ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಓದಲು–ಬರೆಯಲು ಬಾರದಿದ್ದರೂ ಶೇ 99ರಷ್ಟು ಅಂಕ ಪಡೆದ ಪ್ರಕರಣ; ಪೊಲೀಸ್ ತನಿಖೆ ಚುರುಕು

ಸಂದರ್ಶನದಲ್ಲಿ ಎರಡನೇ ಸ್ಥಾನ ಪಡೆದಿದ್ದ ಕೊಪ್ಪಳದ ಪ್ರಭು ಲೋಕರೆ
Published 24 ಮೇ 2024, 0:45 IST
Last Updated 24 ಮೇ 2024, 0:45 IST
ಅಕ್ಷರ ಗಾತ್ರ

ಕೊಪ್ಪಳ: ಸರಿಯಾಗಿ ಓದಲು ಹಾಗೂ ಬರೆಯಲು ಬಾರದಿದ್ದರೂ ಕೊಪ್ಪಳದ ಪ್ರಭು ಲೋಕರೆ ಎಸ್‌ಎಸ್‌ಎಲ್‌ಸಿ ಬೋರ್ಡ್‌ ಪರೀಕ್ಷೆಯಲ್ಲಿ ಶೇ 99.52ರಷ್ಟು ಫಲಿತಾಂಶ ಪಡೆದು ನ್ಯಾಯಾಲಯದಲ್ಲಿ ಜವಾನನ ಹುದ್ದೆ ಗಿಟ್ಟಿಸಿಕೊಂಡ ಆರೋಪದ ಬಗ್ಗೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸದ ನೇಮಕಾತಿಗೆ ನಡೆದ ಸಂದರ್ಶನದಲ್ಲಿ ಪ್ರಭು 9.4 ಅಂಕಗಳನ್ನು ಪಡೆದು ಕಲ್ಯಾಣ ಕರ್ನಾಟಕ ವಿಭಾಗದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾನೆ. ಮೊದಲ ಸ್ಥಾನದಲ್ಲಿರುವ ಗಿರೀಶ್‌ ಗೌಡ ಕೆ. ಎಂಬುವರು 9.5 ಅಂಕಗಳನ್ನು ಪಡೆದಿದ್ದರೆ, ಎರಡನೇ ಸ್ಥಾನ ಪ್ರಭು ಅವರದ್ದೇ ಇದೆ.

ದಾಖಲೆಗೆ ಕಸರತ್ತು: ಪ್ರಭು ಅವರು ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಿಂದ ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಯ ಪ್ರಮಾಣಪತ್ರ ಪಡೆದಿರುವುದಾಗಿ ಹೇಳಿದ್ದರು. ‘ಪ್ರಭು ದಾಖಲೆ ಪಡೆದಿದ್ದಾಗಿ ಕೇಳುತ್ತಿರುವ ಸೋಷಿಯಲ್‌ ಡೆವಲಪ್‌ಮೆಂಟ್‌ ಆ್ಯಂಡ್ ಎಜುಕೇಷನ್‌ ಸೊಸೈಟಿ ಶಿಕ್ಷಣ ಸಂಸ್ಥೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿಲ್ಲ’ ಎಂದು ಅಲ್ಲಿನ ಅಧಿಕಾರಿಗಳು ವರದಿ ನೀಡಿದ್ದಾರೆ.

ಆದ್ದರಿಂದ ಪೊಲೀಸರು ಪ್ರಕರಣದ ಆಳಕ್ಕೆ ಇಳಿದು ತನಿಖೆಗೆ ಮುಂದಾಗಿದ್ದಾರೆ. ದಾಖಲೆಗಳ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದು ಕೆಲ ದಿನಗಳಲ್ಲಿ ಪ್ರಭು ಅವರನ್ನು ಕರೆಯಿಸಿ ಓದುವುದು ಹಾಗೂ ಬರೆಯಲು ಬರುತ್ತದೆಯೇ ಎನ್ನುವುದರ ಬಗ್ಗೆ ಪೊಲೀಸ್‌ ಠಾಣೆಯಲ್ಲಿಯೇ ಪರೀಕ್ಷೆ ಮಾಡಲು ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

‘ಪ್ರಭು ಮೇಲಿರುವ ಆರೋಪದ ಸತ್ಯಾಸತ್ಯತೆ ಬಗ್ಗೆ ವಿಚಾರಣೆ ನಡೆಯುತ್ತಿದೆ. ದಾಖಲೆಗಳ ಸಂಗ್ರಹವಾಗುತ್ತಿದೆ. ಪ್ರಮಾಣ ಪತ್ರ ನೀಡಿದ ಸಂಸ್ಥೆ ಬಗ್ಗೆಯೂ ಮಾಹಿತಿ ಸಂಗ್ರಹವಾಗುತ್ತಿದ್ದು, 10ರಿಂದ 15 ದಿನಗಳಲ್ಲಿ ಎಲ್ಲ ವಿಚಾರವೂ ಬಹಿರಂಗವಾಗಲಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಭು ವಿದ್ಯಾಭ್ಯಾಸದ ಬಗ್ಗೆ  ಕೊಪ್ಪಳದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಇದರ ಅನ್ವಯ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT