಿ ಅವರು ಉಪನ್ಯಾಸ ನೀಡಲಿದ್ದಾರೆ. ಶಿಕ್ಷಣ ತಜ್ಞ ಪ್ರೊ.ಕೋಡಿರಂಗಪ್ಪ ಅವರು ಆಶಯ ನುಡಿಗಳನ್ನು ಆಡಲಿದ್ದು, ಚಿಂತಕ ಪ್ರೊ.ಬಿ.ಗಂಗಾಧರಮೂರ್ತಿ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.

ಹಾಲು ಕರೆಯುವ ಸ್ಪರ್ಧೆಗೆ ಚಾಲನೆ

ದಶಮಾನೋತ್ಸವ ಪ್ರಯುಕ್ತ ನಗರದ ಎಂ.ಜಿ.ರಸ್ತೆಯಲ್ಲಿರುವ ಜೈ ಭೀಮ್ ಪದವಿ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಎರಡು ದಿನ ಹಸುವಿನ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ. ಶುಕ್ರವಾರ ಸಂಜೆ 5 ಗಂಟೆಗೆ ಈ ಸ್ಪರ್ಧೆಗೆ ಶಾಸಕ ಎಂ.ಕೃಷ್ಣಾರೆಡ್ಡಿ ಅವರು ಚಾಲನೆ ನೀಡಲಿದ್ದಾರೆ.

ವಿಶೇಷ ಬಸ್‌ ವ್ಯವಸ್ಥೆ

ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಬರುವ ಜನರ ಅನುಕೂಲಕ್ಕಾಗಿ ಜಿಲ್ಲಾಡಳಿತ ಕೆಎಸ್‌ಆರ್‌ಟಿಸಿ ವತಿಯಿಂದ ಬಸ್‌ ವ್ಯವಸ್ಥೆ ಮಾಡಿಸಿದೆ. ಸಂಚಾರ ಮಾರ್ಗ ಬದಲಾವಣೆ

ಜಿಲ್ಲಾ ಕ್ರೀಡಾಂಗಣದಲ್ಲಿ ದಶಮಾನೋತ್ಸವ ಉದ್ಘಾಟನೆ ನಡೆಯುವ ಕಾರಣಕ್ಕೆ ಪೊಲೀಸ್ ಇಲಾಖೆ ಶುಕ್ರವಾರ ಸಂಜೆ 4 ರಿಂದ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಮುಗಿಯುವ ವರೆಗೆ ಕೆಳಗಿನ ತೋಟಗಳಿಗೆ ಹೋಗುವ ದಾರಿಯಲ್ಲಿ ವಾಹನಗಳ ಸಂಚಾರ ನಿಷೇಧಿಸಿದೆ. ನಗರದ ಜೂನಿಯರ್ ಕಾಲೇಜು ಮೈದಾನ, ಡಿಡಿಪಿಐ ಕಚೇರಿ ಆಚರಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ದಶಮಾನೋತ್ಸವದಲ್ಲಿ ಇಂದು..

ಬೆಳಿಗ್ಗೆ 6: ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮ
ಬೆಳಿಗ್ಗೆ 6.30: ಸುಲ್ತಾನ್‌ ಪೇಟೆ ಬಳಿ ಇರುವ ಕಾಲುದಾರಿ ಮಾರ್ಗದ ಮೂಲಕ ‘ನಂದಿಗಿರಿ ಪಾರಂಪರಿಕ ನಡಿಗೆ’ಯ ಮೂಲಕ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಾರ್ವಜನಿಕರ ಕಾಲ್ನಡಿಗೆ ಕಾರ್ಯಕ್ರಮ.
ಬೆಳಿಗ್ಗೆ 9: ಕಂದವಾರ ಕೆರೆಯಲ್ಲಿ ಪ್ಯಾರಾಸೇಲಿಂಗ್ ಮತ್ತು ಶ್ರೀನಿವಾಸ ಸಾಗರ ಕೆರೆಯಲ್ಲಿ ಜಲಸಾಹಸ ಕ್ರೀಡೆಗಳಿಗೆ ಚಾಲನೆ
ಬೆಳಿಗ್ಗೆ 11: ಅಂಬೇಡ್ಕರ್ ಭವನದಲ್ಲಿ ವಿಚಾರ ಗೋಷ್ಠಿ
ಮಧ್ಯಾಹ್ನ 3: ಮಿನಿ ವಿಧಾನಸೌಧ (ತಾಲ್ಲೂಕು ಕಚೇರಿ) ಜಿಲ್ಲಾ ಕ್ರೀಡಾಂಗಣದ ವರೆಗೆ ಮೆರವಣಿಗೆ ಜಾಥಾ
ಮಧ್ಯಾಹ್ನ 4: ಜಿಲ್ಲಾ ಕ್ರೀಡಾಂಗಣದಲ್ಲಿರುವ ಮುಖ್ಯ ವೇದಿಕೆಯಲ್ಲಿ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟನೆ ಮತ್ತು ಸ್ಮರಣ ಸಂಚಿಕೆ ಬಿಡುಗಡೆ
ಸಂಜೆ 5: ನಗರದ ಎಂ.ಜಿ.ರಸ್ತೆಯಲ್ಲಿರುವ ಜೈ ಭೀಮ್ ಪದವಿ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಹಸುವಿನ ಹಾಲು ಕರೆಯುವ ಸ್ಪರ್ಧೆಗೆ ಚಾಲನೆ
ಸಂಜೆ 6: ವಿನಯ್‌ ನಾಡಿಗ್ ಮತ್ತು ತಂಡದವರಿಂದ ಸುಗಮ ಸಂಗೀತ
ರಾತ್ರಿ 7: ‘ಪ್ರಿನ್ಸ್ ಡ್ಯಾನ್ಸ್ ಅಕಾಡೆಮಿ’ ತಂಡದಿಂದ ನೃತ್ಯ ಪ್ರದರ್ಶನ
ರಾತ್ರಿ 7.45: ‘ಬೀಟ್ ಗುರೂಸ್’ ತಂಡದವರಿಂದ ಪಾಪ್‌ ಸಂಗೀತ ಗೋಷ್ಠಿ.
ರಾತ್ರಿ 8.30: ಪ್ರಹ್ಲಾದ್ ಆಚಾರ್ಯ ಅವರಿಂದ ಮರಳು ಮತ್ತು ನೆರಳು ಕಲೆಯ ಪ್ರದರ್ಶನ.
ರಾತ್ರಿ 9: ‘ಪ್ರಭಾತ್’ ತಂಡದ ಕಲಾವಿದರಿಂದ ನಾಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT